ADVERTISEMENT

ಎರಡನೇ ಹಂತದ ಲೋಕಸಭೆ ಚುನಾವಣೆ:14 ಕ್ಷೇತ್ರ; ಅಭ್ಯರ್ಥಿಗಳ ಸಂಖ್ಯೆ 168ಕ್ಕೆ

​ಪ್ರಜಾವಾಣಿ ವಾರ್ತೆ
Published 17 ಏಪ್ರಿಲ್ 2024, 16:25 IST
Last Updated 17 ಏಪ್ರಿಲ್ 2024, 16:25 IST

ಬೆಂಗಳೂರು: ಎರಡನೇ ಹಂತದಲ್ಲಿ ಮತದಾನ ನಡೆಯಲಿರುವ ರಾಜ್ಯದ 14 ಲೋಕಸಭಾ ಕ್ಷೇತ್ರಗಳಲ್ಲಿ ಬುಧವಾರ 60 ಮಂದಿ ನಾಮಪತ್ರ ಸಲ್ಲಿಸಿದ್ದಾರೆ. ಇದರೊಂದಿಗೆ ಈ ಕ್ಷೇತ್ರಗಳಲ್ಲಿ ನಾಮಪತ್ರ ಸಲ್ಲಿಸಿದವರ ಒಟ್ಟು ಸಂಖ್ಯೆ 168ಕ್ಕೆ ತಲುಪಿದೆ.

ಈ ಕ್ಷೇತ್ರಗಳಲ್ಲಿ ಶುಕ್ರವಾರದಿಂದ ನಾಮಪತ್ರ ಸಲ್ಲಿಕೆ ಆರಂಭವಾಗಿತ್ತು. ಬುಧವಾರ ಒಟ್ಟು 72 ನಾಮಪತ್ರಗಳು ಸಲ್ಲಿಕೆಯಾಗಿವೆ. ನಾಮಪತ್ರ ಸಲ್ಲಿಸಿದವರಲ್ಲಿ 55 ಮಂದಿ ಪುರುಷರು ಮತ್ತು ಐವರು ಮಹಿಳೆಯರು ಎಂದು ರಾಜ್ಯದ ಮುಖ್ಯ ಚುನಾವಣಾಧಿಕಾರಿ ಮನೋಜ್‌ ಕುಮಾರ್‌ ಮೀನಾ ತಿಳಿಸಿದ್ದಾರೆ.

ಈವರೆಗೆ ನಾಮಪತ್ರ ಸಲ್ಲಿಸಿರುವ ಒಟ್ಟು ಅಭ್ಯರ್ಥಿಗಳಲ್ಲಿ 153 ಮಂದಿ ಪುರುಷರು. 15 ಮಹಿಳೆಯರು ಚುನಾವಣಾ ಅಖಾಡಕ್ಕಿಳಿದಿದ್ದಾರೆ. ದಾವಣಗೆರೆ (20), ಬೀದರ್‌ (17) ಮತ್ತು ಶಿವಮೊಗ್ಗ (15) ಲೋಕಸಭಾ ಕ್ಷೇತ್ರಗಳಲ್ಲಿ ಹೆಚ್ಚು ಮಂದಿ ನಾಮಪತ್ರ ಸಲ್ಲಿಸಿದ್ದಾರೆ.

ADVERTISEMENT

ಬಿಜೆಪಿ ಅಭ್ಯರ್ಥಿಗಳು 12 ಕ್ಷೇತ್ರಗಳಲ್ಲಿ ನಾಮಪತ್ರ ಸಲ್ಲಿಸಿದ್ದಾರೆ. ಬಾಗಲಕೋಟೆಯಲ್ಲಿ ಪಿ.ಸಿ. ಗದ್ದಿಗೌಡರ್‌ ಮತ್ತು ಶಿವಮೊಗ್ಗದಲ್ಲಿ ಬಿ.ವೈ. ರಾಘವೇಂದ್ರ ನಾಮಪತ್ರ ಸಲ್ಲಿಸುವುದು ಬಾಕಿ ಇದೆ. ಕಾಂಗ್ರೆಸ್‌ ಅಭ್ಯರ್ಥಿಗಳು 13 ಕ್ಷೇತ್ರಗಳಲ್ಲಿ ನಾಮಪತ್ರ ಸಲ್ಲಿಸಿದ್ದಾರೆ. ಚಿಕ್ಕೋಡಿ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ, ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಅವರ ಮಗಳು ಪ್ರಿಯಾಂಕಾ ಜಾರಕಿಹೊಳಿ ನಾಮಪತ್ರ ಸಲ್ಲಿಕೆ ಬಾಕಿ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.