ADVERTISEMENT

‘ಮೆಟ್ರೊ 2ನೇ ಹಂತ 2021ಕ್ಕೆ ಪೂರ್ಣ’

​ಪ್ರಜಾವಾಣಿ ವಾರ್ತೆ
Published 18 ಜನವರಿ 2018, 20:39 IST
Last Updated 18 ಜನವರಿ 2018, 20:39 IST

ಬೆಂಗಳೂರು: ನಮ್ಮ ಮೆಟ್ರೊ ಎರಡನೇ ಹಂತದ ಯೋಜನೆಯು 2021ರ ಮಾರ್ಚ್‌ಗೆ ಪೂರ್ಣಗೊಳ್ಳಲಿದೆ ಎಂದು ಕೇಂದ್ರ ಸಾಂಖ್ಯಿಕ ಮತ್ತು ಯೋಜನೆ ಅನುಷ್ಠಾನ ರಾಜ್ಯ ಸಚಿವ ವಿಜಯ್‌ ಗೋಯಲ್‌ ಗುರುವಾರ ತಿಳಿಸಿದರು.

ಬೆಂಗಳೂರು ಮೆಟ್ರೊ ರೈಲು ನಿಗಮವು (ಬಿಎಂಆರ್‌ಸಿಎಲ್‌) ಅನುಷ್ಠಾನಗೊಳಿಸುತ್ತಿರುವ ಕಾಮಗಾರಿಗಳ ಪ್ರಗತಿ ಪರಿಶೀಲನೆ ನಡೆಸಿದ ಬಳಿಕ  ಪರಿಶೀಲಿಸಿದ ಅವರು ಸುದ್ದಿಗಾರರ ಜೊತೆ ಮಾತನಾಡಿದರು.

ಯೋಜನೆಯ ಕಾಮಗಾರಿಗಳು ತ್ವರಿಗತಿಯಲ್ಲಿ ನಡೆಯುತ್ತಿವೆ. ಎರಡನೇ ಹಂತದ ಯೋಜನೆಗೆ 2014ರ ಫೆಬ್ರುವರಿಯಲ್ಲಿ ಚಾಲನೆ ನೀಡಲಾಗಿದೆ. ₹26,405 ಕೋಟಿ ವೆಚ್ಚದಲ್ಲಿ 72 ಕಿ.ಮೀ. ಉದ್ದದ ಮಾರ್ಗಗಳನ್ನು ನಿರ್ಮಿಸಲಾಗುತ್ತಿದೆ. ಇದರಲ್ಲಿ 61 ನಿಲ್ದಾಣಗಳು ಬರಲಿವೆ. ಎತ್ತರಿಸಿದ ಮಾರ್ಗದಲ್ಲಿ ಪ್ರತಿ ಕಿ.ಮೀ.ಗೆ ₹192 ಕೋಟಿ ಹಾಗೂ ಸುರಂಗ ಮಾರ್ಗದಲ್ಲಿ ಪ್ರತಿ ಕಿ.ಮೀ.ಗೆ ₹500 ಕೋಟಿ ವೆಚ್ಚವಾಗುತ್ತದೆ ಎಂದು ಸಚಿವರು ವಿವರಿಸಿದರು.

ADVERTISEMENT

ನಾಗವಾರ– ಕೆಐಎಎಲ್‌ ಮಾರ್ಗದ ಯೋಜನೆಗೆ ಸಂಬಂಧಿಸಿದ ಎರಡು ಪ್ರಸ್ತಾವಗಳಿಗೆ ಕೇಂದ್ರ ನಗರಾಭಿವೃದ್ಧಿ ಸಚಿವಾಲಯದಿಂದ ಇನ್ನೂ ಅನುಮೋದನೆ ಸಿಕ್ಕಿಲ್ಲ ಎಂದು ಬಿಎಂಆರ್‌ಸಿಎಲ್‌ ವ್ಯವಸ್ಥಾಪಕ ನಿರ್ದೇಶಕ ಮಹೇಂದ್ರ ಜೈನ್‌ ಸಚಿವರ ಗಮನಕ್ಕೆ ತಂದರು.

‘ಕೇಂದ್ರ ನಗರಾಭಿವೃದ್ಧಿ ಸಚಿವಾಲಯದ ಜತೆ ಚರ್ಚಿಸುತ್ತೇನೆ. ಶೀಘ್ರವೇ ಅನುಮೋದನೆ ದೊರಕಿಸಿಕೊಡುತ್ತೇನೆ’ ಎಂದು ಸಚಿವರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.