ADVERTISEMENT

ಹೆರಿಗೆ ಕೇಂದ್ರ ಸ್ಥಾಪನೆಗೆ ಗ್ರಾಮಸ್ಥರ ಒತ್ತಾಯ

ನಿರ್ವಾಣ ಸಿದ್ದಯ್ಯ
Published 1 ಫೆಬ್ರುವರಿ 2018, 19:30 IST
Last Updated 1 ಫೆಬ್ರುವರಿ 2018, 19:30 IST
ಹೆರಿಗೆ ಕೇಂದ್ರ ಸ್ಥಾಪನೆಗೆ ಗ್ರಾಮಸ್ಥರ ಒತ್ತಾಯ
ಹೆರಿಗೆ ಕೇಂದ್ರ ಸ್ಥಾಪನೆಗೆ ಗ್ರಾಮಸ್ಥರ ಒತ್ತಾಯ   

ಬೆಂಗಳೂರು: ಚಿಕ್ಕಬಾಣಾವರದ ದ್ವಾರಕನಗರದಲ್ಲಿನ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಹೆರಿಗೆ ಕೇಂದ್ರ ಸ್ಥಾಪಿಸಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.

‘2014ರಲ್ಲಿ ಉದ್ಘಾಟನೆಯಾಗಿದ್ದ ಪ್ರಾಥಮಿಕ ಆರೋಗ್ಯ ಕೇಂದ್ರದ ಹೊಸ ಕಟ್ಟಡ ಸುಸಜ್ಜಿತವಾಗಿದ್ದು, ಇಲ್ಲೊಂದು ಹೆರಿಗೆ ಕೇಂದ್ರ ಸ್ಥಾಪಿಸಿ ಎಂದು ಆಗ ಆರೋಗ್ಯ ಸಚಿವರಾಗಿದ್ದ ಯು.ಟಿ.ಖಾದರ್‌ ಅವರಿಗೆ ಮನವಿ ಮಾಡಿದ್ದೆವು. ಇನ್ನೂ ನಮ್ಮ ಬೇಡಿಕೆ ಈಡೇರಲಿಲ್ಲ’ ಎಂದು ದ್ವಾರಕನಗರ ನಿವಾಸಿ ಬಿ.ಮಂಜುನಾಥ್‌ ಬೇಸರದಿಂದ ನುಡಿದರು.

‘ಚಿಕ್ಕಬಾಣಾವರದಿಂದ ಆರು ಕಿ.ಮೀ. ದೂರವಿರುವ ಅಬ್ಬಿಗೆರೆ, ಬಾಗಿಲುಗುಂಟೆಯ ಆಸ್ಪತ್ರೆಗೆ ಹೋಗಬೇಕಿದೆ. ಅಬ್ಬಿಗೆರೆಗೆ ಅಟೋದಲ್ಲಿ ಹೋಗಲು ₹100 ಕೇಳುತ್ತಾರೆ. ಇಲ್ಲಿನ ಆಸ್ಪತ್ರೆಯಲ್ಲಿಯೇ ಅನುಕೂಲ ಕಲ್ಪಿಸಿದರೆ, ಬಡವರಿಗೆ ನೆರವಾಗುತ್ತದೆ’ ಎಂದು ಗ್ರಾಮ ಪಂಚಾಯಿತಿ ಸದಸ್ಯೆ ಭಾಗ್ಯಮ್ಮ ಹೇಳಿದರು.

ADVERTISEMENT

ಚಿಕ್ಕಬಾಣಾವರದಲ್ಲಿ ಹೆರಿಗೆ ಕೇಂದ್ರವಾದರೆ 5 ಕಿ.ಮೀ. ವ್ಯಾಪ್ತಿಯ ಕೆಂಪಾಪುರ, ಸೋಲದೇವನಹಳ್ಳಿ, ಗಾಣಿಗರ ಹಳ್ಳಿ, ಸಾಸುವೆಘಟ್ಟ, ತರಬನಹಳ್ಳಿ, ಕುಂಬಾರಹಳ್ಳಿ ಜನರಿಗೆ ಉಪಯುಕ್ತವಾಗುತ್ತದೆ ಎಂದು ಅವರು ಹೇಳಿದರು.

ಉತ್ತರ ತಾಲ್ಲೂಕು ಅರೋಗ್ಯ ವೈದ್ಯಾಧಿಕಾರಿ ರಮೇಶ್ ಬಾಬು ಅವರು ಸರ್ಕಾರ ಮಂಜೂರು ನೀಡಿದರೆ ಖಂಡಿತ ಹೆರಿಗೆ ಕೇಂದ್ರ ಸ್ಥಾಪಿಸಬಹುದು ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.