ADVERTISEMENT

ಕಡಲೆಕಾಯಿ ಪರಿಷೆಗೆ 8 ಲಕ್ಷ ಮಂದಿ, ₹40 ಕೋಟಿ ವಹಿವಾಟು

​ಪ್ರಜಾವಾಣಿ ವಾರ್ತೆ
Published 24 ನವೆಂಬರ್ 2022, 19:49 IST
Last Updated 24 ನವೆಂಬರ್ 2022, 19:49 IST
ಬಸವನಗುಡಿಯ ದೊಡ್ಡ ಬಸವಣ್ಣ ದೇವಸ್ಥಾನ ಮುಂದೆ ಕಡಲೆಕಾಯಿ ಪರಿಷೆ ಸಂದರ್ಭದಲ್ಲಿ ಸೇರಿದ್ದ ಜನಸ್ತೋಮ...ಪ್ರಜಾವಾಣಿ ಚಿತ್ರ
ಬಸವನಗುಡಿಯ ದೊಡ್ಡ ಬಸವಣ್ಣ ದೇವಸ್ಥಾನ ಮುಂದೆ ಕಡಲೆಕಾಯಿ ಪರಿಷೆ ಸಂದರ್ಭದಲ್ಲಿ ಸೇರಿದ್ದ ಜನಸ್ತೋಮ...ಪ್ರಜಾವಾಣಿ ಚಿತ್ರ   

ಬೆಂಗಳೂರು: ಬಸವನಗುಡಿ ಕಡಲೆಕಾಯಿ ಪರಿಷೆಗೆ ಗುರುವಾರ ಅಧಿಕೃತ ತೆರೆಬಿದ್ದಿದ್ದು, ಒಂದು ವಾರದಿಂದ ಸುಮಾರು 8 ಲಕ್ಷ ಮಂದಿ ಸೇರಿದ್ದರು. ₹40 ಕೋಟಿಗೂ ಹೆಚ್ಚು ವಹಿವಾಟು ನಡೆದಿದೆ ಎಂದು ಅಂದಾಜಿಸಲಾಗಿದೆ.

ಕೋವಿಡ್‌ ನಂತರ ಮುಕ್ತವಾಗಿ ಈ ಬಾರಿ ಕಡಲೆಕಾಯಿ ಪರಿಷೆ ನಡೆಯಿತು. ಮಾಸ್ಕ್‌ ಹಾಗೂ ಇತರೆ ನಿರ್ಬಂಧಗಳಿಲ್ಲದೆ ಜನರು ಭಾಗವಹಿಸಿದ್ದರು. ಕಾರ್ತೀಕ ಮಾಸದ ಕೊನೆ ಸೋಮವಾರ ನಡೆಯುವ ಈ ಪರಿಷೆಗೆ ನ.20ರ ಭಾನುವಾರ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಚಾಲನೆ ನೀಡಿದ್ದರು. ಗುರುವಾರ ಪರಿಷೆಗೆ ತೆರೆ ಎಳೆಯಲಾಯಿತು.

ಭಾನುವಾರ ಸಂಜೆ ಚಾಲನೆ ಸಿಕ್ಕಿದ್ದರೂ ನ.17ರಿಂದಲೇ ಬಸವನಗುಡಿ ಮುಖ್ಯರಸ್ತೆಯಲ್ಲಿ ಪರಿಷೆಯ ಸಂಭ್ರಮ ಮನೆಮಾಡಿತ್ತು. ರಸ್ತೆಯ ಇಕ್ಕೆಲಗಳಲ್ಲಿ ಕಡಲೆಕಾಯಿ ಸೇರಿ ಎಲ್ಲ ರೀತಿಯ ಸಾಮಗ್ರಿಗಳ ಮಾರಾಟವಿತ್ತು. ಗುರುವಾರ ಸಂಜೆಯೂ ಸಾಕಷ್ಟು ಜನರು ಸೇರಿದ್ದರು.

ADVERTISEMENT

‘ಕಡಲೆಕಾಯಿ ಪರಿಷೆಗೆ ಈ ಬಾರಿ ಹೆಚ್ಚಿನ ಜನರು ಸೇರಿದ್ದರು. ಬಸವನಗುಡಿ ಮುಖ್ಯರಸ್ತೆಯ 1.5 ಕಿ.ಮೀ. ಹಾಗೂ ಸುತ್ತಮುತ್ತಲಿನ ರಸ್ತೆ ಸೇರಿ ಸುಮಾರು 3 ಕಿ.ಮೀ. ರಸ್ತೆ ಜನರಿಂದ ತುಂಬಿಹೋಗಿತ್ತು. ಒಂದು ವಾರದಲ್ಲಿ ಸುಮಾರು 8 ಲಕ್ಷ ಜನರು ಇಲ್ಲಿಗೆ ಬಂದಿರಬಹುದು ಎಂದು ಅಂದಾಜು ಮಾಡಲಾಗಿದೆ. ಇದು ಹೊಸ ದಾಖಲೆ. ಗುರುವಾರ ಸಂಜೆ ಹೆಚ್ಚಿನ ಜನರಿದ್ದರೂ ಪರಿಷೆಯನ್ನು ಅಧಿಕೃತವಾಗಿ ಮುಕ್ತಾಯಗೊಳಿಸಲಾಯಿತು’ ಎಂದು ಬಸವನಗುಡಿ ಶಾಸಕ ರವಿ ಸುಬ್ರಹ್ಮಣ್ಯ ತಿಳಿಸಿದರು.

ತೆಪ್ಪೋತ್ಸವಕ್ಕೆ ಜನಸಾಗರ: ಕೆಂಪಾಂಬುಧಿ ಕೆರೆಯಲ್ಲಿ ಕಡಲೆಕಾಯಿ ಪರಿಷೆ ಅಂಗವಾಗಿ ನಡೆದ ನಂದಿ ತೆಪ್ಪೋತ್ಸವಕ್ಕೆ 25 ಸಾವಿರಕ್ಕೂ ಹೆಚ್ಚು ಮಂದಿ ಸೇರಿದ್ದರು. 13 ವರ್ಷಗಳ ನಂತರ ನಡೆದ ತೆಪ್ಪೋತ್ಸವ ಈ ಬಾರಿ ಪರಿಷೆಯ ಪ್ರಮುಖ ಆಕರ್ಷಣೆಯಾಗಿತ್ತು ಎಂದರು.

₹40 ಕೋಟಿ ವಹಿವಾಟು: ‘ಕಡಲೆಕಾಯಿ ಪರಿಷೆಗೆ 1700ಕ್ಕೂ ಹೆಚ್ಚು ವ್ಯಾಪಾರಿಗಳು ನೋಂದಣಿ ಮಾಡಿಕೊಂಡಿದ್ದರು. ಇದಲ್ಲದೆ ನಗರದ ಹಲವು ಭಾಗಗಳಿಂದ ಇನ್ನೂ ಹೆಚ್ಚಿನ ವ್ಯಾಪಾರಿಗಳು ಒಂದು ವಾರ ವಹಿವಾಟು ನಡೆಸಿದ್ದಾರೆ. ಸುಮಾರು ₹40 ಕೋಟಿಯಷ್ಟು ವಹಿವಾಟು ಆಗಿರಬಹುದು ಎಂದು ಅಂದಾಜಿಸಲಾಗಿದೆ’ ಎಂದು ಬಿಬಿಎಂಪಿ ದಕ್ಷಿಣ ವಲಯದ ವಿಶೇಷ ಆಯುಕ್ತ ಜಯರಾಮ್‌ ರಾಯಪುರ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.