ADVERTISEMENT

ಮನೆಗೆ ಪುಸ್ತಕ ಕೊಂಡೊಯ್ಯಲು ಅವಕಾಶ

ನಿಸರ್ಗ ಎಂ.ಎನ್‌
Published 4 ಫೆಬ್ರುವರಿ 2018, 19:39 IST
Last Updated 4 ಫೆಬ್ರುವರಿ 2018, 19:39 IST
ಗ್ರಂಥಾಲಯದಲ್ಲಿ ಓದಿನಲ್ಲಿ ನಿರತರಾದ ಮಕ್ಕಳು– ಪ್ರಜಾವಾಣಿ ಚಿತ್ರ
ಗ್ರಂಥಾಲಯದಲ್ಲಿ ಓದಿನಲ್ಲಿ ನಿರತರಾದ ಮಕ್ಕಳು– ಪ್ರಜಾವಾಣಿ ಚಿತ್ರ   

ಬೆಂಗಳೂರು: ನಗರದ ಜಯಚಾಮರಾಜೇಂದ್ರ ಉದ್ಯಾನದಲ್ಲಿರುವ (ಕಬ್ಬನ್‌ ಉದ್ಯಾನ) ಇಂದಿರಾ ಪ‍್ರಿಯದರ್ಶಿನಿ ರಾಜ್ಯ ಮಕ್ಕಳ ಗ್ರಂಥಾಲಯದಲ್ಲಿ ಇತ್ತೀಚಿನವರೆಗೂ ಮಕ್ಕಳು ಪುಸ್ತಕವನ್ನು ಮನೆಗೆ ಒಯ್ಯಲು ಅವಕಾಶ ಇರಲಿಲ್ಲ. ಇನ್ನು ಮುಂದೆ ಮಕ್ಕಳು ಇದರ ಸದಸ್ಯತ್ವ ಪಡೆದು ನೆಚ್ಚಿನ ಪುಸ್ತಕವನ್ನು ಮನೆಗೂ ಒಯ್ಯಬಹುದು.

ಐದರಿಂದ 14 ವರ್ಷದ ಒಳಗಿನವರು ಈ ಸೌಲಭ್ಯ ಬಳಸಿಕೊಳ್ಳಬಹುದು. ಕಳೆದ ಶನಿವಾರದಿಂದ ಈ ಅವಕಾಶ ಕಲ್ಪಿಸಲಾಗಿದೆ.

ಒಬ್ಬರಿಗೆ ಮೂರು ಪುಸ್ತಕ: ‘ಸದಸ್ಯತ್ವ ಪಡೆದವರು ಒಂದು ಬಾರಿಗೆ ಮೂರು ಪುಸ್ತಕಗಳನ್ನು ಎರವಲು ಪಡೆಯಬಹುದು. ಒಂದು ಪುಸ್ತಕ ಪಡೆಯಲು ₹50, ಎರಡು ಪುಸ್ತಕ ಪಡೆಯಲು ₹75, ಮೂರು ಪುಸ್ತಕ ಪಡೆಯಲು ₹100 ಠೇವಣಿ ಇಡಬೇಕು. ಸದಸ್ಯತ್ವ ರದ್ದತಿ ಸಮಯದಲ್ಲಿ ಠೇವಣಿ ಹಣ ಮರಳಿಸುತ್ತೇವೆ’ ಎಂದು ಇಲಾಖೆಯ ನಿರ್ದೇಶಕ ಡಾ. ಸತೀಶ್‌ ಕುಮಾರ್‌ ಎಸ್‌. ಹೊಸಮನಿ ‘ಪ್ರಜಾವಾಣಿ’ಗೆ ತಿಳಿಸಿದರು. 

ADVERTISEMENT

ಏನೆಲ್ಲ ಲಭ್ಯ: 1994ರಲ್ಲಿ ಸ್ಥಾಪನೆಯಾದ ಈ ಗ್ರಂಥಾಲಯದಲ್ಲಿ 5000ಕ್ಕೂ ಹೆಚ್ಚು ಪುಸ್ತಕಗಳಿವೆ. ಎನ್‌ಸೈಕ್ಲೋ‍ಪಿಡಿಯಾ, ಬ್ರಿಟಾನಿಕಾ ಎನ್‌ಸೈಕ್ಲೋಪಿಡಿಯಾ, ವಿಜ್ಞಾನ ಪುಸ್ತಕಗಳು, ಮಕ್ಕಳ ಕಥೆ ಪುಸ್ತಕಗಳು, ಕಾಮಿಕ್ಸ್‌, ಮಕ್ಕಳ ಕವನ, ಗಣ್ಯರ ಜೀವನ ಚರಿತ್ರೆ, ಯಿಯರ್‌ ಪುಸ್ತಕ, ಕನ್ನಡ– ಇಂಗ್ಲಿಷ್‌ ವ್ಯಾಕರಣ, ವೆಬ್‌ಸ್ಟರ್‌ ಡಿಕ್ಷನರಿ, ಯುನಿವರ್ಸಲ್‌ ಅರ್ಥ್‌, ಅಟ್ಲಾಸ್‌, ಹಿಂದಿ ಕಥೆ ‍ಪುಸ್ತಕ, ಮಕ್ಕಳ ರಾಮಾಯಣ, ಮಹಾಭಾರತ, ಗಣಿತ, ಇತಿಹಾಸಕ್ಕೆ ಸಂಬಂಧಿಸಿದ ಕೃತಿಗಳು ಇಲ್ಲಿ ಲಭ್ಯ. ಕಂಪ್ಯೂಟರ್‌, ಆಟಿಕೆಗಳೂ ಲಭ್ಯ ಇವೆ.

ಇಷ್ಟೆಲ್ಲ ಸೌಲಭ್ಯಗಳಿದ್ದರೂ ಹೆಚ್ಚಿನ ಸಂಖ್ಯೆಯಲ್ಲಿ ಮಕ್ಕಳನ್ನು ಸೆಳೆಯುವಲ್ಲಿ ಗ್ರಂಥಾಲಯ ಸೋತಿದೆ.

‘ಗ್ರಂಥಾಲಯ ಜನವಸತಿ ಪ್ರದೇಶದಿಂದ ದೂರವಿದೆ. ಮಕ್ಕಳಿಗೂ ಸಮಯವಿಲ್ಲ. ಅವರನ್ನು ಕರೆತರಲು ಪೋಷಕರಿಗೆ ಸಮಯ ಇರುವುದಿಲ್ಲ. ಶಾಲೆ ಮುಗಿದ ನಂತರ ಮನೆಗೆಲಸ, ಮನೆಪಾಠ ಮುಗಿಸುವಷ್ಟರಲ್ಲಿ ರಾತ್ರಿಯಾಗಿರುತ್ತದೆ. ಆದರೂ, ಬಾಲಭವನಕ್ಕೆ ಬರುವ ಚಿಣ್ಣರನ್ನು ಸೆಳೆಯುವ ‍ಪ್ರಯತ್ನ ಮಾಡುತ್ತಿದ್ದೇವೆ. ಶಾಲೆಗಳಿಗೆ ತೆರಳಿ ಇಲ್ಲಿರುವ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡುತ್ತಿದ್ದೇವೆ’ ಎಂದು ಉಪನಿರ್ದೇಶಕಿ ಸರೋಜಮ್ಮ ತಿಳಿಸಿದರು.

ಮಕ್ಕಳಿಗಾಗಿ ವಿಶೇಷ ಕಾರ್ಯಕ್ರಮ

ಚಿಣ್ಣರಿಗಾಗಿ ಕಥೆ ಹೇಳುವುದು, ಕರಕುಶಲ ವಸ್ತುಗಳ ತಯಾರಿ, ವಿಜ್ಞಾನ ‍ಪ್ರಯೋಗ, ಮೂಢನಂಬಿಕೆ ವಿರುದ್ಧ ಜಾಗೃತಿ, ಚಿತ್ರಕಲೆ, ಬರವಣಿಗೆ ಕೌಶಲ, ವ್ಯಕ್ತಿತ್ವ ವಿಕಸನ, ಪ್ರಬಂಧ ರಚಿಸುವುದು, ಏಕ‍ಪಾತ್ರಾಭಿನಯ, ನಾಟಕ, ಚಲನಚಿತ್ರ ಪ್ರದರ್ಶನ, ಜಾದೂ ಪ್ರದರ್ಶನ, ಪ‍ತ್ರಿಕೆ ವಾಚನ ಕಾರ್ಯಕ್ರಮಗಳನ್ನು ಪ್ರತಿ ಎರಡನೇ ಶನಿವಾರ ಇಲಾಖೆ ಹಮ್ಮಿಕೊಳ್ಳುತ್ತದೆ.

ಪ್ರತಿ ವರ್ಷ ನವೆಂಬರ್‌ 14ರಿಂದ 20ರವರೆಗೆ ರಾಷ್ಟ್ರೀಯ ಗ್ರಂಥಾಲಯ ಸಪ್ತಾಹ, ಆಗಸ್ಟ್‌ 12ರಂದು ಗ್ರಂಥಾಲಯ ದಿನಾಚರಣೆ ಆಚರಿಸಲಾಗುತ್ತದೆ. ವಿಶ್ವ ಪುಸ್ತಕ ದಿನದಂದು (ಏಪ್ರಿಲ್‌ 23) ಗಾಯನ, ಪ್ರಬಂಧ, ರಸಪ್ರಶ್ನೆ ಸ್ಪರ್ಧೆಗಳನ್ನು ಏರ್ಪಡಿಸಲಾಗುತ್ತದೆ.

ಬೇಸಿಗೆ ಶಿಬಿರ: ಪ್ರಸಕ್ತ ವರ್ಷದಿಂದ ಇಲಾಖೆಯು ಬಾಲ ಭವನದ ಸಹಯೋಗದಲ್ಲಿ ಬೇಸಿಗೆ ಶಿಬಿರ ನಡೆಸಲು ಯೋಜನೆ ರೂಪಿಸಿದೆ.

ವೈಶಿಷ್ಟ್ಯ

ರಾಜ್ಯದಲ್ಲಿರುವ ಅನೇಕ ಸರ್ಕಾರಿ ಗ್ರಂಥಾಲಯಗಳಲ್ಲಿ ಮಕ್ಕಳ ವಿಭಾಗವೂ ಇರುತ್ತದೆ. ಆದರೆ, ರಾಜ್ಯದಲ್ಲಿ ಮಕ್ಕಳಿಗೆಂದೇ ಮೀಸಲಾದ ಏಕೈಕ ಸರ್ಕಾರಿ ಗ್ರಂಥಾಲಯವಿದು.

ಸಮಯ: ಬೆಳಿಗ್ಗೆ 10ರಿಂದ ಸಂಜೆ 5.30. ಪ್ರತಿ ಸೋಮವಾರ ಹಾಗೂ ತಿಂಗಳ ಎರಡನೇ ಮಂಗಳವಾರ ಗ್ರಂಥಾಲಯ ತೆರೆದಿರುವುದಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.