ADVERTISEMENT

ಬಿಎಂಟಿಸಿ ಬಸ್‌ನಲ್ಲೇ ವ್ಯಕ್ತಿ ಕೊಲೆ

ಪ್ರಯಾಣಿಕರ ಸೋಗಿನಲ್ಲಿ ದುಷ್ಕರ್ಮಿಗಳಿಂದ ಕೃತ್ಯ

​ಪ್ರಜಾವಾಣಿ ವಾರ್ತೆ
Published 21 ಫೆಬ್ರುವರಿ 2018, 19:30 IST
Last Updated 21 ಫೆಬ್ರುವರಿ 2018, 19:30 IST
ಬಿಎಂಟಿಸಿ ಬಸ್‌ನಲ್ಲೇ ವ್ಯಕ್ತಿ ಕೊಲೆ
ಬಿಎಂಟಿಸಿ ಬಸ್‌ನಲ್ಲೇ ವ್ಯಕ್ತಿ ಕೊಲೆ   

ಬೆಂಗಳೂರು: ಎಲೆಕ್ಟ್ರಾನಿಕ್ ಸಿಟಿಯ ಕೋನಪ್ಪನ ಅಗ್ರಹಾರದಲ್ಲಿ ಬಿಎಂಟಿಸಿ ಬಸ್‌ಗೆ ನುಗ್ಗಿದ ದುಷ್ಕರ್ಮಿಗಳು ವ್ಯಕ್ತಿಯೊಬ್ಬರನ್ನು ಚಾಕುವಿನಿಂದ ಇರಿದು ಬುಧವಾರ ಬೆಳಿಗ್ಗೆ ಕೊಲೆ ಮಾಡಿದ್ದಾರೆ.

ಸೀತಾರಾಮ್ ಅಲಿಯಾಸ್ ಸುರೇಶ್ (35) ಮೃತರು. ಆಂಧ್ರಪ್ರದೇಶದ ಕಡಪ ನಿವಾಸಿಯಾದ ಅವರು ಇತ್ತೀಚೆಗೆ ನಗರಕ್ಕೆ ಬಂದಿದ್ದರು.

ಬೆಳಿಗ್ಗೆ 8.30ರ ಸುಮಾರಿಗೆ ಆನೇಕಲ್‌ನಿಂದ ಕೆ.ಆರ್.ಮಾರುಕಟ್ಟೆಗೆ ಬರುತ್ತಿದ್ದ ಬಸ್‌ (ನೋಂದಣಿ ಸಂಖ್ಯೆ ಕೆಎ 53– ಎಫ್‌275) ಕೋನಪ್ಪನ ಅಗ್ರಹಾರದ ನಿಲ್ದಾಣದಲ್ಲಿ ಪ್ರಯಾಣಿಕರನ್ನು ಹತ್ತಿಸಿಕೊಂಡು ಸಾಗಿತ್ತು.

ADVERTISEMENT

ಸುರೇಶ್‌ ಸಹ ಅದೇ ನಿಲ್ದಾಣದಲ್ಲಿ ಬಸ್‌ ಹತ್ತಿದ್ದರು. ಅವರನ್ನು ಹಿಂಬಾಲಿಸಿಕೊಂಡು ಬಂದಿದ್ದ ಆರೋಪಿಗಳು ಸಹ ಪ್ರಯಾಣಿಕರ ಸೋಗಿನಲ್ಲಿ ಬಸ್‌ ಹತ್ತಿದ್ದರು. ಸ್ವಲ್ಪ ದೂರ ಕ್ರಮಿಸಿದ ಬಳಿಕ ಬಸ್‌ ವಾಹನ ದಟ್ಟಣೆಯಿಂದ ನಿಂತಿತ್ತು. ಆಗ ದುಷ್ಕರ್ಮಿಗಳು ಸುರೇಶ್‌ ಮೇಲೆ ಏಕಾಏಕಿ ಹಲ್ಲೆ ಮಾಡಿದ್ದಾರೆ.

‘ಅದರಿಂದ ಆತಂಕಗೊಂಡ ಸುರೇಶ್, ‘ನನ್ನನ್ನು ಕೊಲೆ ಮಾಡುತ್ತಾರೆ. ಕಾಪಾಡಿ ಕಾಪಾಡಿ’ ಎಂದು ತೆಲುಗು ಭಾಷೆಯಲ್ಲಿ ಕೂಗಿಕೊಂಡರು. ಆರೋಪಿಗಳು ಚಾಕುವಿನಿಂದ ಹೊಟ್ಟೆಗೆ ಎರಡು ಬಾರಿ ಇರಿದರು’ ಎಂದು ಬಸ್‌ನ ನಿರ್ವಾಹಕ ಹೇಳಿದರು.

‘ಬಸ್‌ನಲ್ಲಿ ಸಾಕಷ್ಟು ಪ್ರಯಾಣಿಕರಿದ್ದರು. ಪ್ರಯಾಣಿಕರಿಗೆ ಟಿಕೆಟ್ ನೀಡಿ ಚಾಲಕನ ಬಳಿಗೆ ಹೋಗಿದ್ದೆ. ಆಗ ಹಿಂದಿನಿಂದ ಚೀರಿದ ಶಬ್ದ ಕೇಳಿಸಿತು. ಹಿಂದೆ ಹೋಗುವಷ್ಟರಲ್ಲಿ ಕೃತ್ಯ ನಡೆದಿತ್ತು ಎಂದು ಹೇಳಿದರು.

‘ಕೆಲ ಪ್ರಯಾಣಿಕರು ಗಾಯಾಳುವನ್ನು ರಕ್ಷಿಸಲು ಮುಂದಾದರೆ, ಇನ್ನೂ ಕೆಲವರು ದುಷ್ಕರ್ಮಿಗಳನ್ನು ಹಿಡಿಯಲು ಯತ್ನಿಸಿದರು. ಆಗ ಅವರು ಮಾರಕಾಸ್ತ್ರಗಳನ್ನು ಪ್ರಯಾಣಿಕರತ್ತ ಜೋರಾಗಿ ಬೀಸತೊಡಗಿದರು.‘ಬಸ್‌ನ ಬಾಗಿಲು ತೆಗೆಯಿರಿ. ಇಲ್ಲವಾದರೆ, ಪ್ರಯಾಣಿಕರನ್ನೂ ಕೊಲೆ ಮಾಡುತ್ತೇವೆ’ ಎಂದು ಬೆದರಿಸಿದರು. ಹೀಗಾಗಿ ಬಾಗಿಲು ತೆರೆದೆವು. ಕೂಡಲೇ ಅವರು ಪರಾರಿಯಾದರು’ ಎಂದರು.

‘ಪ್ರಯಾಣಿಕರು ನೀಡಿದ ಮಾಹಿತಿ ಆಧರಿಸಿ ಮೃತದೇಹವನ್ನು ವಿಕ್ಟೋರಿಯಾ ಆಸ್ಪತ್ರೆಗೆ ಸಾಗಿಸಿದೆವು. ಪ್ರಯಾಣಿಕರ ಹಾಗೂ ಬಸ್‌ನ ನಿರ್ವಾಹಕರಿಂದ ಹೇಳಿಕೆ ಪಡೆದಿದ್ದೇವೆ’ ಎಂದು ಎಲೆಕ್ಟ್ರಾನಿಕ್ ಸಿಟಿ ಪೊಲೀಸರು ತಿಳಿಸಿದರು.

ಸಂಬಂಧಿಕರಿಂದ ಕೊಲೆ: ಶಂಕೆ

ಸುರೇಶ್ ಮೇಲೆ ಕೆಲ ಪ್ರಕರಣಗಳು ದಾಖಲಾಗಿವೆ. ಕುಟುಂಬದ ಕೆಲವರೊಂದಿಗೆ ಭಿನ್ನಾಭಿಪ್ರಾಯ ಹೊಂದಿದ್ದರು ಎಂಬ ಬಗ್ಗೆ ಮಾಹಿತಿ ಸಿಕ್ಕಿದೆ. ಅದೇ ಕಾರಣಕ್ಕೆ ಸಂಬಂಧಿಕರೇ ಕೊಲೆ ಮಾಡಿರುವ ಸಾಧ್ಯತೆ ಇದೆ ಎಂದು ಎಲೆಕ್ಟ್ರಾನಿಕ್ ಸಿಟಿ ಪೊಲೀಸರು ಹೇಳಿದರು.

60 ವರ್ಷದ ವ್ಯಕ್ತಿ ಹಾಗೂ ಇಬ್ಬರು ಮಧ್ಯವಯಸ್ಕರು ಕೃತ್ಯ ಎಸಗಿದ್ದಾರೆ. ಆರೋಪಿಗಳ ಪತ್ತೆಗೆ ಪ್ರತ್ಯೇಕ ತಂಡ ರಚಿಸಲಾಗಿದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.