ಬೆಂಗಳೂರು: ಮಹಾ ಕುಂಭಮೇಳ ಪ್ರವಾಸದ ಪ್ಯಾಕೇಜ್ ಹೆಸರಿನಲ್ಲಿ ಸಾರ್ವಜನಿಕರಿಗೆ ₹70 ಲಕ್ಷ ವಂಚಿಸಿದ್ದ ಆರೋಪದ ಮೇರೆಗೆ ಆರೋಪಿಯನ್ನು ಗೋವಿಂದರಾಜ ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಟೂರ್ಸ್ ಆ್ಯಂಡ್ ಟ್ರಾವೆಲ್ಸ್ ಕಂಪನಿಯ ಪ್ರತಿನಿಧಿಯ ಹೆಸರಿನಲ್ಲಿ ಫೇಸ್‌ಬುಕ್ ಹಾಗೂ ವಾಟ್ಸ್ಆ್ಯಪ್ ಗ್ರೂಪ್‌ಗಳಲ್ಲಿ ನಕಲಿ ಜಾಹೀರಾತು ನೀಡಿದ್ದ ರಾಘವೇಂದ್ರ ರಾವ್ ಅವರನ್ನು ಪೊಲೀಸರು ಬಂಧಿಸಿ, ವಿಚಾರಣೆ ನಡೆಸುತ್ತಿದ್ದಾರೆ.
‘ಕುಂಭಮೇಳ ಪ್ರವಾಸಕ್ಕೆ ಪ್ರತಿಯೊಬ್ಬರಿಂದ 7 ದಿನಕ್ಕೆ ₹49 ಸಾವಿರ ಸಂಗ್ರಹಿಸಿದ್ದ. ಈ ರೀತಿ ನೂರಕ್ಕೂ ಹೆಚ್ಚು ಜನರಿಂದ ಹಣ ಸಂಗ್ರಹಿಸಿದ್ದ ಆರೋಪಿ, ಕೆಲವರಿಗೆ ಟಿಕೆಟ್ ಬುಕ್ ಮಾಡಿ ನಂತರ ರದ್ದು ಮಾಡುತ್ತಿದ್ದ. ಇನ್ನು ಕೆಲವರಿಗೆ ಪ್ರಯಾಗ್ ರಾಜ್ ತಲುಪಿದ ನಂತರ ವಾಪಸ್ ಟಿಕೆಟ್ ಬುಕ್ ಮಾಡುತ್ತಿರಲಿಲ್ಲ. ಬಳಿಕ ಹಣ ನೀಡಿದ್ದವರ ಸಂಪರ್ಕಕ್ಕೆ ಸಿಗದೆ ಮೊಬೈಲ್ ಸ್ವಿಚ್ ಆಫ್ ಮಾಡಿಕೊಳ್ಳುತ್ತಿದ್ದ. ವಂಚನೆಗೊಳಗಾದ 20 ಮಂದಿ ದೂರು ನೀಡಿದ್ದು, ₹70 ಲಕ್ಷ ಕಳೆದುಕೊಂಡಿರುವುದಾಗಿ ಹೇಳಿದ್ದಾರೆ’ ಎಂದು ಪೊಲೀಸರು ಹೇಳಿದರು.
‘ನೂರಕ್ಕೂ ಹೆಚ್ಚು ಮಂದಿಗೆ ಇದೇ ರೀತಿ ವಂಚನೆ ಮಾಡಲಾಗಿದೆ ಎಂದು ಆರೋಪಿಸಲಾಗಿದೆ. ಸಾರ್ವಜನಿಕರಿಗೆ ವಂಚಿಸಿ ಗಳಿಸಿದ್ದ ಹಣವನ್ನು ಬೆಟ್ಟಿಂಗ್ ಆ್ಯಪ್‌ನಲ್ಲಿ ತೊಡಗಿಸಿರುವುದು ಪ್ರಾಥಮಿಕ ತನಿಖೆ ವೇಳೆ ಗೊತ್ತಾಗಿದೆ. ತನಿಖೆ ಮುಂದುವರಿದಿದೆ’ ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.