ADVERTISEMENT

70 ಲಕ್ಷ ದಾಟಿದ ವಾಹನಗಳ ಸಂಖ್ಯೆ

ಸಿಲಿಕಾನ್‌ ಸಿಟಿ ಖ್ಯಾತಿಯ ಬೆಂಗಳೂರಿನಲ್ಲಿ ಹೆಚ್ಚುತ್ತಿರುವ ನೋಂದಣಿ

​ಪ್ರಜಾವಾಣಿ ವಾರ್ತೆ
Published 8 ಜುಲೈ 2017, 19:30 IST
Last Updated 8 ಜುಲೈ 2017, 19:30 IST
70 ಲಕ್ಷ ದಾಟಿದ ವಾಹನಗಳ ಸಂಖ್ಯೆ
70 ಲಕ್ಷ ದಾಟಿದ ವಾಹನಗಳ ಸಂಖ್ಯೆ   

ಬೆಂಗಳೂರು: ನಗರದ ಪ್ರಾದೇಶಿಕ ಸಾರಿಗೆ ಅಧಿಕಾರಿ (ಆರ್‌ಟಿಒ) ಕಚೇರಿಗಳಲ್ಲಿ ನೋಂದಣಿಯಾದ ವಾಹನಗಳ ಸಂಖ್ಯೆಯು ಪ್ರಸಕ್ತ ವರ್ಷ  ಜೂನ್‌ ಅಂತ್ಯಕ್ಕೆ 70 ಲಕ್ಷ ಗಡಿ ದಾಟಿದೆ. ಇದರಲ್ಲಿ 48 ಲಕ್ಷ ದ್ವಿಚಕ್ರ ವಾಹನಗಳು, 14.40 ಲಕ್ಷ ಕಾರುಗಳಿವೆ.

ಏಳು ವರ್ಷಗಳ ಅಂಕಿ–ಅಂಶ ಗಮನಿಸಿದಾಗ ವರ್ಷದಿಂದ ವರ್ಷಕ್ಕೆ ವಾಹನಗಳ ಸಂಖ್ಯೆ ಹೆಚ್ಚುತ್ತಲೇ ಇದೆ.  ಪರಿಣಾಮ ಪಾರ್ಕಿಂಗ್‌ ಹಾಗೂ ದಟ್ಟಣೆ ಸಮಸ್ಯೆ ಜಾಸ್ತಿಯಾಗುತ್ತಿದೆ.

‘ಮೆಟ್ರೊ ಕಾರ್ಯಾಚರಣೆ  ಬಳಿಕ ಜನ ಹೆಚ್ಚಾಗಿ ರೈಲು ಬಳಸುತ್ತಾರೆ. ಆಗ  ವಾಹನಗಳ ಸಂಖ್ಯೆ ಕಡಿಮೆಯಾಗಬಹುದು ಎಂದು ಭಾವಿಸಿದ್ದೆವು. ಆದರೆ,  ವಾಹನಗಳ ಸಂಖ್ಯೆ  ಹೆಚ್ಚುತ್ತಲೇ ಇದೆ.  ಸದ್ಯಕ್ಕಂತೂ ದಟ್ಟಣೆ ಕಡಿಮೆಯಾಗುವ ಲಕ್ಷಣಗಳು ಗೋಚರಿಸುತ್ತಿಲ್ಲ’ ಎಂದು ಸಂಚಾರ ವಿಭಾಗದ ಪೊಲೀಸ್‌ ಅಧಿಕಾರಿಯೊಬ್ಬರು ತಿಳಿಸಿದರು.

ADVERTISEMENT

ವಾಹನಗಳ ಸಂಖ್ಯೆ ಹೆಚ್ಚಳದ ಬಗ್ಗೆ ಪ್ರತಿಕ್ರಿಯಿಸಿದ ಸಾರಿಗೆ ಇಲಾಖೆ ಅಧಿಕಾರಿಯೊಬ್ಬರು, ‘2011ರ ಅಕ್ಟೋಬರ್‌ನಲ್ಲಿ ಎಂ.ಜಿ.ರಸ್ತೆಯಿಂದ ಬೈಯಪ್ಪನಹಳ್ಳಿವರೆಗೆ  ‘ನಮ್ಮ ಮೆಟ್ರೊ’ ಕಾರ್ಯಾಚರಣೆ ಆರಂಭವಾಯಿತು.  

ಇತ್ತೀಚೆಗೆ ಸಂಪಿಗೆ ರಸ್ತೆಯಿಂದ ಯಲಚೇನಹಳ್ಳಿವರೆಗೆ ಮೆಟ್ರೊ ಸಂಚಾರ ಶುರುವಾಗುವುದರೊಂದಿಗೆ ಈ ಯೋಜನೆಯ ಮೊದಲ ಹಂತ ಪೂರ್ಣಗೊಂಡಿದೆ. ಇದರ ಮಧ್ಯೆಯೇ 2011–12ರಲ್ಲಿ 41.56 ಲಕ್ಷದಷ್ಟಿದ್ದ ವಾಹನಗಳ ಸಂಖ್ಯೆಯು ಪ್ರಸ್ತುತ (2017 ಜೂನ್‌ವರೆಗೆ) 70.31ಕ್ಕೆ ಏರಿದೆ. ಆರೇ ವರ್ಷಗಳಲ್ಲಿ 27.75 ಲಕ್ಷ ವಾಹನಗಳು ಹೆಚ್ಚಾಗಿವೆ’ ಎಂದರು.

ಇನ್ನಷ್ಟು ಹೆಚ್ಚುವ ಸಾಧ್ಯತೆ: ‘ಇಎಂಐ ಹಾಗೂ ಕಡಿಮೆ ಬಡ್ಡಿ ದರದ ಸಾಲಗಳ ಮೂಲಕ ವಾಹನಗಳ ಖರೀದಿ ಇಂದು ಸುಲಭವಾಗಿದೆ. ಹೀಗಾಗಿಯೇ ಜನರು ಸ್ವಂತ ವಾಹನ ಹೊಂದಲು ಬಯಸುತ್ತಿದ್ದಾರೆ.  ಪ್ರತಿ ವರ್ಷ ವಾಹನಗಳ ನೋಂದಣಿ ಪ್ರಮಾಣ ಶೇ 12ರಷ್ಟು  ಹೆಚ್ಚುತ್ತಿದೆ.

ಇತ್ತೀಚೆಗೆ ಜಾರಿಯಾದ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಜಾರಿಯಾದ ಬಳಿಕ ಕೆಲವು ಕಾರುಗಳ ದರ ಮತ್ತಷ್ಟು ಕಡಿಮೆಯಾಗಿದೆ. ಇದರಿಂದ ವಾಹನಗಳ ಸಂಖ್ಯೆ ಇನ್ನಷ್ಟು ಹೆಚ್ಚುವ ಸಾಧ್ಯತೆ ಇದೆ’ ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.