ADVERTISEMENT

ಚಿಣ್ಣರಿಂದ ಕೆರೆ ಹಬ್ಬ ಆಚರಣೆ

​ಪ್ರಜಾವಾಣಿ ವಾರ್ತೆ
Published 4 ಫೆಬ್ರುವರಿ 2018, 19:41 IST
Last Updated 4 ಫೆಬ್ರುವರಿ 2018, 19:41 IST
ಕೆರೆಯ ಬಳಿ ಸಮಾಲೋಚನೆಯಲ್ಲಿ ತೊಡಗಿರುವ ವಿದ್ಯಾರ್ಥಿಗಳು
ಕೆರೆಯ ಬಳಿ ಸಮಾಲೋಚನೆಯಲ್ಲಿ ತೊಡಗಿರುವ ವಿದ್ಯಾರ್ಥಿಗಳು   

ಬೆಂಗಳೂರು: ಸರ್ಜಾಪುರ ರಸ್ತೆಯ ದೊಡ್ಡಕನ್ನಹಳ್ಳಿಯ ‘ಪ್ರಕ್ರಿಯಾ ಗ್ರೀನ್‌ ವಿಸ್ಡಮ್‌’ ಶಾಲೆಯ ವಿದ್ಯಾರ್ಥಿಗಳು ಹಾಡೊಸಿದ್ದಾಪುರದ ಕೆರೆಗೆ ಮರು ಜೀವ ನೀಡುವ ಉದ್ದೇಶದಿಂದ ‘ಕೆರೆ ಹಬ್ಬ’ ಆಚರಿಸಿದರು.

ಮಕ್ಕಳು ಕೆರೆಯ ಮಡಿಲಲ್ಲಿ ಇಡೀದಿನವನ್ನು ಕಳೆದರು. ಎಳೆ ಬಿಸಿಲ ಬೆಚ್ಚನೆಯ ಅಪ್ಪುಗೆ, ಹಿತವಾದ ಗಾಳಿ, ಪಕ್ಷಿಗಳ ಕಲರವದಿಂದಾಗಿ ಅವರ ಸಂಭ್ರಮ ಇಮ್ಮಡಿಗೊಂಡಿತು.

ಈ ಕೆರೆಯಲ್ಲಿ ಹಲವಾರು ಜಾತಿಯ ಮೀನುಗಳು, ವೈವಿಧ್ಯಮಯ ಸಸ್ಯಗಳಿವೆ. ವಿವಿಧ ಜಾತಿಯ ಪಕ್ಷಿಗಳು ಇಲ್ಲಿನ ಸಾಮಾನ್ಯ ಅಥಿತಿಗಳು. ಕೆರೆ ದಂಡೆಯಲ್ಲಿ ಜಾಲಿ ಮರ ಹಾಗೂ ಹುಣಸೆ ಮರ, ನೀಲಗಿರಿ ಮರಗಳಿವೆ.

ADVERTISEMENT

ಇವೆಲ್ಲವನ್ನೂ ಕಣ್ತುಂಬಿಕೊಂಡ ಮಕ್ಕಳಿಗೆ ಜೀವ ವೈವಿಧ್ಯ–ವೈಶಿಷ್ಟ್ಯದ ಕುರಿತೂ ಕುತೂಹಲ ಮೂಡಿತು. ಇಲ್ಲಿನ ಪ್ರಶಾಂತ ಪರಿಸರದಲ್ಲಿ ಅವರು ಕೆರೆ ಸಂರಕ್ಷಿಸುವ ಕುರಿತು ಗಂಭೀರ ಚರ್ಚೆಯಲ್ಲಿ ತೊಡಗಿದರು. ನಗರದ ಕೆರೆಗಳನ್ನು ಶುಚಿ ಗೊಳಿಸುವ ಹಾಗೂ ಮಾಲಿನ್ಯ ತಡೆಯಬಹುದಾದ ವೈಜ್ಞಾನಿಕ ವಿಧಾನಗಳ ವಿಸ್ತೃತ ವರದಿಯನ್ನೂ ಚಿಣ್ಣರೇ ಸಿದ್ಧಪಡಿದರು.

8ನೇ ತರಗತಿಯ ಸಿದ್ಧಾರ್ಥ ಕುಪ್ಪಳ್ಳಿ, ಸವ್ಯಸಾಚಿ ಶೇಯಾನ್‌, ರೇನಿ ಅಹ್ಲುವಾಲಿಯಾ, ಕೌಶಿಕ್‌ ಚೆಂಗೆರಿ ಮತ್ತು ನಿಖಿತಾ ರಾಮನ್‌ ವಿವರವಾದ ಯೋಜನಾ ವರದಿಯನ್ನು ಪ್ರಾತ್ಯಕ್ಷಿಕೆ ಮೂಲಕ ವಿವರಿಸಿದರು. ಗ್ರಾಮ ಪಂಚಾಯಿತಿ ಅಧಿಕಾರಿಗಳಿಗೆ ವರದಿ ಸಲ್ಲಿಸುವುದಾಗಿ ತಿಳಿಸಿದರು.

‘ಈ ಕೆರೆ 36 ಎಕರೆ ಪ್ರದೇಶದಲ್ಲಿ ಹರಡಿಕೊಂಡಿತ್ತು. ಒತ್ತುವರಿಯಾದ ಬಳಿಕ ಈಗ 16 ಎಕರೆ ಪ್ರದೇಶದಲ್ಲಿ ಮಾತ್ರ ಕೆರೆ ಉಳಿದಿದೆ’ ಎನ್ನುತ್ತಾರೆ ಗ್ರಾಮ ಪಂಚಾಯಿತಿ ಅಧಿಕಾರಿ.  

‘ಇಂದು ನಾವು ಅಭಿವೃದ್ಧಿಯನ್ನು ಮರು ವ್ಯಾಖ್ಯಾನಿಸಬೇಕಿದೆ. ಕೆರೆಗಳು ನಗರವನ್ನು ಜೀವಂತವಾಗಿ ಇರಿಸುತ್ತವೆ. ಜಲಮೂಲವನ್ನು ರಕ್ಷಿಸದೇ ಹೋದರೆ, ನಾವೂ ಬದುಕಿ ಉಳಿಯಲಾರೆವು’ ಎಂದು ಕೆರೆ ಸಂರಕ್ಷಣಾ ಕಾರ್ಯದಲ್ಲಿ ತೊಡಗಿಸಿಕೊಂಡಿರುವ ವಿ.ರಾಮ
ಪ್ರಸಾದ್‌ ಅಭಿಪ್ರಾಯಪಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.