ADVERTISEMENT

ಫೆ.21ರೊಳಗೆ ನೀಡಲು ಹೈಕೋರ್ಟ್‌ ಗಡುವು

ಬೀದಿ ಬದಿ ವ್ಯಾಪಾರಿಗಳಿಗೆ ಗುರುತಿನ ಚೀಟಿ

ಪಿಟಿಐ
Published 18 ಜನವರಿ 2018, 20:31 IST
Last Updated 18 ಜನವರಿ 2018, 20:31 IST

ಬೆಂಗಳೂರು: ‘ಬೆಂಗಳೂರು ಮಹಾನಗರದ ಬೀದಿ ಬದಿಯ ವ್ಯಾಪಾರಿಗಳಿಗೆ ಫೆಬ್ರುವರಿ 21ರೊಳಗೆ ಗುರುತಿನ ಚೀಟಿ ವಿತರಿಸಬೇಕು’ ಎಂದು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಗೆ (ಬಿಬಿಎಂಪಿ) ಹೈಕೋರ್ಟ್ ನಿರ್ದೇಶಿಸಿದೆ.

ಈ ಕುರಿತಂತೆ ಬೆಂಗಳೂರು ಜಿಲ್ಲಾ ಬಿಡಿ ವ್ಯಾಪಾರಿ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಎಸ್.ಬಾಬು ಸೇರಿದಂತೆ ಒಟ್ಟು 14 ಜನ ಸಲ್ಲಿಸಿದ್ದ ಅರ್ಜಿಯನ್ನು ನಾಯಮೂರ್ತಿ ವಿನೀತ್ ಕೊಠಾರಿ ಅವರಿದ್ದ ಏಕಸದಸ್ಯ ನ್ಯಾಯಪೀಠ ಗುರುವಾರ ವಿಲೇವಾರಿ ಮಾಡಿದೆ.

‘ಈಗಾಗಲೇ ಗುರುತಿಸಿರುವ ವ್ಯಾಪಾರಿಗಳಿಗೆ ಫೆಬ್ರುವರಿ 21ರೊಳಗೆ ಗುರುತಿನ ಚೀಟಿ ನೀಡಬೇಕು. ತಪ್ಪಿದರೆ ಈ ಕಾರ್ಯದ ಉಸ್ತುವಾರಿ ಹೊತ್ತ ಅಧಿಕಾರಿಯು ದಿನಕ್ಕೆ ₹ 1,000ದಂತೆ ವಿಳಂಬಕ್ಕೆ ಬಿಬಿಎಂಪಿಗೆ ದಂಡ ಪಾವತಿಸಬೇಕು’ ಎಂದು ಆದೇಶದಲ್ಲಿ ತಾಕೀತು ಮಾಡಲಾಗಿದೆ.

ADVERTISEMENT

‘ರಾಷ್ಟ್ರೀಯ ನಗರ ಜೀವನೋಪಾಯ ಅಭಿಯಾನದಡಿ ರಾಜ್ಯದ ಎಲ್ಲ ನಗರಗಳಲ್ಲಿರುವ ಬೀದಿ ಬದಿಯ ವ್ಯಾಪಾರಿಗಳ ಸಮೀಕ್ಷೆ ನಡೆಸಿ ಗುರುತಿನ ಚೀಟಿ ನೀಡಬೇಕು ಎಂದು ಕೇಂದ್ರ ಸರ್ಕಾರವು ಆದೇಶಿಸಿದೆ. ಈ ದಿಸೆಯಲ್ಲಿ ಬಿಬಿಎಂಪಿ ಅಧಿಕಾರಿಗಳು 2017ರಲ್ಲಿ ಸಮೀಕ್ಷೆ ನಡೆಸಿದ್ದರೂ ಈತನಕ ಗುರುತಿನ ಚೀಟಿ ನೀಡಿಲ್ಲ’ ಎಂಬುದು ಅರ್ಜಿದಾರರ ಆಕ್ಷೇಪ.

ಈ ಸಂಬಂಧ ಬಿಬಿಎಂಪಿಗೆ ನಿರ್ದೇಶಿಸಬೇಕು ಎಂದು ಕೋರಿ ಅರ್ಜಿದಾರರು ಹೈಕೋರ್ಟ್‌ ಮೆಟ್ಟಿಲೇರಿದ್ದರು. ಅರ್ಜಿದಾರರ ಪರ ವಕೀಲ ಕ್ಲಿಫ್ಟನ್ ರೊಜಾರಿಯೊ ವಾದ ಮಂಡಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.