ADVERTISEMENT

ಎಲ್ಲರಿಗೂ ಸೂರು ಕಲ್ಪಿಸಲು ಭೂ ಬ್ಯಾಂಕ್‌ ಸ್ಥಾಪಿಸಿ

​ಪ್ರಜಾವಾಣಿ ವಾರ್ತೆ
Published 21 ಜನವರಿ 2018, 19:30 IST
Last Updated 21 ಜನವರಿ 2018, 19:30 IST

ಬೆಂಗಳೂರು: ದೇಶದ ಪ್ರತಿಯೊಬ್ಬ ನಾಗರಿಕನಿಗೂ 2022ರ ವೇಳೆಗೆ ಸೂರು ಕಲ್ಪಿಸುವ ಕೇಂದ್ರ ಸರ್ಕಾರದ ಗುರಿ ಈಡೇರಬೇಕಾದರೆ ಅದಕ್ಕೆ ಅಗತ್ಯವಿರುವ ಭೂ ಬ್ಯಾಂಕ್‌ ಒದಗಿಸಬೇಕು ಎಂದು ಬಿಲ್ಡರ್ಸ್ ಅಸೋಸಿಯೇಷನ್ ಆಫ್ ಇಂಡಿಯಾ (ಬಿಎಐ) ಒತ್ತಾಯಿಸಿದೆ.

ಸಂಸ್ಥೆ ವತಿಯಿಂದ ಏರ್ಪಡಿಸಿದ್ದ ಅಖಿಲ ಭಾರತ 28ನೇ ಬಿಲ್ಡರ್ಸ್ ಸಮ್ಮೇಳನದ ಸಮಾರೋಪದಲ್ಲಿ ಈ ಕುರಿತು ನಿರ್ಣಯ ಕೈಗೊಳ್ಳಲಾಯಿತು.

‘ನಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸುವ ಉದ್ದೇಶದಿಂದ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಲು ನಿರ್ಧರಿಸಿದ್ದೇವೆ. ವಸತಿ ಯೋಜನೆಗಳನ್ನು ತ್ವರಿತಗತಿಯಲ್ಲಿ ಅನುಷ್ಠಾನಗೊಳಿಸುವಂತೆ ಅವರಿಗೆ ಮನವಿ ಮಾಡುತ್ತೇವೆ’ ಎಂದು ಬಿಎಐ ರಾಷ್ಟ್ರೀಯ ಅಧ್ಯಕ್ಷ ಎಚ್.ಎನ್.ವಿಜಯ ರಾಘವ ರೆಡ್ಡಿ ತಿಳಿಸಿದರು.

ADVERTISEMENT

ಬಿಎಐನ ಭ್ರಷ್ಟಾಚಾರ ತಡೆ ಘಟಕಗಳನ್ನು ಎಲ್ಲ ರಾಜ್ಯಗಳಲ್ಲೂ ಸ್ಥಾಪಿಸಲಾಗಿದೆ. 2022ರ ವೇಳೆಗೆ ಈ ಕ್ಷೇತ್ರವನ್ನು ಭ್ರಷ್ಟಾಚಾರಮುಕ್ತ ಮಾಡುವ ಗುರಿ ಹೊಂದಲಾಗಿದೆ. ಕಟ್ಟಡ ನಿರ್ಮಾಣಕ್ಕೆ ಸಂಬಂಧಿಸಿದ ಯಾವುದೇ ಸಮಸ್ಯೆ ಇದ್ದರೂ ಅವುಗಳನ್ನು ಸಂಬಂಧಪಟ್ಟ ಇಲಾಖೆಗೆ ಕೊಂಡೊಯ್ದು ಪರಿಹರಿಸುವ ಕೆಲಸವನ್ನು ಘಟಕವು ಮಾಡಲಿದೆ ಎಂದು ವಿವರಿಸಿದರು.

ಬಿಎಐನ ಮುಖ್ಯ ಪೋಷಕ ಬಿ.ಸೀನಯ್ಯ, ‘ಮೊದಲೇ ಅಚ್ಚು ಹಾಕುವ (ಪ್ರಿ–ಕಾಸ್ಟ್‌) ತಂತ್ರಜ್ಞಾನದಿಂದ ಅತಿ ಕಡಿಮೆ ಅವಧಿಯಲ್ಲಿ ಹಾಗೂ ಕಡಿಮೆ ವೆಚ್ಚದಲ್ಲಿ ಕಟ್ಟಡಗಳನ್ನು ನಿರ್ಮಿಸಬಹುದು. ವಸತಿ ಯೋಜನೆಗಳ ಜಾರಿಗೊಳಿಸುವಾಗ ಈ ತಂತ್ರಜ್ಞಾನಕ್ಕೆ ಒತ್ತು ನೀಡಬೇಕು’ ಎಂದು ಒತ್ತಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.