ADVERTISEMENT

ಆರು ಪಥದ ರಸ್ತೆ: ಭೂಸ್ವಾಧೀನ ಪೂರ್ಣ

​ಪ್ರಜಾವಾಣಿ ವಾರ್ತೆ
Published 22 ಮೇ 2019, 19:34 IST
Last Updated 22 ಮೇ 2019, 19:34 IST
   

ಬೆಂಗಳೂರು: ‘ನೆಲಮಂಗಲ–ತುಮಕೂರು ರಸ್ತೆಯನ್ನು 6 ಪಥದ ರಸ್ತೆಯನ್ನಾಗಿ ಪರಿವರ್ತಿಸುವ ಯೋಜನೆಯ ಭೂಸ್ವಾಧೀನ ಪ್ರಕ್ರಿಯೆ ಬಹುತೇಕ ಪೂರ್ಣಗೊಂಡಿದೆ' ಎಂದು ರಾಷ್ಟ್ರೀಯ ಹೆದ್ಧಾರಿ ಅಭಿವೃದ್ಧಿ ಪ್ರಾಧಿಕಾರದ (ಎನ್‌ಎಚ್‌ಎಐ) ಪ್ರಾದೇಶಿಕ ಅಧಿಕಾರಿ ಆರ್.ಕೆ. ಸೂರ್ಯವಂಶಿ ಹೇಳಿದರು.

ದಿ ಇನ್‌ಸ್ಟಿಟ್ಯೂಟ್‌ ಆಫ್‌ ಎಂಜಿನಿಯರ್ಸ್‌ ಬುಧವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ‘ನ್ಯಾಷನಲ್‌ ಹೈವೇ ನೆಟ್‌ವರ್ಕ್‌ ಆ್ಯಂಡ್‌ ಕನ್‌ಸ್ಟ್ರಕ್ಷನ್ ಇನ್‌ ಕರ್ನಾಟಕ’ ಕುರಿತು ಉಪನ್ಯಾಸ ನೀಡಿದರು.

ಆರ್.ಕೆ. ಸೂರ್ಯವಂಶಿ

ಬೆಂಗಳೂರಿನಿಂದ ನೆಲಮಂಗಲ ತನಕ ಆರು ಪಥದ ರಸ್ತೆ ಈಗಾಗಲೇ ನಿರ್ಮಾಣವಾಗಿದೆ. ಸಂಚಾರ ದಟ್ಟಣೆ ಹೆಚ್ಚಿರುವ ಕಾರಣ ತುಮಕೂರು ತನಕ (45 ಕಿ.ಮೀ) ಇದೇ ರೀತಿಯ ಹೆದ್ದಾರಿ ನಿರ್ಮಾಣವಾಗಲಿದೆ ಎಂದರು.

ADVERTISEMENT

ನೆಲಮಂಗಲದ ತನಕ ವಾಹನ ದಟ್ಟಣೆ ಇನ್ನಷ್ಟು ಹೆಚ್ಚಾಗಿದೆ. ಆದರೆ, ಎರಡೂ ಬದಿಗಳಲ್ಲಿ ಕಟ್ಟಡಗಳಿರುವ ಕಾರಣ ಈಗಿರುವ ರಸ್ತೆಯನ್ನು ವಿಸ್ತರಿಸಲು ಅವಕಾಶಗಳಿಲ್ಲ ಎಂದು ಹೇಳಿದರು.

ಶಿವಮೊಗ್ಗ–ತುಮಕೂರು, ಹಾಸನ–ಬಿ.ಸಿ. ರಸ್ತೆ ತನಕದ ನಾಲ್ಕು ಪಥದ ರಸ್ತೆ ಅಭಿವೃದ್ಧಿ ಕಾಮಗಾರಿ ಪ್ರಗತಿಯಲ್ಲಿದೆ. ‌ರಾಜ್ಯದಲ್ಲಿ ಪ್ರಾಧಿಕಾರದಿಂದ 18 ರಸ್ತೆಗಳ ಅಭಿವೃದ್ಧಿ ಕೆಲಸ ಮುಗಿದಿದೆ. 25 ರಸ್ತೆಗಳ ಅಭಿವೃದ್ಧಿ ಕಾಮಗಾರಿ ಪ್ರಗತಿಯಲ್ಲಿದೆ. 30 ರಸ್ತೆಗಳ ಅಭಿವೃದ್ಧಿಗೆ ಸಂಬಂಧಿಸಿದಂತೆ ಯೋಜನೆ ಸಿದ್ಧವಾಗುತ್ತಿದೆ ಎಂದು ವಿವರಿಸಿದರು.

ಭೂಸ್ವಾಧೀನ ಪ್ರಕ್ರಿಯೆ ವಿಳಂಬ, ಬೈಪಾಸ್ ಮಾರ್ಗ ಬದಲಿಸಬೇಕು ಎಂಬ ಸಾರ್ವಜನಿಕರ ಒತ್ತಾಯ, ನ್ಯಾಯಾಲಯಗಳಲ್ಲಿರುವ ವ್ಯಾಜ್ಯಗಳು ಸೇರಿದಂತೆ ಹಲವು ಸವಾಲುಗಳನ್ನು ಎನ್‌ಎಚ್‌ಎಐ ಎದುರಿಸುತ್ತಿದೆ ಎಂದರು.

ರಾಜ್ಯದಲ್ಲಿ 2 ಟೋಲ್‌ಗಳನ್ನು ಹೊರತುಪಡಿಸಿ ಉಳಿದೆಲ್ಲಾ ಟೋಲ್‌ಗಳಲ್ಲೂ ಎಲೆಕ್ಟ್ರಾನಿಕ್ ಟೋಲ್‌ ಸಂಗ್ರಹ (ಇಟಿಸಿ) ವ್ಯವಸ್ಥೆ ಇದೆ ಎಂದು ಹೇಳಿದರು.

ಬೆಂಗಳೂರು– ಚೆನ್ನೈ ಎಕ್ಸ್‌ಪ್ರೆಸ್‌ ಹೈವೆ

ಬೆಂಗಳೂರು–ಚೆನ್ನೈ ಎಕ್ಸ್‌ಪ್ರೆಸ್‌ ಹೈವೆ ಅಭಿವೃದ್ಧಿಗೆ ಸಂಬಂಧಿಸಿದಂತೆ ಎನ್‌ಎಚ್‌ಎಐ ಕರ್ನಾಟಕದ ಪ್ರಾದೇಶಿಕ ಕಚೇರಿ ವ್ಯಾಪ್ತಿಯಲ್ಲಿ ಭೂಸ್ವಾಧೀನ ಪ್ರಕ್ರಿಯೆ ಶೇ 80ರಷ್ಟು ಪೂರ್ಣಗೊಂಡಿದೆ ಎಂದು ಸೂರ್ಯವಂಶಿ ಹೇಳಿದರು.

‘ಬೆಂಗಳೂರು–ಮಾಲೂರು, ಮಾಲೂರು–ಬಂಗಾರಪೇಟೆ, ಬಂಗಾರಪೇಟೆ– ಚೆನ್ನೈ ಹೀಗೆ ಮೂರು ಹಂತದಲ್ಲಿ ಕಾಮಗಾರಿ ಹಂಚಿಕೆಯಾಗಿದೆ. ಬೆಂಗಳೂರಿನಿಂದ ಮಾಲೂರು ತನಕದ ಕಾಮಗಾರಿ ನಮ್ಮ ವ್ಯಾಪ್ತಿಯಲ್ಲಿದೆ’ ಎಂದರು.

‘ಮೂರು ಹಂತಗಳಿಗೆ ಹೋಲಿಸಿದರೆ ಭೂಸ್ವಾಧೀನ ಪ್ರಕ್ರಿಯೆ ನಮ್ಮ ವ್ಯಾಪ್ತಿಯಲ್ಲೇ ವೇಗವಾಗಿ ನಡೆಯುತ್ತಿದೆ. ಕಾಮಗಾರಿ ಆರಂಭಿಸಲು ಸಿದ್ಧತೆ ನಡೆಸಲಾಗುತ್ತಿದೆ’ ಎಂದು ಹೇಳಿದರು.

***

ರಾಜ್ಯದಲ್ಲಿ ಎನ್‌ಎಚ್ಎಐ ಸ್ಥಿತಿಗತಿ

ಕಾಮಗಾರಿ ರಸ್ತೆಯ ಉದ್ದ ಅಂದಾಜು ಮೊತ್ತ

ಅಭಿವೃದ್ಧಿ ಕಾಮಗಾರಿ ಮುಗಿದಿರುವುದು 1,125 ಕಿ.ಮೀ ₹8490 ಕೋಟಿ

ಕಾಮಗಾರಿ ಪ್ರಗತಿಯಲ್ಲಿರುವುದು 2,121 ಕಿ.ಮೀ ₹26,500 ಕೋಟಿ

ಯೋಜನೆಗೆ ಸಿದ್ಧತೆ 2010 ಕಿ.ಮೀ ₹10,357 ಕೋಟಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.