ADVERTISEMENT

ಅಧಿಕಾರಿಗಳ ಅಸಡ್ಡೆ: ಸವಲತ್ತು ಕಡಿತ

ಬೆಂಗಳೂರು ವಿಶ್ವವಿದ್ಯಾಲಯದ ಸಂಯೋಜಿತ ಕಾಲೇಜುಗಳ ಪರಿಶಿಷ್ಟ ವಿದ್ಯಾರ್ಥಿಗಳಿಗೆ ಸಿಗುತ್ತಿಲ್ಲ ಸೌಲಭ್ಯ

ಆರ್‌.ಜೆ.ಯೋಗಿತಾ
Published 21 ಜನವರಿ 2018, 19:30 IST
Last Updated 21 ಜನವರಿ 2018, 19:30 IST
ಬೆಂಗಳೂರು ವಿಶ್ವವಿದ್ಯಾಲಯ
ಬೆಂಗಳೂರು ವಿಶ್ವವಿದ್ಯಾಲಯ   

ಬೆಂಗಳೂರು: ಬೆಂಗಳೂರು ವಿಶ್ವವಿದ್ಯಾಲಯದ ಸಂಯೋಜಿತ ಸರ್ಕಾರಿ ಕಾಲೇಜಿನಲ್ಲಿ ಪಿಎಚ್‌.ಡಿ ಮಾಡುತ್ತಿರುವ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ವಿದ್ಯಾರ್ಥಿಗಳು ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳು ಮಾಡಿದ ಎಡವಟ್ಟಿನಿಂದಾಗಿ ಸರ್ಕಾರದ ಸವಲತ್ತುಗಳಿಂದ ವಂಚಿತರಾಗಿದ್ದಾರೆ.

ಇಲಾಖೆಯ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳ ವಿಭಾಗದ ಜಂಟಿ ನಿರ್ದೇಶಕಿಯೊಬ್ಬರು ಸರ್ಕಾರಿ ಆದೇಶದಲ್ಲಿ, ‘ಬೆಂಗಳೂರು ವಿಶ್ವವಿದ್ಯಾಲಯ ಹಾಗೂ ಸಂಯೋಜಿತ ಸರ್ಕಾರಿ ಕಾಲೇಜುಗಳು’ ಎಂದು ಬರೆಯುವ ಬದಲು ‘ಸ್ನಾತಕೋತ್ತರ ಕೇಂದ್ರಗಳು’ ಎಂದು ನಮೂದಿಸಿದ್ದರಿಂದ ಈ ಸಮಸ್ಯೆ ಸೃಷ್ಟಿಯಾಗಿದೆ ವಿಶ್ವವಿದ್ಯಾಲಯಗಳಲ್ಲಿ ಪಿಎಚ್‌.ಡಿ. ವ್ಯಾಸಂಗ ನಡೆಸುತ್ತಿರುವ ಪರಿಶಿಷ್ಟ ವಿದ್ಯಾರ್ಥಿಗಳಿಗೆ ಮೊದಲ ಮೂರು ವರ್ಷಗಳು ತಿಂಗಳಿಗೆ ₹ 8,000 ವಿದ್ಯಾರ್ಥಿ ವೇತನ, ನಾಲ್ಕು ಮತ್ತು ಐದನೇ ವರ್ಷದಲ್ಲಿ ತಿಂಗಳಿಗೆ ₹10 ಸಾವಿರ ವಿದ್ಯಾರ್ಥಿವೇತನ ನೀಡಲಾಗುತ್ತಿದೆ. ಅದರ ಜೊತೆಗೆ ಉಚಿತವಾಗಿ ಲ್ಯಾಪ್‌ಟಾಪ್‌ ನೀಡಲಾಗುತ್ತಿದೆ.

ವಿಶ್ವವಿದ್ಯಾಲಯದ ಸಂಯೋಜಿತ ಸರ್ಕಾರಿ ಕಾಲೇಜುಗಳಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ 25 ವಿದ್ಯಾರ್ಥಿಗಳು ಸಂಶೋಧನೆಯಲ್ಲಿ ತೊಡಗಿದ್ದಾರೆ. ಇವರಲ್ಲಿ 11 ವಿದ್ಯಾರ್ಥಿಗಳು ಕಿರಿಯ ಸಂಶೋಧನಾ ವಿದ್ಯಾರ್ಥಿಗಳು. ಇವರಿಗೆ ಯುಜಿಸಿ ವತಿಯಿಂದ ವಿದ್ಯಾರ್ಥಿವೇತನ ಸಿಗುತ್ತಿದೆ. ಆದರೆ ಲ್ಯಾಪ್‌ಟಾಪ್‌ ಸಿಕ್ಕಿಲ್ಲ. ಇನ್ನುಳಿದ 14 ಮಂದಿಗೆ ಎರಡು ವರ್ಷಗಳಿಂದ ಇಲಾಖೆಯಿಂದ ಯಾವುದೇ ಸವಲತ್ತು ಸಿಕ್ಕಿಲ್ಲ.

ADVERTISEMENT

2013–14ರಲ್ಲಿ ವಿಶ್ವವಿದ್ಯಾಲಯದ ಸಂಯೋಜಿತ ಕಾಲೇಜುಗಳಲ್ಲಿ ಪಿಎಚ್‌.ಡಿ ಅಧ್ಯಯನಕ್ಕೆ ಅವಕಾಶ ಕಲ್ಪಿಸಲಾಯಿತು. ಪ್ರಾರಂಭದಲ್ಲಿ ಮೂರು ಮಂದಿ ವಿದ್ಯಾರ್ಥಿಗಳಿದ್ದುದ್ದರಿಂದ ವಿಶ್ವವಿದ್ಯಾಲಯವು ಈವರಿಗೂ ಸಂಶೋಧನಾ ವೇತನ ಹಾಗೂ ಲ್ಯಾಪ್‌ಟಾಪ್‌ಗಳನ್ನು ನೀಡಿತ್ತು. ಸಂಯೋಜಿತ ಕಾಲೇಜುಗಳಲ್ಲಿ ಪಿಎಚ್‌.ಡಿ ಸಂಶೋಧನೆ ನಡೆಸುವವರ ಸಂಖ್ಯೆ ಕ್ರಮೇಣ ಹೆಚ್ಚಾಗಿದೆ. ಇವರಿಗೆ ಸವಲತ್ತು ನೀಡಿದರೆ ಆರ್ಥಿಕ ಹೊರೆ ಹೆಚ್ಚಾಗುತ್ತದೆ ಎಂಬ ಕಾರಣಕ್ಕೆ 2016–17ನೇ ಸಾಲಿನಲ್ಲಿ ಅದನ್ನು ಸ್ಥಗಿತಗೊಳಿಸಲಾಯಿತು ಎಂದು ಸರ್ಕಾರಿ ಕಾಲೇಜಿನ ಸಂಶೋಧನಾ ವಿದ್ಯಾರ್ಥಿ ಎನ್‌. ಕೃಷ್ಣ ದೂರಿದರು.

ವಿಶ್ವವಿದ್ಯಾಲಯದ ಯಾವುದೇ ಸೌಲಭ್ಯವನ್ನು ನೀಡಲಾಗುವುದಿಲ್ಲ ಎಂದು ಸಂಶೋಧನಾ ವಿದ್ಯಾರ್ಥಿಗಳಿಂದ ಸಹಿ ಪಡೆಯಲಾಗಿದೆ ಎಂದು ತಿಳಿಸಿದರು.

‘ನಮಗೂ ವಿದ್ಯಾರ್ಥಿವೇತನ ಮತ್ತು ಲ್ಯಾಪ್‌ಟಾಪ್‌ ನೀಡಿ ಎಂದು ಸಮಾಜ ಕಲ್ಯಾಣ ಇಲಾಖೆಗೆ ಮನವಿ ಮಾಡಿದ್ದೆವು. ಇದಕ್ಕೆ ಸ್ಪಂದಿಸಿದ್ದ ಸಮಾಜ ಕಲ್ಯಾಣ ಸಚಿವ ಎಚ್.ಆಂಜನೇಯ ಸೌಲಭ್ಯ ಕೊಡಿಸುವ ಭರವಸೆ ನೀಡಿದ್ದರು. ಆದರೆ, ಇಲಾಖೆಯ ಅಧಿಕಾರಿಯೊಬ್ಬರು ಮಾಡಿದ ತಪ್ಪಿನಿಂದಾಗಿ ನಮಗೆ ಸವಲತ್ತು ಕೈತಪ್ಪಿದೆ’ ಎಂದು ಅವರು ವಿವರಿಸಿದರು.

ಆದೇಶವಿದ್ದರೂ ಸೌಲಭ್ಯ ನೀಡಿಲ್ಲ: ಪರಿಶಿಷ್ಟ ಪಂಗಡಗಳ ಉಪಯೋಜನೆ ಕಾಯ್ದೆ 2013ರ ಅಡಿ ಇಲಾಖೆಗೆ ಮಂಜೂರಾಗಿ ಬಳಕೆಯಾಗದೆ ಉಳಿದ ₹38.22 ಕೋಟಿಯಲ್ಲಿ ₹2 ಕೋಟಿಯನ್ನು ಉನ್ನತ ಶಿಕ್ಷಣ ಇಲಾಖೆಯು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಪಿಎಚ್‌.ಡಿ ವಿದ್ಯಾರ್ಥಿಗಳಿಗೆ ನೀಡುವ ಸಲುವಾಗಿ ವಿಶ್ವವಿದ್ಯಾಲಯಕ್ಕೆ ಬಿಡುಗಡೆ ಮಾಡಿದೆ. ವಿಶ್ವವಿದ್ಯಾಲಯ ವಿದ್ಯಾರ್ಥಿಗಳಿಗೆ ನೀಡುವ ಸೌಲಭ್ಯವನ್ನು ಸಂಯೋಜಿತ ಕಾಲೇಜಿನ ಸಂಶೋಧನಾ ವಿದ್ಯಾರ್ಥಿಗಳಿಗೂ ನೀಡಬೇಕು ಎಂದು ಈ ಆದೇಶದಲ್ಲಿ ಸ್ಪಷ್ಟವಾಗಿ ಹೇಳಿದೆ.

ಅಧಿಕಾರಿಗಳ‌‌ ಗೂಂಡಾಗಿರಿ: ‘ಆದೇಶ ಬದಲು ಮಾಡಿ ನೀಡುವಂತೆ ಸಮಾಜ ಕಲ್ಯಾಣ ಇಲಾಖೆಯ ಜಂಟಿ ಕಾರ್ಯದರ್ಶಿ ಗೋಪಾಲ್‌ ಅವರನ್ನು ಒತ್ತಾಯಿಸಿದ್ದೆವು.  ಅವರು ನಮಗೇ ಬೆದರಿಕೆ ಹಾಕಿ ಹಿಂದಕ್ಕೆ ಕಳುಹಿಸಿದರು. ನಮಗೆ ನ್ಯಾಯಬದ್ಧವಾಗಿ ಸಿಗಬೇಕಾದ ಸವಲತ್ತನ್ನು  ಕೇಳಿದರೆ ಗೂಂಡಾಗಿರಿ ಮಾಡುತ್ತಿದ್ದಾರೆ’ ಎಂದು ಸಂಶೋಧನಾ ವಿದ್ಯಾರ್ಥಿ ವೆಂಕಟೇಶ್‌ ನೋವಿನಿಂದ ಹೇಳಿದರು.

ಸೌಲಭ್ಯ ನೀಡಲು ಅವಕಾಶವಿಲ್ಲ
‘ಸಂಯೋಜಿತ ಕಾಲೇಜುಗಳ ಸಂಶೋಧನಾ ಕೇಂದ್ರಗಳಲ್ಲಿ ಪ್ರವೇಶ ಪಡೆದ ಸಂಶೋಧನಾ ವಿದ್ಯಾರ್ಥಿಗಳಿಗೆ ಬೆಂಗಳೂರು ವಿಶ್ವವಿದ್ಯಾಲಯದ ವಿದ್ಯಾರ್ಥಿ ನಿಲಯ ಹಾಗೂ ಯಾವುದೇ ಆರ್ಥಿಕ ಸೌಲಭ್ಯ ನೀಡಲು ಅವಕಾಶ ಇಲ್ಲ’ ಎಂದು ವಿದ್ಯಾರ್ಥಿಗಳ ಮನವಿಗೆ ವಿಶ್ವವಿದ್ಯಾಲಯ ಪ್ರತಿಕ್ರಿಯಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.