ADVERTISEMENT

ಬಬಿಎಂಪಿ ಹಾಗೂ ಬೆಂ ಗ್ರಾಮಾಂತರದಲ್ಲಿ 611 ಕೆರೆಗಳ ಒತ್ತುವರಿ ತೆರವು ಬಾಕಿ

​ಪ್ರಜಾವಾಣಿ ವಾರ್ತೆ
Published 23 ಸೆಪ್ಟೆಂಬರ್ 2021, 3:27 IST
Last Updated 23 ಸೆಪ್ಟೆಂಬರ್ 2021, 3:27 IST
   

ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯೂ ಸೇರಿದಂತೆ ಬೆಂಗಳೂರು ನಗರ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆಗಳ ವ್ಯಾಪ್ತಿಯಲ್ಲಿ 1,535 ಕೆರೆಗಳ ಜಮೀನು ಒತ್ತುವರಿ ಪತ್ತೆಯಾಗಿತ್ತು. ಈ ಪೈಕಿ 611 ಕೆರೆಗಳ ಒತ್ತುವರಿ ತೆರವು ಬಾಕಿ ಇದೆ ಎಂದು ಕಂದಾಯ ಸಚಿವ ಆರ್‌. ಅಶೋಕ ತಿಳಿಸಿದರು.

ವಿಧಾನ ಪರಿಷತ್‌ನಲ್ಲಿ ಬುಧವಾರ ಜೆಡಿಎಸ್‌ನ ಎನ್‌. ಅಪ್ಪಾಜಿಗೌಡ ಪ್ರಶ್ನೆಗೆ ಉತ್ತರಿಸಿದ ಅವರು, ‘ಬಿಬಿಎಂಪಿ, ಬೆಂಗಳೂರು ನಗರ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ವ್ಯಾಪ್ತಿಯಲ್ಲಿ 1,751 ಕೆರೆಗಳಿವೆ. ಈ ಪೈಕಿ 1,703 ಕೆರೆಗಳ ಜಮೀನಿನ ಸರ್ವೆ ಕೆಲಸ ಮುಗಿದಿದೆ. ಈ ಪೈಕಿ 924 ಕೆರೆಗಳಲ್ಲಿ ಒತ್ತುವರಿ ತೆರವು ಮಾಡಲಾಗಿದೆ. 172 ಕೆರೆಗಳು ಒತ್ತುವರಿಯಿಂದ ಮುಕ್ತವಾಗಿದ್ದವು’ ಎಂದು ತಿಳಿಸಿದರು.

ಬೆಂಗಳೂರು ನಗರ ಜಿಲ್ಲೆಯಲ್ಲಿ 837 ಕೆರೆಗಳಿದ್ದು, ಎಲ್ಲ ಕೆರೆಗಳ ಸರ್ವೆ ಪೂರ್ಣಗೊಂಡಿದೆ. 744 ಕೆರೆಗಳ ಜಮೀನು ಒತ್ತುವರಿಯಾಗಿರುವುದು ಕಂಡುಬಂದಿತ್ತು. 360 ಕೆರೆಗಳಲ್ಲಿ ಒತ್ತುವರಿ ತೆರವು ಮಾಡಲಾಗಿದೆ. 384 ಕೆರೆಗಳ ಒತ್ತುವರಿ ಪ್ರದೇಶದ ತೆರವು ಕಾರ್ಯಾಚರಣೆ ಬಾಕಿ ಇದೆ. ನಗರ ಜಿಲ್ಲೆಯ 93 ಕೆರೆಗಳು ಒತ್ತುವರಿಯಿಂದ ಮುಕ್ತವಾಗಿದ್ದವು ಎಂದು ಮಾಹಿತಿ ನೀಡಿದರು.

ADVERTISEMENT

ಬಿಬಿಎಂಪಿ ವ್ಯಾಪ್ತಿಯ 204 ಕೆರೆಗಳಲ್ಲಿ 160 ಕೆರೆಗಳ ಸರ್ವೆ ಪೂರ್ಣಗೊಂಡಿದೆ. 148 ಕೆರೆಗಳಲ್ಲಿ ಒತ್ತುವರಿ ಪತ್ತೆಯಾಗಿದ್ದು, 20ರಲ್ಲಿ ಮಾತ್ರ ತೆರವು ಕಾರ್ಯಾಚರಣೆ ಪೂರ್ಣಗೊಂಡಿದೆ. ಪಾಲಿಕೆ ವ್ಯಾಪ್ತಿಯ 128 ಕೆರೆಗಳಲ್ಲಿ ಒತ್ತುವರಿ ತೆರವು ಬಾಕಿ ಇದೆ. ಈ ಪ್ರದೇಶದ 12 ಕೆರೆಗಳಲ್ಲಿ ಮಾತ್ರ ಯವುದೇ ಒತ್ತುವರಿ ಪತ್ತೆಯಾಗಿಲ್ಲ ಎಂದರು.

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಎಲ್ಲ 710 ಕೆರೆಗಳ ಸರ್ವೆ ಕಾರ್ಯ ಮುಗಿದಿದೆ. 643 ಕೆರೆಗಳಲ್ಲಿ ಒತ್ತುವರಿ ಕಂಡುಬಂದಿದ್ದು, 544 ಕೆರೆಗಳಲ್ಲಿ ತೆರವು ಕಾರ್ಯಾಚರಣೆ ಮುಗಿದಿದೆ. 99 ಕೆರೆಗಳ ಒತ್ತುವರಿ ತೆರವು ಬಾಕಿ ಇದೆ. ಗ್ರಾಮಾಂತರ ಜಿಲ್ಲೆಯ 67 ಕೆರೆಗಳು ಮಾತ್ರ ಒತ್ತುವರಿಯಿಂದ ಮುಕ್ತವಾಗಿದ್ದವು ಎಂದು ಅಶೋಕ ತಿಳಿಸಿದರು.

ರಾಜ್ಯದಲ್ಲಿ 39,178 ಕೆರೆಗಳಿವೆ. ಅವುಗಳು ಏಳು ಲಕ್ಷ ಎಕರೆ ವಿಸ್ತೀರ್ಣ ಹೊಂದಿವೆ. ರಾಜ್ಯದಾದ್ಯಂತ ವ್ಯಾಪಕವಾಗಿ ಕೆರೆಗಳ ಒತ್ತುವರಿ ನಡೆದಿದೆ. ಕೆರೆಗಳ ಜಮೀನಿನ ಒತ್ತುವರಿ ವಿಚಾರದಲ್ಲಿ ಆಡಳಿತ ಮತ್ತು ವಿರೋಧ ಪಕ್ಷಗಳು ರಾಜಕಾರಣ ಮಾಡಬಾರದು. ಎಲ್ಲ ಕೆರೆಗಳನ್ನೂ ಒತ್ತುವರಿಯಿಂದ ಮುಕ್ತಗೊಳಿಸಲು ಕಠಿಣ ನಿಲುವು ತಾಳಬೇಕಿದೆ ಎಂದು ಹೇಳಿದರು.

‘ಬೆಂಗಳೂರು ನಗರ ಜಿಲ್ಲೆಯ ವ್ಯಾಪ್ತಿಯಲ್ಲಿ 25 ವರ್ಷಗಳ ಹಿಂದೆ 837 ಕೆರೆಗಳಿದ್ದವು. ಈಗ 705 ಕೆರೆಗಳು ಮಾತ್ರ ಉಳಿದಿವೆ. ಇದಕ್ಕೆ ಒತ್ತುವರಿಯೇ ಕಾರಣ. ಕೆರೆಗಳ ಒತ್ತುವರಿ ತೆರವಿಗೆ ಹೈಕೋರ್ಟ್‌ ಸ್ಪಷ್ವವಾದ ಆದೇಶಗಳನ್ನು ನೀಡಿದೆ. ಕೆರೆಯ ಜಮೀನಿನಲ್ಲಿ ನಿರ್ಮಿಸಿಕೊಂಡಿರುವ ಮನೆಗಳನ್ನು ಸಕ್ರಮಗೊಳಿಸುವ ಯಾವುದೇ ಪ್ರಸ್ತಾವ ಸರ್ಕಾರದ ಮುಂದೆ ಇಲ್ಲ. ಅಂತಹ ಕ್ರಮ ಕೈಗೊಳ್ಳುವುದಿಲ್ಲ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.