ADVERTISEMENT

‘ಆರು ಪಥ ರಸ್ತೆ ಕಾಮಗಾರಿ ಶೀಘ್ರ ಆರಂಭ’

​ಪ್ರಜಾವಾಣಿ ವಾರ್ತೆ
Published 29 ಜನವರಿ 2018, 19:30 IST
Last Updated 29 ಜನವರಿ 2018, 19:30 IST
ಎಚ್‌.ಸಿ.ಮಹದೇವಪ್ಪ ಮಾತನಾಡಿದರು. ಎಫ್‌ಕೆಸಿಸಿಐ ಅಧ್ಯಕ್ಷ ಕೆ.ರವಿ ಇದ್ದಾರೆ- ಪ್ರಜಾವಾಣಿ ಚಿತ್ರ
ಎಚ್‌.ಸಿ.ಮಹದೇವಪ್ಪ ಮಾತನಾಡಿದರು. ಎಫ್‌ಕೆಸಿಸಿಐ ಅಧ್ಯಕ್ಷ ಕೆ.ರವಿ ಇದ್ದಾರೆ- ಪ್ರಜಾವಾಣಿ ಚಿತ್ರ   

ಬೆಂಗಳೂರು: ‘ಬೆಂಗಳೂರು–ಮೈಸೂರು ನಡುವಿನ ಆರು ಪಥದ ರಸ್ತೆ ಕಾಮಗಾರಿಯನ್ನು ಶೀಘ್ರದಲ್ಲಿ ಆರಂಭಿಸುತ್ತೇವೆ’ ಎಂದು ಲೋಕೋಪಯೋಗಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಹೇಳಿದರು.

ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆ (ಎಫ್‌ಕೆಸಿಸಿಐ) ನಗರದಲ್ಲಿ ಸೋಮವಾರ ಆಯೋಜಿಸಿದ್ದ ಸಂವಾದದಲ್ಲಿ ಮಾತನಾಡಿದರು.

‘ಬೆಂಗಳೂರು–ಮೈಸೂರು ರಸ್ತೆಯಲ್ಲಿ ಪ್ರತಿನಿತ್ಯ 1 ಲಕ್ಷ ವಾಹನಗಳು ಸಂಚರಿಸುತ್ತಿವೆ. ಇದರಿಂದ ಹೆಚ್ಚು ದಟ್ಟಣೆ ಉಂಟಾಗುತ್ತಿದೆ. ರಸ್ತೆ ವಿಸ್ತರಣೆಗಾಗಿ ಭೂಸ್ವಾಧೀನ ಪ್ರಕ್ರಿಯೆ ಶೀಘ್ರದಲ್ಲಿ ಪೂರ್ಣಗೊಳ್ಳಲಿದೆ’ ಎಂದರು.

ADVERTISEMENT

‘ಹೊಸಕೋಟೆ, ದೇವನಹಳ್ಳಿ, ನೆಲಮಂಗಲ, ದಾಬಸ್‌ಪೇಟೆ, ಬಿಡದಿ ಹಾಗೂ ರಾಮನಗರಕ್ಕೆ ಸಂಪರ್ಕ ಕಲ್ಪಿಸಲು ವರ್ತುಲ ರಸ್ತೆ ನಿರ್ಮಿಸಲು ಕೇಂದ್ರ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಿದ್ದೇವೆ’ ಎಂದು ಮಾಹಿತಿ ನೀಡಿದರು.

ಪರ್ಯಾಯ ರಸ್ತೆ ಶೀಘ್ರ ಪೂರ್ಣ: ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸಲು ರಾಷ್ಟ್ರೀಯ ಹೆದ್ದಾರಿ– 7ಕ್ಕೆ (ಬಳ್ಳಾರಿ ರಸ್ತೆ) ಪರ್ಯಾಯವಾಗಿ ನಿರ್ಮಿಸುತ್ತಿರುವ ರಸ್ತೆ ಕಾಮಗಾರಿ ಫೆಬ್ರುವರಿ ಅಂತ್ಯಕ್ಕೆ ಪೂರ್ಣಗೊಳ್ಳಲಿದೆ ಎಂದು ಹೇಳಿದರು.

ವಿಮಾನ ನಿಲ್ದಾಣಕ್ಕೆ ವಿದ್ಯುತ್ ಸಂಪರ್ಕ ಕಲ್ಪಿಸುವ 120 ಕೆ.ವಿ ಸಾಮರ್ಥ್ಯದ ವಿದ್ಯುತ್ ತಂತಿ ಇಲ್ಲಿನ ಕಾಮಗಾರಿಗೆ ಅಡ್ಡಿಯಾಗಿದೆ. ಪರ್ಯಾಯವಾಗಿ ವಿದ್ಯುತ್ ತಂತಿ ಅಳವಡಿಕೆ ಕಾರ್ಯ ಆರಂಭವಾಗಿದ್ದು, 15 ದಿನಗಳಲ್ಲಿ ಪೂರ್ಣಗೊಳ್ಳಲಿದೆ ಎಂದರು.

ಪರ್ಯಾಯ ರಸ್ತೆಯು ಸಂಚಾರಕ್ಕೆ ಮುಕ್ತವಾದರೆ ವಿಮಾನ ನಿಲ್ದಾಣ ರಸ್ತೆಯ ದಟ್ಟಣೆ ಸಮಸ್ಯೆ ಬಹುತೇಕ ನಿವಾರಣೆಯಾಗಲಿದೆ. ಹೊಸ ರಸ್ತೆಯಲ್ಲಿ ಯಾವುದೇ ಟೋಲ್‌ಗಳು ನಿರ್ಮಾಣವಾಗುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.