ADVERTISEMENT

ಆಟೊ ಚಾಲಕನ ಹತ್ಯೆ: ಪತ್ನಿ, ಪ್ರಿಯಕರ ಬಂಧನ

​ಪ್ರಜಾವಾಣಿ ವಾರ್ತೆ
Published 17 ಜನವರಿ 2018, 19:34 IST
Last Updated 17 ಜನವರಿ 2018, 19:34 IST

ಬೆಂಗಳೂರು: ಆಟೊ ಚಾಲಕ ಮಹೇಶ್‌ ಶಿಂಧೆ (38) ಕೊಲೆ ಪ್ರಕರಣವನ್ನು ಭೇದಿಸಿರುವ ಹುಳಿಮಾವು ಪೊಲೀಸರು, ಅವರ ಪತ್ನಿ ದೀಪಾಲಿ (31) ಹಾಗೂ ಆಕೆಯ ಪ್ರಿಯಕರ ರಾಜ್‌ ಕುಮಾರ್‌ (25) ಎಂಬಾತನನ್ನು ಬಂಧಿಸಿದ್ದಾರೆ.

ಜ. 8ರಂದು ಕತ್ತು ಹಿಸುಕಿ ಮಹೇಶ್‌ ಅವರನ್ನು ಕೊಲೆ ಮಾಡಿದ್ದ ಆರೋಪಿಗಳು, ಅಸಹಜ ಸಾವು ಎಂದು ನಾಟಕವಾಡಿದ್ದರು. ಸ್ಥಳೀಯು ನೀಡಿದ ಮಾಹಿತಿಯಂತೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು. ಶವದ ಮರಣೋತ್ತರ ಪರೀಕ್ಷೆ ವರದಿ ಬಂದಾಗ ಅದು ಕೊಲೆ ಎಂಬುದು ಗೊತ್ತಾಗಿದೆ.

ಮಹಾರಾಷ್ಟ್ರದ ಮಹೇಶ್‌ ಹಾಗೂ ದೀಪಾಲಿ, 13 ವರ್ಷಗಳ ಹಿಂದೆ ಮದುವೆಯಾಗಿದ್ದರು. 10 ವರ್ಷಗಳ ಹಿಂದೆ ಕೆಲಸ ಹುಡುಕಿಕೊಂಡು ನಗರಕ್ಕೆ ಬಂದು ಹುಳಿಮಾವು ಬಳಿಯ ಕೆಂಪಮ್ಮ ಲೇಔಟ್‌ನಲ್ಲಿ ವಾಸವಿದ್ದರು. ಪತಿಯು ಆಟೊ ಓಡಿಸುತ್ತಿದ್ದರು. ಪತ್ನಿಯು ಗಾರ್ಮೆಂಟ್‌ ಕೆಲಸಕ್ಕೆ ಹೋಗುತ್ತಿದ್ದರು. ದಂಪತಿಗೆ ಇಬ್ಬರು ಮಕ್ಕಳು ಇದ್ದಾರೆ ಎಂದು ಪೊಲೀಸರು ತಿಳಿಸಿದರು.

ADVERTISEMENT

ಕೆಲಸದ ಸ್ಥಳದಲ್ಲಿ ದೀಪಾಲಿಗೆ ರಾಜ್‌ಕುಮಾರ್ ಪರಿಚಯವಾಗಿತ್ತು. ಅವರಿಬ್ಬರ ನಡುವೆ ಸಲುಗೆ ಬೆಳೆದು ಅನೈತಿಕ ಸಂಬಂಧ ಏರ್ಪಟ್ಟಿತ್ತು. ಚಿತ್ರದುರ್ಗದ ಆತ, ಆರು ತಿಂಗಳ ಹಿಂದಷ್ಟೇ ನಗರಕ್ಕೆ ಬಂದಿದ್ದ. ಬೇಗೂರು ಅಕ್ಷಯ ನಗರದಲ್ಲಿದ್ದ ಅಕ್ಕನ ಮನೆಯಲ್ಲಿ ಉಳಿದುಕೊಂಡು ಗಾರ್ಮೆಂಟ್‌ ಕೆಲಸಕ್ಕೆ ಹೋಗುತ್ತಿದ್ದ ಎಂದು ಮಾಹಿತಿ ನೀಡಿದರು.

ಸಂಜೆಯ ಕಾಯಂ ಅತಿಥಿ:

ನಿತ್ಯವೂ ಮಹೇಶ್‌, ಊಟದ ಡಬ್ಬಿ ಸಮೇತ ಬೆಳಿಗ್ಗೆ 8 ಗಂಟೆಗೆ ಮನೆ ಬಿಡುತ್ತಿದ್ದರು. ದೀಪಾಲಿ ಸಹ ಮಕ್ಕಳನ್ನು ಶಾಲೆಗೆ ಕಳುಹಿಸಿ ಬೆಳಿಗ್ಗೆ 10 ಗಂಟೆಗೆ ಗಾರ್ಮೆಂಟ್‌ಗೆ ಹೋಗುತ್ತಿದ್ದಳು. ಸಂಜೆ 4.30 ಗಂಟೆಗೆ ಮನೆಗೆ ಬರುತ್ತಿದ್ದ ಮಕ್ಕಳು, ಪುನಃ 5 ಗಂಟೆಗೆ ಮನೆಪಾಠಕ್ಕೆ ಹೋಗುತ್ತಿದ್ದರು. ಮಹೇಶ್‌ ಹಾಗೂ ಮಕ್ಕಳು, ರಾತ್ರಿ 8 ಗಂಟೆಗೆ ಮನೆಗೆ ಬರುತ್ತಿದ್ದರು ಎಂದು ತಿಳಿಸಿದರು.

ಸಂಜೆ 5 ಗಂಟೆಗೆ ಕೆಲಸ ಮುಗಿಯುತ್ತಿದ್ದಂತೆ ದೀಪಾಲಿ, ರಾಜ್‌ ಕುಮಾರ್‌ ಕರೆದುಕೊಂಡು ಮನೆಗೆ ಬರುತ್ತಿದ್ದಳು. ರಾತ್ರಿ 7 ಗಂಟೆಯವರೆಗೆ ಅವರಿಬ್ಬರು ಒಟ್ಟಿಗೆ ಇರುತ್ತಿದ್ದರು. ಬಳಿಕ ಆತ ಹೊರಟು ಹೋಗುತ್ತಿದ್ದ. ಆತ ಕಾಯಂ ಅತಿಥಿ ಆಗಿಬಿಟ್ಟಿದ್ದ ಎಂದರು.

ಮಂಚದ ಕೆಳಗೆ ಅಡಗಿದ್ದ:

ಜ. 8ರಂದು ಸಂಜೆ ದೀಪಾಲಿ ಹಾಗೂ ರಾಜ್‌ಕುಮಾರ್‌ ಮನೆಗೆ ಬಂದಿದ್ದರು. ಬೇಗನೇ ಕೆಲಸ ಮುಗಿದಿದ್ದರಿಂದ ರಾತ್ರಿ 7 ಗಂಟೆಗೆ ಮನೆಗೆ ಬಂದಿದ್ದ ಮಹೇಶ್‌ ಬಾಗಿಲು ಬಡಿದಿದ್ದರು. ಪತ್ನಿಯು ತಡವಾಗಿ ಬಾಗಿಲು ತೆರೆದಿದ್ದಳು. ಆಕೆ ಮೇಲೆ ಅನುಮಾನ ಬಂದಿದ್ದರಿಂದ ಮನೆಯಲ್ಲೆಲ್ಲ ಹುಡುಕಾಟ ನಡೆಸಿದ್ದರು. ಮಂಚದ ಕೆಳಗೆ ಅಡಗಿದ್ದ ರಾಜ್‌ಕುಮಾರ್‌ ಕಣ್ಣಿಗೆ ಬಿದ್ದಿದ್ದ ಎಂದು ತನಿಖಾಧಿಕಾರಿ ತಿಳಿಸಿದರು.

ಇಬ್ಬರೊಂದಿಗೆ ಜಗಳ ತೆಗೆದಿದ್ದ ಮಹೇಶ್‌, ಹಲ್ಲೆಗೂ ಮುಂದಾಗಿದ್ದ. ಆಗ ದೀಪಾಲಿ ಹಾಗೂ ರಾಜ್‌ಕುಮಾರ್ ಒಟ್ಟಾಗಿ ಅವರಿಗೆ ಹೊಡೆದಿದ್ದರು. ಮಂಚದ ಮೇಲೆ ಮಲಗಿಸಿ, ಕತ್ತು ಹಿಸುಕಿ ಕೊಂದಿದ್ದರು ಎಂದರು.

ಕೊಲೆ ನಂತರ ಪ್ರಿಯಕರ ಮನೆಯಿಂದ ಹೊರಟು ಹೋಗಿದ್ದ. ಮನೆಪಾಠ ಮುಗಿಸಿಕೊಂಡು ಮಕ್ಕಳು ಮನೆಗೆ ಬಂದಾಗ, ‘ಅಪ್ಪನಿಗೆ ಹುಷಾರಿಲ್ಲ. ಮಲಗಿದ್ದಾರೆ’ ಎಂದು ದೀಪಾಲಿ ಹೇಳಿದ್ದಳು. ರಾತ್ರಿ 9.30 ಗಂಟೆಗೆ ಮನೆಯಿಂದ ಹೊರಬಂದು ಕೂಗಾಡಿದ್ದ ಪತ್ನಿ, ‘ಗಂಡ ಮಾತನಾಡುತ್ತಿಲ್ಲ. ಮಲಗಿದ್ದಲ್ಲಿಂದ ಏಳುತ್ತಿಲ್ಲ’ ಎಂದು ಸ್ಥಳೀಯರನ್ನು ಸೇರಿಸಿದ್ದಳು ಎಂದು ಅವರು ತಿಳಿಸಿದರು.

ಸಹಾಯಕ್ಕೆ ಬಂದ ಸ್ಥಳೀಯರು, ವೈದ್ಯರನ್ನು ಕರೆಸಿ ತಪಾಸಣೆ ಮಾಡಿಸಿದ್ದರು. ಮಹೇಶ್‌ ಮೃತಪಟ್ಟಿರುವುದಾಗಿ ವೈದ್ಯರು ಹೇಳಿದ್ದರು ಎಂದರು.

ವರದಿ ನೋಡಿ ತಪ್ಪೊಪ್ಪಿಕೊಂಡರು:

‘ಸಾವಿನ ಸಂಬಂಧ ಹೇಳಿಕೆ ನೀಡಿದ್ದ ದೀಪಾಲಿ, ಪತಿ ವಿಪರೀತ ಕುಡಿಯುತ್ತಿದ್ದರು. ಜ.8ರಂದು ಕುಡಿದೇ ಮನೆಗೆ ಬಂದಿದ್ದರು. ಮಲಗಿದ್ದಲ್ಲೇ ಮೃತಪಟ್ಟಿದ್ದಾರೆ ಎಂದು ಹೇಳಿಕೆ ನೀಡಿದ್ದಳು. ಅದರನ್ವಯ ಅಸಹಜ ಸಾವು ಪ್ರಕರಣ ದಾಖಲಿಸಿಕೊಂಡಿದ್ದೆವು’ ಎಂದು ತನಿಖಾಧಿಕಾರಿಗಳು ತಿಳಿಸಿದರು.

‘ಕೆಲ ದಿನಗಳ ಬಳಿಕ ವೈದ್ಯರು ನೀಡಿದ್ದ ಮರಣೋತ್ತರ ಪರೀಕ್ಷೆ ವರದಿಯಲ್ಲಿ, ಕತ್ತು ಹಿಸುಕಿ ಕೊಲೆ ಮಾಡಲಾಗಿದೆ ಎಂಬ ಅಂಶವಿತ್ತು. ಆರೋಪಿಗಳಿಬ್ಬರನ್ನೂ ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದೆವು. ವರದಿ ನೋಡಿದ್ದ ಅವರು ತಪ್ಪೊಪ್ಪಿಕೊಂಡರು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.