ADVERTISEMENT

ಶಿಕ್ಷಣ ಮೊಟಕು ಮಾಡದಿರಿ: ನಿರ್ಮಲಾನಂದನಾಥ ಸ್ವಾಮೀಜಿ

​ಪ್ರಜಾವಾಣಿ ವಾರ್ತೆ
Published 22 ಜನವರಿ 2018, 19:48 IST
Last Updated 22 ಜನವರಿ 2018, 19:48 IST
ಒಕ್ಕಲಿಗರ ಸಂಘಕ್ಕೆ ಜಮೀನು ದಾನ ನೀಡಿದ ಮಾಜಿ ಸಚಿವ ಎಂ.ವಿ.ಕೃಷ್ಣಪ್ಪ ಅವರ ಪತ್ನಿ ಪ್ರಮೀಳಾ ಅವರನ್ನು ನಿರ್ಮಲಾನಂದನಾಥ ಸ್ವಾಮೀಜಿ ಗೌರವಿಸಿದರು. ಮುನಿರತ್ನ, ಪಾಲಿಕೆ ಸದಸ್ಯ ಮೋಹನ್‍ಕುಮಾರ್ ಇದ್ದಾರೆ
ಒಕ್ಕಲಿಗರ ಸಂಘಕ್ಕೆ ಜಮೀನು ದಾನ ನೀಡಿದ ಮಾಜಿ ಸಚಿವ ಎಂ.ವಿ.ಕೃಷ್ಣಪ್ಪ ಅವರ ಪತ್ನಿ ಪ್ರಮೀಳಾ ಅವರನ್ನು ನಿರ್ಮಲಾನಂದನಾಥ ಸ್ವಾಮೀಜಿ ಗೌರವಿಸಿದರು. ಮುನಿರತ್ನ, ಪಾಲಿಕೆ ಸದಸ್ಯ ಮೋಹನ್‍ಕುಮಾರ್ ಇದ್ದಾರೆ   

ಬೆಂಗಳೂರು: ‘ಮನುಷ್ಯನ ಉನ್ನತಿಗೆ ಶಿಕ್ಷಣ ಸರ್ವತ್ರ ಸಾಧನ. ಏನೇ ತೊಂದರೆ ಎದುರಾದರೂ ಶಿಕ್ಷಣ ಮೊಟುಕುಗೊಳಿಸದೆ ಮುಂದುವರಿಸ ಬೇಕು’ ಎಂದು ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷ ನಿರ್ಮಲಾನಂದನಾಥ ಸ್ವಾಮೀಜಿ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

ರಾಜ್ಯ ಒಕ್ಕಲಿಗರ ಸಂಘದ ಕೆಂಪೇಗೌಡ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‍ಮೆಂಟ್ ಸ್ಟಡೀಸ್ ಅಂಡ್ ರಿಸರ್ಚ್, ಶ್ರೀಗಂಧದ ಕಾವಲು ವಿದ್ಯಾಸಂಸ್ಥೆಗಳು ಹಾಗೂ ಹಳೆಯ ವಿದ್ಯಾರ್ಥಿಗಳ ಸಂಘದ ಸಹಯೋಗದಲ್ಲಿ ಆಯೋಜಿಸಿದ್ದ ಬೆಳ್ಳಿಹಬ್ಬದ ಮಹೋತ್ಸವ ಉದ್ಘಾಟಿಸಿ ಅವರು ಮಾತನಾಡಿದರು.

‘ಉಳ್ಳವರು ಬಡವರ ಶಿಕ್ಷಣಕ್ಕೆ ನೆರವು ನೀಡುವುದು ಸಾಮಾಜಿಕ ಜವಾಬ್ದಾರಿಯಾಗಿದೆ. ಮಾಜಿ ಸಚಿವ ಎಂ.ವಿ.ಕೃಷ್ಣಪ್ಪ ಉದಾರ ಮನಸ್ಸಿನಿಂದ ಸಂಸ್ಥೆಗೆ 25 ಎಕರೆ ಜಮೀನು ನೀಡಿದ್ದಾರೆ. ಆದರ್ಶ ರಾಜಕಾರಣಕ್ಕೆ ಮುನ್ನುಡಿ ಬರೆದು, ಇಂದಿನ ರಾಜಕಾರಣಿಗಳಿಗೆ ಮಾದರಿಯಾಗಿದ್ದಾರೆ’ ಎಂದರು.

ADVERTISEMENT

ಒಕ್ಕಲಿಗರ ಸಂಘದ ವಿದ್ಯಾಸಂಸ್ಥೆಗಳಲ್ಲಿ ವಿದ್ಯಾಭ್ಯಾಸ ಮಾಡಿ ಉತ್ತಮ ಉದ್ಯೋಗ ಗಿಟ್ಟಿಸಿರುವವರು, ಸಮಾಜದಲ್ಲಿ ಉನ್ನತ ಸ್ಥಾನದಲ್ಲಿರುವ ಹಳೆಯ ವಿದ್ಯಾರ್ಥಿಗಳು, ಆರ್ಥಿಕವಾಗಿ ದುರ್ಬಲರಾಗಿರುವ ಕುಟುಂಬದ ಮಕ್ಕಳ ಶಿಕ್ಷಣಕ್ಕೆ ನೆರವಾಗಬೇಕು ಎಂದು ಸಲಹೆ ನೀಡಿದರು.

ಶಾಸಕ ಮುನಿರತ್ನ, ‘ಒಕ್ಕಲಿಗರ ಸಂಘದ ಶಿಕ್ಷಣ ಸಂಸ್ಥೆಗಳು ಗುಣಮಟ್ಟದ ಶಿಕ್ಷಣಕ್ಕೆ ಆದ್ಯತೆ ನೀಡಿ, ವಿಶ್ವ ಮನ್ನಣೆ ಗಳಿಸಿವೆ. ಶಿಕ್ಷಣ ಕ್ಷೇತ್ರದಲ್ಲಿ ಛಾಪು ಮೂಡಿಸಿವೆ. ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಶಿಕ್ಷಣ ದೊರಕಿಸುವ ದಿಕ್ಕಿನತ್ತ ದೃಢ ಹೆಜ್ಜೆ ಇಟ್ಟಿವೆ’ ಎಂದರು.

ಸಾಧನೆಗೈದ ಕಾಲೇಜಿನ ಹಳೆಯ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.