ADVERTISEMENT

ಹಿಂದೂ ರಾಷ್ಟ್ರ ಮಾಡುವವರ ದ್ವೇಷಿಸುವೆ

​ಪ್ರಜಾವಾಣಿ ವಾರ್ತೆ
Published 5 ಫೆಬ್ರುವರಿ 2018, 19:30 IST
Last Updated 5 ಫೆಬ್ರುವರಿ 2018, 19:30 IST
ಮಣಿಶಂಕರ್‌ ಅಯ್ಯರ್ ಮತ್ತು ತಹಾ ಮದೀನ್ ಪರಸ್ಪರ ಶುಭ ಕೋರಿದರು. ಸ್ಟೂಡೆಂಟ್ಸ್ ಇಸ್ಲಾಮಿಕ್ ಆರ್ಗನೈಷನ್ ಆಫ್ ಇಂಡಿಯಾದ ರಾಜ್ಯ ಘಟಕದ ಅಧ್ಯಕ್ಷ ಮೊಹಮದ್‌ ರಫೀಕ್ ಇದ್ದಾರೆ –ಪ್ರಜಾವಾಣಿ ಚಿತ್ರ
ಮಣಿಶಂಕರ್‌ ಅಯ್ಯರ್ ಮತ್ತು ತಹಾ ಮದೀನ್ ಪರಸ್ಪರ ಶುಭ ಕೋರಿದರು. ಸ್ಟೂಡೆಂಟ್ಸ್ ಇಸ್ಲಾಮಿಕ್ ಆರ್ಗನೈಷನ್ ಆಫ್ ಇಂಡಿಯಾದ ರಾಜ್ಯ ಘಟಕದ ಅಧ್ಯಕ್ಷ ಮೊಹಮದ್‌ ರಫೀಕ್ ಇದ್ದಾರೆ –ಪ್ರಜಾವಾಣಿ ಚಿತ್ರ   

ಬೆಂಗಳೂರು: ‘ಭಾರತವನ್ನು ಹಿಂದೂ ರಾಷ್ಟ್ರ ಮಾಡಲು ಹೊರಟಿರುವವರನ್ನು ನಾನು ದ್ವೇಷಿಸುತ್ತೇನೆ’ ಎಂದು ಕಾಂಗ್ರೆಸ್‌ನಿಂದ ಅಮಾನತಾದ ಮುಖಂಡ ಮಣಿಶಂಕರ್‌ ಅಯ್ಯರ್‌ ತಿಳಿಸಿದರು.

ಸ್ಟೂಡೆಂಟ್ಸ್‌ ಇಸ್ಲಾಮಿಕ್‌ ಸಂಘಟನೆಯು ಸೋಮವಾರ ಆಯೋಜಿಸಿದ್ದ ‘ಬಹು ಸಂಸ್ಕೃತಿ’  ಕುರಿತ ಚರ್ಚೆಯಲ್ಲಿ ಮಾತನಾಡಿದ ಅವರು, ‘ನಮ್ಮ ಜನ
ರಿಗೆ ವೈವಿಧ್ಯದ ನಡುವೆಯೂ ಒಟ್ಟಾಗಿ ಬದುಕುವುದು ತಿಳಿದಿದೆ’ ಎಂದರು.

‘ಅನ್ಯ ಧರ್ಮದವರು ಎಂಬ ಕಾರಣಕ್ಕೆ ಯಾರನ್ನೂ ದ್ವೇಷಿಸಬಾರದು. ಭಿನ್ನ ಧರ್ಮಗಳಲ್ಲಿನ ಒಳ್ಳೆಯ ವಿಚಾರಗಳನ್ನು ಅಳವಡಿಸಿಕೊಳ್ಳಬೇಕು. ದರ್ಗಾಗಳಲ್ಲಿ ಕವಾಲಿ ನಡೆಸುತ್ತಾರೆ. ಅದು ಭಜನಾ ಮಂಡಳಿಗಳಿಂದ ಪ್ರೇರಿತವಾದ ಆಚರಣೆ’ ಎಂದು ವಿಶ್ಲೇಷಿಸಿದರು. 

ADVERTISEMENT

‘ಪಾಕಿಸ್ತಾನದಲ್ಲಿರುವ ಶಿಯಾ ಹಾಗೂ ಸುನ್ನಿ ಮುಸಲ್ಮಾನರ ನಡುವೆ ಕಂದಕ ಇದೆ. ಒಂದು ಸಮುದಾಯದವರು ಒಟ್ಟಾಗಿದ್ದರೆ ಹಿಂಸೆಗೆ ಅವಕಾಶ ಇಲ್ಲ ಎನ್ನುವುದಾದರೆ, ಪಾಕಿಸ್ತಾನದಲ್ಲಿ ಒಬ್ಬರ ವಿರುದ್ಧ ಮತ್ತೊಬ್ಬರು ಬಾಂಬ್‌ ಸ್ಫೋಟಿಸುತ್ತಿರಲಿಲ್ಲ. ನಮ್ಮ ದೇಶದಲ್ಲಿ ಶೇ 24ರಷ್ಟು ಮುಸ್ಲಿಮರಿದ್ದರೂ ಅವರೆಲ್ಲ ನಿರಾತಂಕವಾಗಿ ಒಂದೇ ಮಸೀದಿಯಲ್ಲಿ ಪ್ರಾರ್ಥನೆ ಸಲ್ಲಿಸುತ್ತಾರೆ. ಮತಾಂತರ ಮಾಡುವ ಇರಾದೆ ಅವರಿಗಿದ್ದರೆ ಭಾರತದಲ್ಲಿ ಬೇರೆ ಧರ್ಮ, ಸಂಸ್ಕೃತಿಯ ಜನರೇ ಇರುತ್ತಿರಲಿಲ್ಲ’ ಎಂದರು.

‘ನಾವು ದೇವಾಲಯಗಳಿಗೆ ಹೋದರೆ, ನಮ್ಮ ಬೇಡಿಕೆ ದೇವರಿಗೆ ತಲುಪಿಸಲು ಅರ್ಚಕರು ಇದ್ದಾರೆ. ಅವನಿಗೆ ಸಂಸ್ಕೃತ ಭಾಷೆ ಮಾತ್ರ ಅರ್ಥವಾ
ಗುತ್ತದೆ. ಅಲ್ಲಾನಿಗೆ ಎಲ್ಲ ಭಾಷೆ, ಧರ್ಮದ ಜನರೂ ನೇರವಾಗಿ ತಮ್ಮ ಬೇಡಿಕೆಗಳನ್ನು ಸಲ್ಲಿಸಬಹುದು’ ಎಂದರು.

‘ದನದ ಮಾಂಸ ಸೇವನೆ ಬಗ್ಗೆ ದೇಶವ್ಯಾಪ್ತಿ ಚರ್ಚೆಯಾಗುತ್ತಿದೆ. ಆಹಾರದ ಆಯ್ಕೆ ಜನರ ಹಕ್ಕು. ಇನ್ನೊಬ್ಬರ ಆಹಾರದ ಕುರಿತು ಚರ್ಚೆ ಅನಗತ್ಯ’  ಎಂದರು.

ಅಕುರಾ ಆಸ್ಪತ್ರೆ ನಿರ್ದೇಶಕ ಡಾ.ತಾಹಾ ಮತೀನ್‌, ‘ಒಂದೇ ಧರ್ಮ, ಭಾಷೆ ಸಂಸ್ಕೃತಿಯವರ ನಡುವೆ ಭಿನ್ನಾಭಿಪ್ರಾಯಗಳು ಇರುವುದಿಲ್ಲವೇ?’ ಎಂದು ಪ್ರಶ್ನಿಸಿದರು.

‘ಬಡತನ, ಮಾಲಿನ್ಯ, ಅನಕ್ಷರತೆ ಸಂಸ್ಕೃತಿಯ ಫಲಗಳು. ಒಳ್ಳೆಯ ಕೆಲಸಕ್ಕೇ ಎಲ್ಲರೂ ಒಟ್ಟಾಗಿ ಕೈಜೋಡಿಸಬೇಕು. ಕೆಟ್ಟದ್ದನ್ನು ಎಲ್ಲರೂ ಒಟ್ಟಾಗಿ ವಿರೋಧಿಸಬೇಕು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.