ADVERTISEMENT

ಪಾಲಿಕೆ ಕಚೇರಿಯಲ್ಲಿ ಕಾಂಗ್ರೆಸ್ ಮುಖಂಡನ ದರ್ಪ

ಕಡತಗಳ ಮೇಲೆ ಪೆಟ್ರೋಲ್ ಎರಚಿದ ನಾರಾಯಣಸ್ವಾಮಿ * ಶಾಸಕ ಬೈರತಿ ಬಸವರಾಜು ಬೆಂಬಲಿಗನ ಕೃತ್ಯ

​ಪ್ರಜಾವಾಣಿ ವಾರ್ತೆ
Published 20 ಫೆಬ್ರುವರಿ 2018, 19:37 IST
Last Updated 20 ಫೆಬ್ರುವರಿ 2018, 19:37 IST
ಪಾಲಿಕೆ ಕಚೇರಿಯಲ್ಲಿ ಕಾಂಗ್ರೆಸ್ ಮುಖಂಡನ ದರ್ಪ
ಪಾಲಿಕೆ ಕಚೇರಿಯಲ್ಲಿ ಕಾಂಗ್ರೆಸ್ ಮುಖಂಡನ ದರ್ಪ   

ಬೆಂಗಳೂರು:‌‌ ವಿವಾದಿತ ಜಮೀನಿಗೆ ಖಾತೆ ಮಾಡಿಕೊಡದ ಕಾರಣಕ್ಕೆ ಹೊರಮಾವು ಬಿಬಿಎಂಪಿ ಕಚೇರಿಗೆ ನುಗ್ಗಿ ದಾಂದಲೆ ನಡೆಸಿರುವ ಕಾಂಗ್ರೆಸ್‌ನ ಕೆ.ಆರ್‌.ಪುರ ಬ್ಲಾಕ್‌ ಮಾಜಿ ಅಧ್ಯಕ್ಷ ನಾರಾಯಣಸ್ವಾಮಿ, ದಾಖಲೆಗಳ ಮೇಲೆ ಪೆಟ್ರೋಲ್ ಎರಚಿ ಬೆಂಕಿ ಹಚ್ಚಲು ಯತ್ನಿಸಿದ್ದಾರೆ.

ಕೆ.ಆರ್.ಪುರ ಶಾಸಕ ಬೈರತಿ ಬಸವರಾಜು ಅವರ ಆಪ್ತರಾಗಿರುವ ನಾರಾಯಣಸ್ವಾಮಿ, ಫೆ.16ರ ಬೆಳಿಗ್ಗೆ ಕಚೇರಿಗೆ ನುಗ್ಗಿ ಗಲಾಟೆ ಮಾಡಿದ್ದರು. ಅದನ್ನು ಯಾರೋ ಮೊಬೈಲ್‌ನಲ್ಲಿ ಚಿತ್ರೀಕರಿಸಿದ್ದು, ವಿಡಿಯೊ ವೈರಲ್ ಆಗಿದೆ. ಈ ಸಂಬಂಧ ಪಾಲಿಕೆಯ ಪ್ರಭಾರ ಕಂದಾಯ ಅಧಿಕಾರಿ ಸತೀಶ್ ಕುಮಾರ್ ರಾಮಮೂರ್ತಿನಗರ ಠಾಣೆಗೆ ಮಂಗಳವಾರ ದೂರು ಕೊಟ್ಟಿದ್ದಾರೆ. ಎಫ್‌ಐಆರ್ ದಾಖಲಾಗುತ್ತಿದ್ದಂತೆಯೇ ಆರೋಪಿ ಮೊಬೈಲ್ ಸ್ವಿಚ್ಡ್‌ಆಫ್ ಮಾಡಿಕೊಂಡು ಪರಾರಿಯಾಗಿದ್ದಾರೆ.

ಮಂಗಳವಾರ ಬೆಳಿಗ್ಗೆ ಮಾಧ್ಯಮಗಳಲ್ಲಿ ಈ ಸುದ್ದಿ ಪ್ರಸಾರವಾಗುತ್ತಿದ್ದಂತೆಯೇ ನಗರ ಪೊಲೀಸ್ ಕಮಿಷನರ್ ಟಿ.ಸುನೀಲ್ ಕುಮಾರ್ ಅವರಿಗೆ ಕರೆ ಮಾಡಿದ್ದ ಗೃಹಸಚಿವ ರಾಮಲಿಂಗಾರೆಡ್ಡಿ, ಸೂಕ್ತ ಕಲಂಗಳಡಿ ಎಫ್‌ಐಆರ್ ದಾಖಲಿಸಿ ನಾರಾಯಣಸ್ವಾಮಿ ಅವರನ್ನು ಬಂಧಿಸುವಂತೆ ಸೂಚಿಸಿದ್ದರು. ಅಂತೆಯೇ ಕಮಿಷನರ್, ಆರೋಪಿ ಪತ್ತೆಗೆ ಬಾಣಸವಾಡಿ ಎಸಿಪಿ ಮಹದೇವಪ್ಪ ನೇತೃತ್ವದಲ್ಲಿ ಎರಡು ವಿಶೇಷ ತಂಡಗಳನ್ನು ರಚಿಸಿದರು.

ADVERTISEMENT

‘ನಾರಾಯಣಸ್ವಾಮಿ ಅವರು ಕಲ್ಕೆರೆ ಎನ್‌ಆರ್‌ಐ ಲೇಔಟ್‌ನ ಜಮೀನಿನ (ಸರ್ವೆ ನಂ.567) ‘ಬಿ’ ಖಾತೆ ವರ್ಗಾವಣೆಗೆ ಡಿ.6ರಂದು ಅರ್ಜಿ ಸಲ್ಲಿಸಿದ್ದರು. ಆ ಜಮೀನು ವ್ಯಾಜ್ಯವು ನ್ಯಾಯಾಲಯದಲ್ಲಿ ವಿಚಾರಣಾ ಹಂತದಲ್ಲಿತ್ತು. ಹೀಗಾಗಿ, ವರ್ಗಾವಣೆ ಮಾಡಲು ಬರುವುದಿಲ್ಲ ಎಂದು ಡಿ.18ರಂದು ‌ಹಿಂಬರಹ ಬರೆದು ಕೊಟ್ಟಿದ್ದೆ. ಆದರೂ, ನಿರಂತರವಾಗಿ ಕರೆ ಮಾಡಿ ವಿಚಾರಿಸುತ್ತಿದ್ದರು. ಒಮ್ಮೆ ಹಿಂಬರಹ ಬರೆದುಕೊಟ್ಟ ಮೇಲೆ ಆ ಪ್ರಕರಣ ಮುಗಿದಂತೆಯೇ ಲೆಕ್ಕ ಎಂದಿದ್ದೆ’ ಎಂದು ಕಚೇರಿಯ ಸಹಾಯಕ ಕಂದಾಯ ಅಧಿಕಾರಿ ಚೆಂಗಲ್ ರಾಯಪ್ಪ ವಿವರಿಸಿದರು.

‘ಫೆ.16ರ ಬೆಳಿಗ್ಗೆ 11 ಗಂಟೆ ಸುಮಾರಿಗೆ ಅವರು ಕಚೇರಿಗೆ ಬಂದು ಸಹೋದ್ಯೋಗಿಗಳ ಜತೆ ಮಾತನಾಡುತ್ತಿದ್ದರು. ಸ್ವಲ್ಪ ಸಮಯದಲ್ಲೇ ನಾನೂ ಕಚೇರಿಗೆ ತೆರಳಿದೆ. ಆಗ ‘ಏನಪ್ಪ ಇನ್ನೂ ನನ್ನ ಕೆಲಸ ಆಗಿಲ್ವ’ ಎನ್ನುತ್ತ ಗಲಾಟೆ ಪ್ರಾರಂಭಿಸಿದರು. ಆ ನಂತರ ಬೆಂಬಲಿಗರಿಂದ ಬಾಟಲಿ ತರಿಸಿಕೊಂಡ ಅವರು, ‘ಇದರಲ್ಲಿ ಪೆಟ್ರೊಲ್ ಇದೆ. ಬೆಂಕಿ ಹಚ್ಚಿಬಿಡುತ್ತೇನೆ’ ಎನ್ನುತ್ತ ದಾಖಲೆಗಳ ಮೇಲೆ ಎರಚಿದರು. ನಂತರ ಎಲ್ಲರೂ ಅವರನ್ನು ಸಮಾಧಾನಪಡಿಸಿ ಹೊರಗೆ ಕರೆದುಕೊಂಡು ಹೋದರು.’

‘ಚುನಾವಣೆ ಹಿನ್ನೆಲೆಯಲ್ಲಿ ಸ್ಥಳೀಯ ಸರ್ಕಾರಿ ಅಧಿಕಾರಿಗಳನ್ನು ವರ್ಗಾವಣೆ ಮಾಡಬೇಕು ಎಂದು ಚುನಾವಣಾ ಆಯೋಗ ಇತ್ತೀಚೆಗೆ ಆದೇಶ ಹೊರಡಿಸಿತ್ತು. ಅಂತೆಯೇ ನನ್ನನ್ನು ಬೇರೆಡೆ ವರ್ಗ ಮಾಡಲಾಗಿತ್ತು. ಈ ಕಚೇರಿಯಲ್ಲಿ ಫೆ.16ರಂದು ನನ್ನ ಕಡೆಯ ಕೆಲಸದ ದಿನವಾಗಿತ್ತು. ಆ ದಿನವೇ ಗಲಾಟೆಯಾಗಿದ್ದರಿಂದ ಬೇಸರವಾಗಿ ಮಧ್ಯಾಹ್ನವೇ ಮನೆಗೆ ತೆರಳಿದ್ದೆ. ಮರುದಿನ ಪಾಲಿಕೆಯ ಹಿರಿಯ ಅಧಿಕಾರಿಗಳಿಗೆ ವಿಷಯ ತಿಳಿಸಿದ್ದೆ’ ಎಂದು ಅವರು ಹೇಳಿದರು.

ಬೆಳಿಗ್ಗೆ ಸುದ್ದಿಗಾರರ ಜತೆ ಮಾತನಾಡಿದ ನಾರಾಯಣಸ್ವಾಮಿ, ‘ನಾನು ವೈಯಕ್ತಿಕ ಕೆಲಸಕ್ಕಾಗಿ ಬಿಬಿಎಂಪಿ ಕಚೇರಿಗೆ ಹೋಗಿರಲಿಲ್ಲ. ಸಾರ್ವಜನಿಕರಿಗೆ ನ್ಯಾಯ ಒದಗಿಸಲೆಂದು ಹೋಗಿದ್ದೆ. ಸರ್ಕಾರಿ ನೌಕರರು ಜನಸಾಮಾನ್ಯರ ಜತೆ ಯಾವ ರೀತಿ ವರ್ತಿಸುತ್ತಾರೆ ಎಂಬುದು ನನಗೆ ಗೊತ್ತು. ಆ ಸಿಟ್ಟಿನಲ್ಲೇ ನಾನು ಹಾಗೆ ನಡೆದುಕೊಂಡೆ. ಜನಸಾಮಾನ್ಯರ ಮೇಲೆ ಭಯ ಇರಲಿ ಎಂಬ ಕಾರಣಕ್ಕೆ ಬಣ್ಣದ ನೀರನ್ನು ತೋರಿಸಿ ಪೆಟ್ರೋಲ್ ಎಂದು ಹೆದರಿಸಿದ್ದೆ. ನಾನು ತಪ್ಪಾಗಿ ನಡೆದುಕೊಂಡಿಲ್ಲ’ ಎಂದು ಸಮರ್ಥಿಸಿಕೊಂಡಿದ್ದಾರೆ.

ನಾರಾಯಣಸ್ವಾಮಿ ಬೈರತಿ ಬಸವರಾಜು ಅವರ ಪ್ರಭಾವ ಬಳಸಿಕೊಂಡೇ ಜಲಮಂಡಳಿ ಸದಸ್ಯರೂ ಆಗಿದ್ದರು ಎನ್ನಲಾಗಿದೆ. ಆರೋಪಿ ವಿರುದ್ಧ ಸರ್ಕಾರಿ ನೌಕರನ ಕರ್ತವ್ಯಕ್ಕೆ ಅಡ್ಡಿ (ಐಪಿಸಿ 353), ಅಕ್ರಮ ಬಂಧನ (341), ಬೆದರಿಕೆ (506) ಹಾಗೂ ಸಾರ್ವಜನಿಕ ಆಸ್ತಿಗೆ ಹಾನಿ (ಐಪಿಸಿ 427) ಹಾಗೂ 1984ರ ಸಾರ್ವಜನಿಕ ಆಸ್ತಿ ಹಾನಿ ಕಾಯ್ದೆ ಸೆಕ್ಷನ್ 3 ಮತ್ತು ಸೆಕ್ಷನ್ 4ರ ಅಡಿ ಎಫ್‌ಐಆರ್ ದಾಖಲಾಗಿದೆ.

‘ದೌರ್ಜನ್ಯಕ್ಕೆ ಕುಮ್ಮಕ್ಕೂ ನೀಡಿಲ್ಲ’

‘ಈ ರೀತಿ ದೌರ್ಜನ್ಯ ಮಾಡಿ ಎಂದು ಯಾವ ಬೆಂಬಲಿಗನಿಗೂ ನಾನು ಕುಮ್ಮಕ್ಕೂ ನೀಡಿಲ್ಲ. ಕ್ಷೇತ್ರದ ಜನ ನಮ್ಮ ಮೇಲೆ ಇಟ್ಟಿರುವ ವಿಶ್ವಾಸವನ್ನು ಉಳಿಸಿಕೊಳ್ಳುವಂತೆ ಕಿವಿಮಾತು ಹೇಳುತ್ತಲೇ ಬಂದಿದ್ದೇನೆ. ತಪ್ಪು ಮಾಡಿದವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ತೆಗೆದುಕೊಳ್ಳುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚಿಸಿದ್ದಾರೆ. ಅಂತೆಯೇ ನಾರಾಯಣಸ್ವಾಮಿ ಅವರನ್ನು ಆರು ವರ್ಷ ಪಕ್ಷದಿಂದ ಹೊರಗಿಡಲಾಗಿದೆ. ಪೊಲೀಸರು ಸಹ ಮುಕ್ತವಾಗಿ ಕ್ರಮ ತೆಗೆದುಕೊಳ್ಳಲಿದ್ದಾರೆ’ ಎಂದು ಶಾಸಕ ಬೈರತಿ ಬಸವರಾಜು ಹೇಳಿದರು.

ಕಾಂಗ್ರೆಸ್‌ನಿಂದ ನಾರಾಯಣಸ್ವಾಮಿ ಅಮಾನತು
ಬೆಂಗಳೂರು: ಶಾಸಕ ಎನ್‌.ಎ. ಹ್ಯಾರಿಸ್‌ ಪುತ್ರ ಮೊಹಮದ್‌ ನಲಪಾಡ್‌ ಗೂಂಡಾಗಿರಿಯ ಬೆನ್ನಲ್ಲೆ, ಪಕ್ಷದ ಇನ್ನೊಬ್ಬ ಮುಖಂಡ ಸರ್ಕಾರಿ ಕಚೇರಿಯಲ್ಲಿ ತೋರಿಸಿದ ವರ್ತನೆಯ ವಿಡಿಯೊ ವೈರಲ್‌ ಆಗಿರುವುದು ಕಾಂಗ್ರೆಸ್‌ ವಲಯದಲ್ಲಿ ತಲ್ಲಣ ಮೂಡಿಸಿದ್ದು, ಪಕ್ಷ ಹೈಕಮಾಂಡ್‌ ಗಂಭೀರವಾಗಿ ಪರಿಗಣಿಸಿದೆ.

ಎಸ್‌. ನಾರಾಯಣ ಸ್ವಾಮಿ ಅವರನ್ನು ತಕ್ಷಣ ಅಮಾನತು ಮಾಡುವಂತೆ ಬೆಂಗಳೂರು ಉತ್ತರ ಜಿಲ್ಲಾ ಕಾಂಗ್ರೆಸ್‌ ಸಮಿತಿಗೆ ಕೆಪಿಸಿಸಿ ಅಧ್ಯಕ್ಷ ಜಿ. ಪರಮೇಶ್ವರ ಸೂಚನೆ ನೀಡಿದ್ದಾರೆ. ಈಗಾಗಲೇ ಪಕ್ಷದ ರಾಜ್ಯ ಉಸ್ತುವಾರಿ ಕೆ.ಸಿ. ವೇಣುಗೋಪಾಲ್‌ ಈ ಬಗ್ಗೆ ಜಿ. ಪರಮೇಶ್ವರ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದ ಮಾಹಿತಿ ಪಡೆದು ಕೊಂಡಿದ್ದಾರೆ. ಅಲ್ಲದೆ, ಮುಂದಿನ ದಿನಗಳಲ್ಲಿ ಇಂತಹ ಘಟನೆಗಳು ಮರುಕಳಿಸದಂತೆ ಪಕ್ಷದ ಕಾರ್ಯಕರ್ತರಿಗೆ ಕಟ್ಟುನಿಟ್ಟಿನ ಎಚ್ಚರಿಕೆ ನೀಡುವಂತೆಯೂ ಅವರು ಸೂಚಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.