ADVERTISEMENT

ತಾಂಬೂಲಕ್ಕೆ ಕಾಯಿ ಹೋಗಿ ಮೋಸಂಬಿ ಬಂತು!

₹38ಕ್ಕೆ ತಲುಪಿದ ತೆಂಗಿನಕಾಯಿ: ಗ್ರಾಹಕರಿಗೆ ತಲೆನೋವು, ಮನೆಗಳಲ್ಲಿ ರುಚಿಗೆ ಮಾತ್ರ ಸೀಮಿತ

​ಪ್ರಜಾವಾಣಿ ವಾರ್ತೆ
Published 29 ಜನವರಿ 2018, 20:10 IST
Last Updated 29 ಜನವರಿ 2018, 20:10 IST
ತಾಂಬೂಲಕ್ಕೆ ಕಾಯಿ ಹೋಗಿ ಮೋಸಂಬಿ ಬಂತು!
ತಾಂಬೂಲಕ್ಕೆ ಕಾಯಿ ಹೋಗಿ ಮೋಸಂಬಿ ಬಂತು!   

ಬೆಂಗಳೂರು: ಮದುವೆ ಮನೆಯಲ್ಲಿ ತಾಂಬೂಲದಲ್ಲಿ ತೆಂಗಿನಕಾಯಿ ಬದಲಿಗೆ ಮೋಸಂಬಿ ಮತ್ತು ಬಾಳೆಹಣ್ಣು ನೀಡುತ್ತಿದ್ದಾರೆ. ಹೋಟೆಲ್‌ಗಳಲ್ಲಿ ಇಡ್ಲಿ, ದೋಸೆ ಜತೆಗೆ ನೀಡುತ್ತಿದ್ದ ಚಟ್ನಿಯನ್ನು ಉಪ್ಪಿನಕಾಯಿಯಂತೆ ಕೊಡುತ್ತಿದ್ದಾರೆ. ಬಹುತೇಕರ ಅಡುಗೆ ಮನೆಗಳಲ್ಲಿ ತೆಂಗಿನಕಾಯಿ ರುಚಿಗೆ ಮಾತ್ರ ಸೀಮಿತಗೊಂಡಿದೆ.

ಒಂದು ತೆಂಗಿನಕಾಯಿ ಬೆಲೆ ₹38ರಿಂದ ₹50ರ ಆಸುಪಾಸಿಗೆ ತಲುಪಿರುವುದೇ ಈ ಪರಿಸ್ಥಿತಿಗೆ ಪ್ರಮುಖ ಕಾರಣ. ತೆಂಗಿನಕಾಯಿ ಬೆಲೆ ಈಗ ಗಗನಕ್ಕೇರಿದೆ. ದರ ಏರುಗತಿಯಲ್ಲಿರುವುದರಿಂದ ಹೋಟೆಲ್‌, ರೆಸ್ಟೋರೆಂಟ್‌ ಮಾಲೀಕರು ಊಟದ ದರ ಏರಿಸಲು, ಆಹಾರದ ಪ್ರಮಾಣ ಕಡಿಮೆ ಮಾಡಲು ದಾರಿ ಹುಡುಕುತ್ತಿದ್ದಾರೆ. ತಿಂಡಿ ಜತೆಗೆ ನೀಡುವ ಚಟ್ನಿ ಪ್ರಮಾಣ ತಗ್ಗಿಸಿದ್ದಾರೆ.

ಗ್ರಾಹಕರು ಎಷ್ಟೇ ಚೌಕಾಸಿ ಮಾಡಿದರೂ ತೆಂಗಿನಕಾಯಿಯಲ್ಲಿ ಒಂದೇ ಒಂದು ರೂಪಾಯಿ ಲಾಭ ಬಿಟ್ಟು ಕೊಡಲು ವರ್ತಕರು ಒಪ್ಪುತ್ತಿಲ್ಲ. ಹಾಪ್‌ಕಾಮ್ಸ್‌ನಲ್ಲೂ ದಪ್ಪ ತೆಂಗಿನಕಾಯಿಗೆ ₹38 ಮತ್ತು ಸಣ್ಣ ತೆಂಗಿನಕಾಯಿಗೆ ₹29 ದರ ಇದೆ. ಇನ್ನೂ ಚಿಲ್ಲರೆ ಅಂಗಡಿಗಳಲ್ಲಿ ತೆಂಗಿನಕಾಯಿಗಳ ಗಾತ್ರಕ್ಕೆ ಅನುಸಾರವಾಗಿ ₹40ರಿಂದ ₹50ರವರೆಗೆ ಮಾರಾಟ ಮಾಡುತ್ತಿದ್ದಾರೆ. ಇನ್ನೂ ಕೆಲವು ಅಂಗಡಿಗಳಲ್ಲಿ ಎಳೆಯ ತೆಂಗಿನಕಾಯಿಗಳನ್ನೂ ಮಾರುತ್ತಿದ್ದಾರೆ.

ADVERTISEMENT

‘ತೆಂಗಿನಕಾಯಿ ಬೆಲೆ ಏರಿಕೆ ವಾರದ ಖರ್ಚಿನ ಮೇಲೂ ಪರಿಣಾಮ ಬೀರಿದೆ. ಅಂಗಡಿಯಿಂದ ದಿನಸಿ ತರುವಾಗ ತೆಂಗಿನಕಾಯಿ ಕಡಿಮೆ ಮಾಡಿದ್ದೇವೆ. ದೋಸೆ ಮತ್ತು ಇಡ್ಲಿಗೆ ಮಾಡಿದ ಚಟ್ಟಿ ಉಳಿದರೆ ಫ್ರಿಜ್‌ನಲ್ಲಿಟ್ಟು ಬಳಸುತ್ತಿದ್ದೇವೆ’ ಎನ್ನುತ್ತಾರೆ ಗೃಹಿಣಿ ಮೀನಾಕ್ಷಿ.

‘ವಿದೇಶಗಳಲ್ಲಿ ಉತ್ತಮ ಬೆಲೆ ಸಿಗುತ್ತಿರುವುದರಿಂದ ತೆಂಗಿನಕಾಯಿ ರಫ್ತು ಹೆಚ್ಚುತ್ತಿದೆ. ರಾಜ್ಯದಿಂದ ಹಿಂದಿನ ವರ್ಷ 2,500 ಟನ್‌ ರಫ್ತಾಗಿದೆ. ಈ ಬಾರಿಯ ಹಣಕಾಸು ವರ್ಷದೊಳಗೆ ರಫ್ತು ಪ್ರಮಾಣ 3,000 ಟನ್‌ಗೆ  ತಲುಪಲಿದೆ. ವಿದೇಶದ ಮಾರುಕಟ್ಟೆಯಲ್ಲಿ ಉತ್ತಮ ಬೆಲೆ ಬಂದಿರುವುದರಿಂದ ಸ್ಥಳೀಯ ಮಾರುಕಟ್ಟೆಗೆ ಬರುತ್ತಿರುವ ಆವಕದ ಪ್ರಮಾಣ ಕಡಿಮೆಯಾಗಿದೆ. ಹಾಗಾಗಿ ಬೆಲೆ ಏರಿಕೆಯಾಗಿದೆ’ ಎನ್ನುತ್ತಾರೆ ರಾಜ್ಯ ತೆಂಗು ಅಭಿವೃದ್ಧಿ ಮಂಡಳಿ ಅಧ್ಯಕ್ಷ ಜೆ.ಜಿ.ಹೇಮಚಂದ್ರ.

ಪ್ರಮುಖವಾಗಿ ತೆಂಗು ಬೆಳೆಯುವ ತಮಿಳುನಾಡು, ರಾಜ್ಯದ ತಿಪಟೂರು, ರಾಮನಗರ, ಚನ್ನರಾಯಪಟ್ಟಣ, ಚನ್ನಪಟ್ಟಣ ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ತೆಂಗು ಬೆಳೆ ನುಸಿ ಕಾಯಿಲೆ ಮತ್ತು ಬರಗಾಲದಿಂದ ಹಾಳಾಗಿದೆ. ಹಾಗಾಗಿ ಉತ್ಪಾದನೆ ಕಡಿಮೆಯಾಗಿದೆ ಎನ್ನುತ್ತಾರೆ ಮಂಡಳಿ ಸದಸ್ಯರು ಮತ್ತು ಬೆಳೆಗಾರರು.

ತೆಂಗಿನ ಕಾಯಿ ಬೆಲೆ ಏರಿಕೆ ತಗ್ಗಿಸಲು ಸರ್ಕಾರ ತೆಂಗಿನ ಕಾಯಿ ಆಮದು ಮಾಡಿಕೊಳ್ಳುವ ಬಗ್ಗೆ ನಿರ್ಧಾರ ಮಾಡಿಲ್ಲ. ಮಾರುಕಟ್ಟೆಯಲ್ಲಿ ಸಾಕಷ್ಟು ಪ್ರಮಾಣದಲ್ಲಿ ತೆಂಗಿನ ಕಾಯಿ ದಾಸ್ತಾನು ಇದೆ. ಬೆಲೆಯೂ ಅಷ್ಟೇನೂ ದುಬಾರಿ ಮಟ್ಟಕ್ಕೆ ತಲುಪಿಲ್ಲ ಎನ್ನುತ್ತಾರೆ ತೋಟಗಾರಿಕೆ ಇಲಾಖೆ ಅಧಿಕಾರಿಗಳು.

‘ತೆಂಗಿನಕಾಯಿಗಳನ್ನು ಸಗಟು ಖರೀದಿಸುವವರಿಗೆ ನಾವೇ ರಿಯಾಯಿತಿ ದರದಲ್ಲಿ ನೀಡುತ್ತಿದ್ದೇವೆ. ಮಾರುಕಟ್ಟೆಯಲ್ಲಿ ತೆಂಗಿನಕಾಯಿಗೆ ಪ್ರತಿ ಕೆ.ಜಿ.ಗೆ ₹40 ದರ ಇದೆ. ದೇವಸ್ಥಾನ ,ಮದುವೆ ಸಮಾರಂಭಗಳಿಗೆ ಪ್ರತಿ ಕೆ.ಜಿ.ಗೆ ₹10 ರಿಯಾಯಿತಿ ಕೊಡುತ್ತಿದ್ದೇನೆ’ ಎಂದು ಎಪಿಎಂಸಿ ಮಾರುಕಟ್ಟೆಯ ಅಣ್ಣಮ್ಮ ಟ್ರೇಡಿಂಗ್‌ ಕಂಪನಿ ಮಾಲೀಕ ವಿ.ವೆಂಕಟೇಶ್‌ ತಿಳಿಸಿದರು. ‘ದಕ್ಷಿಣ ಭಾರತದ ಆಹಾರಗಳಲ್ಲಿ ತೆಂಗಿನಕಾಯಿ ಪ್ರಮುಖವಾಗಿ ಬಳಕೆಯಾಗುತ್ತದೆ. ತೆಂಗಿನ ಕಾಯಿ ಇಲ್ಲದೆ ಅಡುಗೆ ತಯಾರಿಸಲು ಸಾಧ್ಯವೂ ಇಲ್ಲ. 10 ತೆಂಗಿನಕಾಯಿ ಬಳಸಿ ತಯಾರಿ
ಸಬೇಕಾದ ಅಡುಗೆಗೆ 7 ತೆಂಗಿನಕಾಯಿ ಬಳಸುವ ಬುದ್ಧಿವಂತಿಕೆ ತೋರಿ, ವೆಚ್ಚ ತಗ್ಗಿಸಬೇಕಾಗಿದೆ’ ಎನ್ನುತ್ತಾರೆ ಬೆಂಗಳೂರು ಹೋಟೆಲ್ಸ್‌ ಅಸೋಸಿಯೇಷನ್‌ ಖಜಾಂಚಿ ವೀರೇಂದ್ರ ಎನ್‌.ಕಾಮತ್‌.
**
ಮದುವೆಗಳಲ್ಲಿ ಅತಿಥಿಗಳಿಗೆ ತಾಂಬೂಲದಲ್ಲಿ ತೆಂಗಿನ ಕಾಯಿಗೆ ಬದಲಿಗೆ ಈಗ ಬಾಳೆಹಣ್ಣು, ಮೋಸಂಬಿ ನೀಡುತ್ತಿದ್ದಾರೆ.
  –ವಿ.ಮಂಜುನಾಥ್‌, ತಿಪಟೂರು ಕೊಕನಟ್‌ ಟ್ರೇಡಿಂಗ್‌ ಕಂಪನಿ ಮಾಲೀಕ
**

ಹಿಂದಿನ ವರ್ಷ ತೆಂಗಿನ ಕಾಯಿ ಬೆಲೆ ₹30ಕ್ಕೆ ತಲುಪಿತ್ತು. ಈ ವರ್ಷ ₹38ಕ್ಕೆ ತಲುಪಿದೆ. ಬರುವ ದಿನಗಳಲ್ಲಿ ಬೆಲೆ ಇನ್ನಷ್ಟು ಏರಲಿದೆ
   - ಚಂದ್ರೇಗೌಡ, ಹಾಪ್‌ಕಾಮ್ಸ್‌ ಅಧ್ಯಕ್ಷ  
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.