ADVERTISEMENT

ಲಾಲ್‌ಬಾಗ್‌ ಫಲಪುಷ್ಪ ಪ್ರದರ್ಶನ: ಗೊಮ್ಮಟಗಿರಿ ನೋಡಿದ ಜನಸಾಗರ!

​ಪ್ರಜಾವಾಣಿ ವಾರ್ತೆ
Published 26 ಜನವರಿ 2018, 19:51 IST
Last Updated 26 ಜನವರಿ 2018, 19:51 IST
ಲಾಲ್‌ಬಾಗ್‌ ದ್ವಾರದಲ್ಲಿ ಕಂಡುಬಂದ ಜನಸಾಗರ –ಪ್ರಜಾವಾಣಿ ಚಿತ್ರ
ಲಾಲ್‌ಬಾಗ್‌ ದ್ವಾರದಲ್ಲಿ ಕಂಡುಬಂದ ಜನಸಾಗರ –ಪ್ರಜಾವಾಣಿ ಚಿತ್ರ   

ಬೆಂಗಳೂರು: ‌ಲಾಲ್‌ಬಾಗ್‌ನಲ್ಲಿ ಗಣರಾಜ್ಯೋತ್ಸವ ಫಲಪುಷ್ಪ ಪ್ರದರ್ಶನದ ಪ್ರಯುಕ್ತ ಗಾಜಿನ ಮನೆಯಲ್ಲಿ ನಿರ್ಮಿಸಿರುವ ಶ್ರವಣಬೆಳಗೊಳದ ಗೊಮ್ಮಟಗಿರಿಯನ್ನು ಶುಕ್ರವಾರ 1.31 ಲಕ್ಷ ಮಂದಿ ವೀಕ್ಷಿಸಿದರು.

‘ರಜಾ ಇದ್ದಿದ್ದರಿಂದ ನಿರೀಕ್ಷೆಗೂ ಮೀರಿ ಜನ ಬಂದಿದ್ದಾರೆ. 90,480 ವಯಸ್ಕರು, 6,305 ಮಕ್ಕಳು,  26,830 ಶಾಲಾ ಮಕ್ಕಳು, ಪಾಸ್ ಹೊಂದಿರುವ 5,950 ಮಂದಿ ಭೇಟಿ ನೀಡಿದ್ದಾರೆ. ಒಟ್ಟು ₹ 55.55 ಲಕ್ಷ ಸಂಗ್ರಹವಾಗಿದೆ’ ಎಂದು ರಾಜ್ಯ ತೋಟಗಾರಿಕೆ ಇಲಾಖೆಯ ಉಪನಿರ್ದೇಶಕ ಎಂ.ಆರ್. ಚಂದ್ರಶೇಖರ್ ತಿಳಿಸಿದರು.

ಲಾಲ್‌ಬಾಗ್ ಸುತ್ತಮುತ್ತ ದಿನವಿಡೀ ಸಂಚಾರ ದಟ್ಟಣೆ ಕಂಡುಬಂದಿತು. ಉದ್ಯಾನದ ನಾಲ್ಕು ಕಡೆಗಳಲ್ಲಿ ವಾಹನ ನಿಲುಗಡೆ ವ್ಯವಸ್ಥೆ ಮಾಡಲಾಗಿತ್ತು. ಹೆಚ್ಚಿನ ಸಂಖ್ಯೆಯಲ್ಲಿ ವಾಹನಗಳು ಬಂದಿದ್ದರಿಂದ ಸ್ಥಳದ ಕೊರತೆ ಉಂಟಾಯಿತು. ಉದ್ಯಾನದ ಎಲ್ಲ ಪ್ರವೇಶ ದ್ವಾರಗಳಲ್ಲಿ ಜನದಟ್ಟಣೆಯನ್ನು ನಿಯಂತ್ರಿಸಲು ಭದ್ರತಾ ಸಿಬ್ಬಂದಿ, ಪೊಲೀಸರು ಹರಸಾಹಸಪಟ್ಟರು.‌

ADVERTISEMENT

ಸಂಜೆ ಊರ್ವಶಿ ಚಿತ್ರಮಂದಿರದ ಕಡೆಯಿಂದ ಲಾಲ್‌ಬಾಗ್ ರಸ್ತೆ ಮೂಲಕ ಹೊಸೂರು ರಸ್ತೆಯನ್ನು ಸಂಪರ್ಕಿಸುವ ಮಾರ್ಗವನ್ನು ಏಕಮುಖ ಸಂಚಾರವಾಗಿ ಪರಿರ್ವತಿಸಲಾಗಿತ್ತು. ದ್ವಿಚಕ್ರ ವಾಹನಗಳಿಗಷ್ಟೇ ಅವಕಾಶ ಮಾಡಿಕೊಡಲಾಗಿತ್ತು.

ಫಲಪುಷ್ಪ ಪ್ರದರ್ಶನ ವೀಕ್ಷಿಸಿದವರು

* 3.29 ಲಕ್ಷ ಎಂಟು ದಿನಗಳಲ್ಲಿ ಭೇಟಿ ನೀಡಿದ ಜನ

* 1.31 ಲಕ್ಷ ಶುಕ್ರವಾರ ಭೇಟಿ ನೀಡಿದ ಜನ

* ₹1.20 ಕೋಟಿ ಹಣ ಸಂಗ್ರಹಗೊಂಡಿದೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.