ADVERTISEMENT

ಟೋಲ್‌ ಪ್ಲಾಜಾ ಬಳಿ ‘ಹೈವೆ ನೆಸ್ಟ್‌’

​ಪ್ರಜಾವಾಣಿ ವಾರ್ತೆ
Published 5 ಫೆಬ್ರುವರಿ 2018, 19:30 IST
Last Updated 5 ಫೆಬ್ರುವರಿ 2018, 19:30 IST

ಬೆಂಗಳೂರು: ರಾಜ್ಯದ ರಾಷ್ಟ್ರೀಯ ಹೆದ್ದಾರಿಗಳ ಟೋಲ್‌ ಪ್ಲಾಜಾ ಬಳಿಯೇ ಪ್ರಯಾಣಿಕರಿಗೆ ಹೋಟೆಲ್‌, ವಿಶ್ರಾಂತಿ ಕೊಠಡಿ, ಶೌಚಾಲಯ ಹಾಗೂ ವಾಹನ ಪಾರ್ಕಿಂಗ್‌ ಸೌಲಭ್ಯ ಒದಗಿಸಲು ಹೆದ್ದಾರಿ ಪ್ರಾಧಿಕಾರ ಮುಂದಾಗಿದೆ.

ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ ‘ಹೈವೆ ನೆಸ್ಟ್‌’ ಹೆಸರಿನಲ್ಲಿ ಕಳೆದ ತಿಂಗಳೇ ಈ ಸೌಲಭ್ಯಗಳನ್ನು ಪರಿಚಯಿಸಲಾಗಿದೆ. ರಾಜ್ಯದಲ್ಲಿ ಇನ್ನಷ್ಟು ಕಡೆ ಈ ಸೌಲಭ್ಯ ಒದಗಿಸಲಾಗುತ್ತದೆ. ಟೋಲ್‌ ಪ್ಲಾಜಾದಿಂದ 250 ಮೀಟರ್‌ ವ್ಯಾಪ್ತಿಯ ಒಳಗೆ ಹೈವೇ ನೆಸ್ಟ್‌ ಇರಲಿದೆ.

‘ಹೈವೆ ನೆಸ್ಟ್‌, ಹೈವೆ ನೆಸ್ಟ್ ವಿಲೇಜ್‌ ಹಾಗೂ ಹೈವೆ ನೆಸ್ಟ್‌ ಮಿನಿ ಹೀಗೆ ಮೂರು ವಿಧದಲ್ಲಿ ಸೌಲಭ್ಯ ಒದಗಿಸಲಾಗುತ್ತಿದೆ. ಟೋಲ್‌ ಪ್ಲಾಜಾ ಬಳಿ ಇರುವ ಖಾಸಗಿ ಭೂ ಮಾಲೀಕರೊಂದಿಗೆ ಇದಕ್ಕಾಗಿ ಒಪ್ಪಂದ ಮಾಡಿಕೊಳ್ಳಲಾಗುತ್ತಿದೆ’ ಎಂದು ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಪ್ರಾದೇಶಿಕ ಅಧಿಕಾರಿ ವೈ.ವಿ.ಪ್ರಸಾದ್‌ ತಿಳಿಸಿದರು.

ADVERTISEMENT

ಹೈವೇ ನೆಸ್ಟ್‌ಗಳಲ್ಲಿ ಕಾರು, ಬಸ್‌, ಟ್ರಕ್‌ಗಳನ್ನು ನಿಲುಗಡೆ ಮಾಡಲು ಅವಕಾಶವಿರುತ್ತದೆ. ಪ್ರಯಾಣಿಕರಿಗೆ ಆಹಾರ ಸೌಲಭ್ಯ ಮತ್ತು ವಾಹನಗಳಿಗೆ ಇಂಧನ ಭರ್ತಿ ಮಾಡಿಕೊಳ್ಳುವ ವ್ಯವಸ್ಥೆಯೂ ಇರುತ್ತದೆ. ವಾಹನ ದುರಸ್ತಿ ಮಳಿಗೆಗಳೂ ಇರಲಿವೆ. ಪ್ರಯಾಣಿಕರಿಗೆ ಮತ್ತು ಚಾಲಕರಿಗೆ ಪ್ರತ್ಯೇಕ ವಿಶ್ರಾಂತಿ ಕೊಠಡಿಗಳೂ ಇರಲಿವೆ.

ಈ ಯೋಜನೆಯನ್ನು ಪ್ರವಾಸೋದ್ಯಮ ಸಚಿವಾಲಯದ ಸಹಭಾಗಿತ್ವದಲ್ಲಿ ಕಾರ್ಯಗತಗೊಳಿಸಲಾಗುತ್ತಿದೆ. ಮೊದಲ ಹಂತದ ಯೋಜನೆಗೆ ಬೇಕಾದ ಭೂಮಿ ನೀಡಲು ರೈತರು ಮುಂದೆ ಬಂದಿದ್ದು, ಆಸಕ್ತಿ ಪತ್ರ (ಇಒಐ) ಅಂತಿಮಗೊಳಿಸಲಾಗಿದೆ. ಎರಡನೇ ಹಂತದ ಯೋಜನೆಗೆ ಮುಂದಿನ ದಿನಗಳಲ್ಲಿ ಆಸಕ್ತಿ ಪತ್ರ ಆಹ್ವಾನಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.