ADVERTISEMENT

ಯಡಿಯೂರು: ಉದ್ಯಾನಗಳಿಗೆ ಸೌರ ಬೆಳಕು

2 ಕಿಲೋ ವಾಟ್‌ ಸಾಮರ್ಥ್ಯದ ಸೌರಫಲಕಗಳ ಅಳವಡಿಕೆ

ಎನ್.ನವೀನ್ ಕುಮಾರ್
Published 17 ಜನವರಿ 2018, 19:40 IST
Last Updated 17 ಜನವರಿ 2018, 19:40 IST
ಯಡಿಯೂರು: ಉದ್ಯಾನಗಳಿಗೆ ಸೌರ ಬೆಳಕು
ಯಡಿಯೂರು: ಉದ್ಯಾನಗಳಿಗೆ ಸೌರ ಬೆಳಕು   

ಬೆಂಗಳೂರು: ನಗರದ ಯಡಿಯೂರು ವಾರ್ಡ್‌ನಲ್ಲಿರುವ 12 ಉದ್ಯಾನಗಳು ಹಾಗೂ ಮೂರು ಮಾದರಿ ಪಾದಚಾರಿ ಮಾರ್ಗಗಳ ಇಕ್ಕೆಲದಲ್ಲಿ ಅಳವಡಿಸಿರುವ ವಿದ್ಯುದ್ದೀಪಗಳುಇನ್ನು ಸೌರಶಕ್ತಿಯಿಂದ ಬೆಳಗಲಿವೆ.

ಜಯನಗರ 3ನೇ ಬ್ಲಾಕ್‌ನಲ್ಲಿರುವ ಧನ್ವಂತರಿ ವನ ಹಾಗೂ ಸಂಜೀವಿನಿ ವನಗಳ ನಡುವೆ ಇರುವ ಜಾಗದಲ್ಲಿ ಬಿಬಿಎಂಪಿ ವತಿಯಿಂದ ₹15 ಲಕ್ಷ ವೆಚ್ಚದಲ್ಲಿ 2 ಕಿಲೋ ವಾಟ್‌ ಸಾಮರ್ಥ್ಯದ ಸೌರಶಕ್ತಿಯ ಫಲಕಗಳನ್ನು ಅಳವಡಿಸುವ ಕಾಮಗಾರಿ ಆರಂಭವಾಗಿದೆ.

‘ಉದ್ಯಾನಗಳ ವಿದ್ಯುದ್ದೀಪಗಳಿಗೆ ಸೌರಶಕ್ತಿ ಬಳಸುವುದರಿಂದ ಪಾಲಿಕೆಗೆ ಪ್ರತಿ ತಿಂಗಳು ₹1.75 ಲಕ್ಷ ಉಳಿತಾಯವಾಗಲಿದೆ. ಉದ್ಯಾನಗಳಿಗೆ ಸೌರಶಕ್ತಿ ಬಳಸಿಕೊಳ್ಳುತ್ತಿರುವ ಮೊದಲ ವಾರ್ಡ್‌ ನಮ್ಮದು’ ಎಂದು ಸ್ಥಳೀಯ ಪಾಲಿಕೆ ಸದಸ್ಯೆ ಪೂರ್ಣಿಮಾ ರಮೇಶ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ADVERTISEMENT

15 ಕಿಲೋ ವಾಟ್‌ ಮಾರಾಟ:

‘ವಾರ್ಡ್‌ನಲ್ಲಿ ಕಸದಿಂದ ವಿದ್ಯುತ್‌ ತಯಾರಿಸುವ ಜೈವಿಕ ಅನಿಲ ಘಟಕ ಸ್ಥಾಪಿಸಲಾಗಿದೆ. ಇಲ್ಲಿ ಪ್ರತಿದಿನ ಸುಮಾರು 20 ಕಿಲೋ ವಾಟ್‌ ವಿದ್ಯುತ್‌ ಉತ್ಪಾದಿಸಲಾಗುತ್ತಿದೆ. ಉದ್ಯಾನ ಹಾಗೂ ಕೆಲ ಕಟ್ಟಡಗಳಿಗೆ ಸುಮಾರು 8 ಕಿಲೋ ವಾಟ್‌ ವಿದ್ಯುತ್‌ ಬಳಕೆಯಾಗುತ್ತಿದೆ. ಉಳಿದ ವಿದ್ಯುತ್‌ ಅನ್ನು ಬೆಸ್ಕಾಂಗೆ ಮಾರುತ್ತಿದ್ದೇವೆ. ಇದರಿಂದ ಬಿಬಿಎಂಪಿಗೆ ಸುಮಾರು ₹ 4.5 ಲಕ್ಷ ವರಮಾನ ಬರುತ್ತಿದೆ’ ಎಂದು ಹೇಳಿದರು.

‘ವಾರ್ಡ್‌ನಲ್ಲಿ ಪ್ರತಿದಿನ ಸಂಗ್ರಹವಾಗುವ 5 ಟನ್‌ಗಳಷ್ಟು ಹಸಿ ಕಸವನ್ನು ಈ ಘಟಕಕ್ಕೆ ತಂದು ವಿದ್ಯುತ್‌ ಉತ್ಪಾದಿಸಲಾಗುತ್ತಿದೆ. ಈ ಕಸ ಸಾಗಿಸಲು ಪಾಲಿಕೆಯು ವ್ಯಯಿಸುತ್ತಿದ್ದ ಸುಮಾರು ₹4 ಲಕ್ಷ ಮೊತ್ತವೂ ಉಳಿತಾಯವಾಗುತ್ತಿದೆ’ ಎಂದರು.

21 ಕಟ್ಟಡಗಳಿಗೆ ವಿದ್ಯುತ್‌:

‘ವಾರ್ಡ್‌ನಲ್ಲಿರುವ ಪಾಲಿಕೆಯ ಕಟ್ಟಡಗಳಿಗೂ ಇನ್ನು ಜೈವಿಕ ಅನಿಲ ಘಟಕದಿಂದ ಉತ್ಪಾದಿಸುವ ವಿದ್ಯುತ್‌ ಪೂರೈಸಲು ನಿರ್ಧರಿಸಿದ್ದೇವೆ. ವಾರ್ಡ್‌ನಲ್ಲಿ ಸುಶ್ರುತ ಡಯಾಲಿಸಿಸ್‌ ಕೇಂದ್ರ, ಪ್ರಾಥಮಿಕ ಆರೋಗ್ಯ ಕೇಂದ್ರ, ವಾರ್ಡ್‌ ಕಚೇರಿ, ನವತಾರೆ ಬ್ಯಾಡ್ಮಿಂಟನ್‌ ಅಕಾಡೆಮಿ, ಸ್ವಾಮಿ ವಿವೇಕಾನಂದ ಶಾಲೆ, ಯಡಿಯೂರು ವಾರ್ಡ್‌ ವಾಣಿಜ್ಯ ಸಂಕೀರ್ಣ, ಡಾ.ರಾಜ್‌ಕುಮಾರ್‌ ರಂಗಮಂದಿರ, ಡಾ.ರಾಜ್‌ಕುಮಾರ್‌ ವ್ಯಾಯಾಮ ಶಾಲೆ ಹಾಗೂ ಅಂಗನವಾಡಿ ಕಟ್ಟಡಗಳು ಸೇರಿ ಒಟ್ಟು 21 ಕಟ್ಟಡಗಳಿಗೆ ವಿದ್ಯುತ್‌ ಪೂರೈಸಲು ನಿರ್ಧರಿಸಿದ್ದೇವೆ’ ಎಂದು ತಿಳಿಸಿದರು.‌

ನವೀಕರಿಸಬಹುದಾದ ಇಂಧನ ಮೂಲಗಳ ಬಳಕೆಯನ್ನು ಹೆಚ್ಚಿಸಬೇಕು. ಇದಕ್ಕಾಗಿ ಸೌರಶಕ್ತಿಯ ಫಲಕಗಳನ್ನು ಅಳವಡಿಸುತ್ತಿದ್ದೇವೆ. ಇತರ ವಾರ್ಡ್‌ಗಳಿಗೂ ಇದು ಮಾದರಿ ಆಗಲಿದೆ
– ಪೂರ್ಣಿಮಾ ರಮೇಶ್‌, ಬಿಬಿಎಂಪಿ ಸದಸ್ಯೆ

ಸೌರ ವಿದ್ಯುತ್‌ ಬಳಸಲಿರುವ ಉದ್ಯಾನಗಳು

* ರಣಧೀರ ಕಂಠೀರವ ಉದ್ಯಾನ

* ಚಂದವಳ್ಳಿಯ ತೋಟ ಉದ್ಯಾನ

* ಚೈತನ್ಯ ಉದ್ಯಾನ

* ಅಂಬರ ಚುಂಬನ ಉದ್ಯಾನ

* ಸಂಜೀವಿನಿ ವನ

* ಧನ್ವಂತರಿ ವನ

* ಪಟಾಲಮ್ಮ ಉದ್ಯಾನ

* ಡಾ.ಬಿ.ಆರ್‌.ಅಂಬೇಡ್ಕರ್‌ ಉದ್ಯಾನ

* ಜಿ.ಪಿ.ರಾಜರತ್ನಂ ಉದ್ಯಾನ

* ಕಾಳಿಕಾಂಬಾ ಉದ್ಯಾನ

* ಯಡಿಯೂರು ಕೆರೆ ಉದ್ಯಾನ

* ನವತಾರೆ ಬ್ಯಾಡ್ಮಿಂಟನ್‌ ಅಕಾಡೆಮಿ ಉದ್ಯಾನ

ಮಾದರಿ ಪಾದಚಾರಿ ಮಾರ್ಗಗಳು

* ಜಯನಗರ 3ನೇ ಬ್ಲಾಕ್‌ನ ಆನೆಬಂಡೆ ರಸ್ತೆ

* ಸೌತ್‌ ಎಂಡ್‌ ವೃತ್ತದ ಬಳಿ 4ನೇ ಮುಖ್ಯರಸ್ತೆ

* ಜಯನಗರ 6ನೇ ಬ್ಲಾಕ್‌ನ 2ನೇ ಅಡ್ಡರಸ್ತೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.