ADVERTISEMENT

ಸಿ.ಸಿ.ಟಿ.ವಿ ಕ್ಯಾಮೆರಾ ದೃಶ್ಯ ಒದಗಿಸದ ಪಾಲಿಕೆ

​ಪ್ರಜಾವಾಣಿ ವಾರ್ತೆ
Published 7 ಫೆಬ್ರುವರಿ 2018, 20:31 IST
Last Updated 7 ಫೆಬ್ರುವರಿ 2018, 20:31 IST

ಬೆಂಗಳೂರು: ಬೆಳ್ಳಂದೂರು ಕೆರೆಯ ಸುತ್ತಮುತ್ತ ಕಳೆದ ವರ್ಷ ಅಳವಡಿಸಿದ್ದ ಸಿ.ಸಿ.ಟಿ.ವಿ. ಕ್ಯಾಮೆರಾಗಳ ದೃಶ್ಯಗಳು ಬಿಬಿಎಂಪಿ ಬಳಿ ಲಭ್ಯವಿಲ್ಲ.

ಕೆರೆಯ ಅಭಿವೃದ್ಧಿ ಹಾಗೂ ಒತ್ತುವರಿ ಕುರಿತು ಪರಿಶೀಲಿಸಲು ದೃಶ್ಯಗಳನ್ನು ಹಾಜರುಪಡಿಸುವಂತೆ ರಾಷ್ಟ್ರೀಯ ಹಸಿರು ನ್ಯಾಯಮಂಡಳಿ (ಎನ್‌ಜಿಟಿ) ರಚಿಸಿದ್ದ ಸಮಿತಿಯು ಕೋರಿದೆ. ಆದರೆ, ಪಾಲಿಕೆ ಅವುಗಳನ್ನು ಒದಗಿಸಲು ಸಾಧ್ಯವಾಗಿಲ್ಲ.

ದೃಶ್ಯಗಳು ಹಾಗೂ ಎಲ್ಲ ಮಾಹಿತಿಯನ್ನು ಒದಗಿಸುವಂತೆ ಮಹದೇವಪುರ ವಲಯ ಜಂಟಿ ಆಯುಕ್ತರಿಗೆ ಸೂಚಿಸಲಾಗಿದೆ. ಆದರೆ, ಅವರು ಇನ್ನೂ ಮಾಹಿತಿ ನೀಡಿಲ್ಲ ಎಂದು ಮೇಯರ್‌ ಆರ್‌.ಸಂಪತ್‌ ರಾಜ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ADVERTISEMENT

‘ಸಿ.ಸಿ.ಟಿ.ವಿ ಕ್ಯಾಮೆರಾ ದೃಶ್ಯಾವಳಿಗಳಿಗಾಗಿ ಆರು ದಿನಗಳಿಂದ ಕಾಯುತ್ತಿದ್ದೇವೆ. ಜನವರಿ 19ರಂದು ಬೆಳ್ಳಂದೂರು ಕೆರೆಯ ಹುಲ್ಲಿಗೆ ಬೆಂಕಿ ಹಚ್ಚಿದವರನ್ನು ಪತ್ತೆ ಮಾಡಲು ದೃಶ್ಯಾವಳಿಗಳು ಸಹಕಾರಿ’ ಎಂದು ನಗರಾಭಿವೃದ್ಧಿ ಇಲಾಖೆಯ ಅಧಿಕಾರಿಯೊಬ್ಬರು ಹೇಳಿದರು.

ಬೆಳ್ಳಂದೂರು ಕೆರೆಯ ದುಸ್ಥಿತಿಗೆ ಕಾರಣವಾದ ಅಂಶಗಳ ವರದಿಯನ್ನು ಭಾರತೀಯ ವಿಜ್ಞಾನ ಸಂಸ್ಥೆಯ (ಐಐಎಸ್‌ಸಿ) ಸಂಶೋಧಕರು ಹಾಗೂ ತಜ್ಞರ ಸಮಿತಿಯು ಸಿದ್ಧಪಡಿಸಿತ್ತು. ಕ್ಯಾಮೆರಾಗಳ ಕಳಪೆ ಗುಣಮಟ್ಟದ ಬಗ್ಗೆ ವರದಿಯಲ್ಲಿ ಉಲ್ಲೇಖಿಸಲಾಗಿತ್ತು.

ಕ್ಯಾಮೆರಾಗಳು ಸರಿಯಾಗಿ ಕಾರ್ಯನಿರ್ವಹಿಸುತ್ತಿದ್ದರೆ ಕೆರೆಯ ಸುತ್ತಲೂ ಕಸ ಹಾಗೂ ಕಟ್ಟಡ ತ್ಯಾಜ್ಯ ಸುರಿಯಲು ಹೇಗೆ ಸಾಧ್ಯವಾಗುತ್ತದೆ. ಅವು ಸುಸ್ಥಿತಿಯಲ್ಲಿ ಇದ್ದಿದ್ದರೆ ಕೆರೆಗೆ ಬೆಂಕಿ ಬೀಳುತ್ತಿರಲಿಲ್ಲ. ರಾಜ್ಯ ಸರ್ಕಾರ ರಚಿಸಿದ್ದ ತಜ್ಞರ ಸಮಿತಿಯು ಯಾವುದೇ ದೃಶ್ಯಾವಳಿಗಳನ್ನು ವೀಕ್ಷಿಸಿಲ್ಲ ಎಂದು ಸಮಿತಿಯ ಸದಸ್ಯರಾಗಿರುವ ವಿಜ್ಞಾನಿ ಪ್ರೊ.ಟಿ.ವಿ.ರಾಮಚಂದ್ರ ದೂರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.