ADVERTISEMENT

‘ಕೆಎಸ್‌ಪಿಸಿಬಿ ಬಳಿ ಖಾಸಗಿ ಎಸ್‌ಟಿಪಿಗಳ ಮಾಹಿತಿ ಇಲ್ಲ’

ಮಾಹಿತಿ ಹಕ್ಕು ಕಾಯ್ದೆಯಡಿ ಪಡೆದ ಉತ್ತರ

​ಪ್ರಜಾವಾಣಿ ವಾರ್ತೆ
Published 19 ಫೆಬ್ರುವರಿ 2018, 19:45 IST
Last Updated 19 ಫೆಬ್ರುವರಿ 2018, 19:45 IST

ಬೆಂಗಳೂರು: ನಗರದಲ್ಲಿ ಖಾಸಗಿ ಕೊಳಚೆ ನೀರು ಶುದ್ಧೀಕರಣ ಘಟಕಗಳು (ಎಸ್‌ಟಿಪಿ) ಎಷ್ಟಿವೆ ಎಂಬ ಬಗ್ಗೆ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ (ಕೆಎಸ್‌ಪಿಸಿಬಿ) ಬಳಿ ನಿಖರವಾದ ಮಾಹಿತಿ ಇಲ್ಲ.

ಮಾಹಿತಿ ಹಕ್ಕು ಕಾಯ್ದೆಯಡಿ ಸಫಾಯಿ ಕರ್ಮಚಾರಿ ಕಾವಲು ಸಮಿತಿಯ ಸದಸ್ಯ ಕೆ.ಬಿ.ಓಬಳೇಶ್ ಕೇಳಿದ್ದ ‍ಪ್ರಶ್ನೆಗೆ ಮಂಡಳಿ ಈ ಉತ್ತರ ನೀಡಿದೆ. ನಗರದಲ್ಲಿ ಅಪಾರ್ಟ್‌ಮೆಂಟ್‌ ಸಮುಚ್ಚಯಗಳು ಹಾಗೂ ಎಸ್‌ಟಿಪಿಗಳು ಎಷ್ಟಿವೆ ಎಂದು ಮಾಹಿತಿ ಕೇಳಿದ್ದರು.

ಓಬಳೇಶ್, ‘2016ರ ಅಂಕಿ–ಅಂಶದ ಪ್ರಕಾರ 597 ಖಾಸಗಿ ಎಸ್‌ಟಿಪಿಗಳಿವೆ ಎಂಬ ಮಾಹಿತಿಯನ್ನಷ್ಟೇ ನೀಡಿದ್ದಾರೆ. 896 ಎಸ್‌ಟಿಪಿ ಘಟಕಗಳು ಹಾಗೂ 2,413 ಅಪಾರ್ಟ್‌ಮೆಂಟ್ ಸಮುಚ್ಚಯಗಳಿವೆ ಎಂದು ಅಧಿಕಾರಿಗಳು ವೈಯಕ್ತಿಕವಾಗಿ ನನಗೆ ತಿಳಿಸಿದ್ದಾರೆ’ ಎಂದು ಅವರು ಹೇಳಿದರು.

ADVERTISEMENT

ಶೇ 90ರಷ್ಟು ಎಸ್‌ಟಿಪಿಗಳು ಅಪಾರ್ಟ್‌ಮೆಂಟ್ ಸಮುಚ್ಚಯಗಳ ನೆಲಮಹಡಿಯಲ್ಲಿವೆ. ಇದು ರಾಷ್ಟ್ರೀಯ ಹಸಿರು ನ್ಯಾಯಮಂಡಳಿಯ (ಎನ್‌ಜಿಟಿ) ನಿಯಮಾವಳಿಗೆ ವಿರುದ್ಧವಾದದ್ದು. ಆ ಬಗ್ಗೆ ಅಧಿಕಾರಿಗಳು ಯಾವುದೇ ಕ್ರಮಕೈಗೊಂಡಿಲ್ಲ ಎಂದು ಅವರು ಹೇಳಿದರು.

ಸಫಾಯಿ ಕರ್ಮಚಾರಿ ಆಯೋಗವು ಕೆಎಸ್‌ಪಿಸಿಬಿ ಜತೆ ಇತ್ತೀಚೆಗೆ ಸಭೆ ನಡೆಸಿದಾಗಲೂ ಎಸ್‌ಟಿಪಿಗಳ ಬಗ್ಗೆ ನಿಖರವಾದ ಅಂಕಿ–ಅಂಶ ನೀಡಿರಲಿಲ್ಲ. ಹೀಗಾಗಿ, ಮುಂದಿನ ಸಭೆಗೆ ಸರಿಯಾದ ಅಂಕಿ–ಅಂಶ ನೀಡಬೇಕು ಎಂದು ಆಯೋಗವು ಮಂಡಳಿಗೆ ಸೂಚಿಸಿತ್ತು.

ಸಫಾಯಿ ಕರ್ಮಚಾರಿ ಆಯೋಗದ ಅಧ್ಯಕ್ಷ ಎಂ.ಆರ್.ವೆಂಕಟೇಶ್, ‘ಎಸ್‌ಟಿಪಿ ನಿರ್ವಹಣೆ ಮಾಡುವ ಬಗ್ಗೆ ಅಪಾರ್ಟ್‌ಮೆಂಟ್ ಮಾಲೀಕರಿಗೆ ವಲಯವಾರು ಜಾಗೃತಿ
ಕಾರ್ಯಕ್ರಮಗಳನ್ನು ಆಯೋಜಿಸುವಂತೆ ಮಂಡಳಿಗೆ ಸೂಚಿಸಿದ್ದೇವೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.