ADVERTISEMENT

ಪೊಲೀಸರಿಗೆ ಹೊಡೆದಿದ್ದ ಇಬ್ಬರ ಸೆರೆ

​ಪ್ರಜಾವಾಣಿ ವಾರ್ತೆ
Published 19 ಜನವರಿ 2018, 19:29 IST
Last Updated 19 ಜನವರಿ 2018, 19:29 IST

ಬೆಂಗಳೂರು: ಕಮ್ಮನಹಳ್ಳಿ ಮುಖ್ಯರಸ್ತೆಯಲ್ಲಿ ಜ.11ರ ರಾತ್ರಿ ಗಸ್ತು ಪೊಲೀಸರ ಮೇಲೆ ಹಲ್ಲೆ ನಡೆಸಿದ್ದ ನಿತೇಶ್ (28) ಹಾಗೂ ಸರವಣ (35) ಎಂಬುವರನ್ನು ಬಂಧಿಸಿರುವ ಬಾಣಸವಾಡಿ ಪೊಲೀಸರು, ತಲೆಮರೆಸಿಕೊಂಡಿರುವ ಇತರೆ ನಾಲ್ವರ ಬಂಧನಕ್ಕೆ ಬಲೆ ಬೀಸಿದ್ದಾರೆ.

ಆ ದಿನ ರಾತ್ರಿ 11.30ರ ಸುಮಾರಿಗೆ ಆರೋಪಿಗಳು ಕಮ್ಮನಹಳ್ಳಿಯಲ್ಲಿ ರಸ್ತೆ ಮಧ್ಯೆ ಬೈಕ್‌ಗಳನ್ನು ನಿಲ್ಲಿಸಿಕೊಂಡು ಪಾರ್ಟಿ ಮಾಡುತ್ತಿದ್ದರು. ಆಗ ಅಲ್ಲಿಗೆ ತೆರಳಿದ್ದ ಬಾಣಸವಾಡಿ ಠಾಣೆಯ ಹೆಡ್‌ಕಾನ್‌ಸ್ಟೆಬಲ್ ಮಂಜುನಾಥ್ ಹಾಗೂ ಕಾನ್‌ಸ್ಟೆಬಲ್ ಭೂತಯ್ಯ ಅವರ ಮೇಲೆ ಹಲ್ಲೆ ಮಾಡಿ ಹೋಗಿದ್ದಾರೆ.

ನಿತೇಶ್ ಹಾಗೂ ಸರವಣ ಶಾಂತಿನಗರ ನಿವಾಸಿಗಳಾಗಿದ್ದು, ಮಾಲ್‌ನಲ್ಲಿ ಸೆಕ್ಯುರಿಟಿ ಗಾರ್ಡ್‌ಗಳಾಗಿದ್ದಾರೆ. ಆ ರಾತ್ರಿ ಇವರ ಜತೆಗಿದ್ದವರು ವಿಲ್ಸನ್‌ ಗಾರ್ಡನ್‌ನ ಸುಭಾಷ್, ದಿನೇಶ್, ಸರವಣ ಹಾಗೂ ಪಿ.ದಿನೇಶ್ ಎಂದು ಗೊತ್ತಾಗಿದೆ. ಅವರು ಮೊಬೈಲ್ ಸ್ವಿಚ್ಡ್‌ ಆಫ್ ಮಾಡಿಕೊಂಡು ಪರಾರಿಯಾಗಿದ್ದಾರೆ.

ADVERTISEMENT

ಸೀಟ್ ಕೆಳಗೆ ಚಾಕು: ‘ಯುವಕರು ದಾಂದಲೆ ಮಾಡುತ್ತಿರುವ ಬಗ್ಗೆ ಸ್ಥಳೀಯರಿಂದ ಮಾಹಿತಿ ಬಂತು. ಕೂಡಲೇ ನಾನು ಹಾಗೂ ಭೂತಯ್ಯ ಸ್ಥಳಕ್ಕೆ ತೆರಳಿದೆವು. ಜಾಗ ಖಾಲಿ ಮಾಡುವಂತೆ ಸೂಚಿಸಿದಾಗ ತನ್ನ ಬುಲೆಟ್ ಬೈಕ್ ಮೇಲೆ ಕುಳಿತಿದ್ದ ಸುಭಾಷ್, ‘ಪೊಲೀಸರಾದರೆ ಏನಿವಾಗ. ನಾವೇನು ನಿಮ್ಮ ಮನೆ ಹತ್ರ ಅಥವಾ ಠಾಣೆ ಹತ್ರ ಬಂದು ಪಾರ್ಟಿ ಮಾಡ್ತಿದ್ದೀವಾ’ ಎಂದು ಹೇಳಿದ.

ಠಾಣೆಗೆ ಬರುವಂತೆ ಸೂಚಿಸಿದ್ದಕ್ಕೆ ನನ್ನ ಕೊರಳ ಪಟ್ಟಿ ಹಿಡಿದು ಎಳೆದಾಡಿದ’ ಎಂದು ಹೆಡ್‌ಕಾನ್‌ಸ್ಟೆಬಲ್ ಮಂಜುನಾಥ್ ದೂರಿನಲ್ಲಿ ತಿಳಿಸಿದ್ದಾರೆ.

‘ಭೂತಯ್ಯ ನನ್ನ ರಕ್ಷಣೆಗೆ ಬರುತ್ತಿದ್ದಂತೆಯೇ ಎಲ್ಲರೂ ಒಟ್ಟಾಗಿ ಅವರ ಮೇಲೂ ಹಲ್ಲೆ ನಡೆಸಿದರು. ಹೊಯ್ಸಳ ಸಿಬ್ಬಂದಿ ಬರುತ್ತಿದ್ದಂತೆಯೇ ಆರೋಪಿಗಳು ಓಡಿ ಹೋದರು.’

‘ಸುಭಾಷ್‌ನ ಬುಲೆಟ್‌ ಬೈಕಿನಲ್ಲಿ ಉದ್ದನೆಯ ಚಾಕು (ಡ್ರ್ಯಾಗರ್) ಇತ್ತು. ಇದನ್ನು ಗಮನಿಸಿದರೆ ಆರೋಪಿಗಳು ಅಪರಾಧ ಹಿನ್ನೆಲೆವುಳ್ಳ ವ್ಯಕ್ತಿಗಳು ಎನಿಸುತ್ತದೆ. ಹೀಗಾಗಿ, ಅವರನ್ನು ಪತ್ತೆ ಮಾಡಿ ಸೂಕ್ತ ಕ್ರಮ ತೆಗೆದುಕೊಳ್ಳಬೇಕು’ ಎಂದು ಮಂಜುನಾಥ್ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.