ADVERTISEMENT

ಲೋಕ ಅದಾಲತ್‌: ಮತ್ತೆ ಒಂದಾದ 80 ವರ್ಷ ಮೀರಿದ ದಂಪತಿ

7 ಲಕ್ಷಕ್ಕೂ ಹೆಚ್ಚು ಪ್ರಕರಣ ವಿಲೇವಾರಿ

​ಪ್ರಜಾವಾಣಿ ವಾರ್ತೆ
Published 28 ಜೂನ್ 2022, 4:50 IST
Last Updated 28 ಜೂನ್ 2022, 4:50 IST
ಮಾಧ್ಯಮ ಗೋಷ್ಠಿಯಲ್ಲಿ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಎಚ್‌.ಸುದರ್ಶನ ಶೆಟ್ಟಿ, ಕಾರ್ಯನಿರ್ವಾಹಕ ಅಧ್ಯಕ್ಷರೂ ಆದ ನ್ಯಾಯಮೂರ್ತಿ ಬಿ.ವೀರಪ್ಪ, ಉಪ ಕಾರ್ಯದರ್ಶಿ ಕಾವೇರಿ, ಬೆಂಗಳೂರು ನಗರ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಎಂ.ಪುರುಷೋತ್ತಮ ಇದ್ದರು. ಪ್ರಜಾವಾಣಿ ಚಿತ್ರ
ಮಾಧ್ಯಮ ಗೋಷ್ಠಿಯಲ್ಲಿ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಎಚ್‌.ಸುದರ್ಶನ ಶೆಟ್ಟಿ, ಕಾರ್ಯನಿರ್ವಾಹಕ ಅಧ್ಯಕ್ಷರೂ ಆದ ನ್ಯಾಯಮೂರ್ತಿ ಬಿ.ವೀರಪ್ಪ, ಉಪ ಕಾರ್ಯದರ್ಶಿ ಕಾವೇರಿ, ಬೆಂಗಳೂರು ನಗರ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಎಂ.ಪುರುಷೋತ್ತಮ ಇದ್ದರು. ಪ್ರಜಾವಾಣಿ ಚಿತ್ರ   

ಬೆಂಗಳೂರು: ‘ಕಳೆದ ಐವತ್ತು ವರ್ಷಗಳಿಂದ ಪ್ರತ್ಯೇಕವಾಗಿ ವಾಸವಿದ್ದ 80 ವರ್ಷದ ದೂರುದಾರರಾದ ವೃದ್ಧೆ ಹಾಗೂ 85 ವರ್ಷದ ವೃದ್ಧ ಎದುರುದಾರರು ಒಂದಾಗುವ ಮೂಲಕ ದಾಂಪತ್ಯ ಪುನರ್‌ ಸ್ಥಾಪಿಸಿಕೊಂಡಿರುವುದು ಈ ಬಾರಿಯ ಲೋಕ ಅದಾಲತ್‌ ವಿಶೇಷವಾಗಿದೆ’ ಎಂದು ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಕಾರ್ಯ ನಿರ್ವಾಹಕ ಅಧ್ಯಕ್ಷರೂ ಆದ ನ್ಯಾಯಮೂರ್ತಿ ಬಿ.ವೀರಪ್ಪ ಬಣ್ಣಿಸಿದರು.

ಈ ಕುರಿತಂತೆ ಸೋಮವಾರ ಹೈಕೋರ್ಟ್‌ನಲ್ಲಿ ಮಾಧ್ಯಮಗೋಷ್ಠಿಯಲ್ಲಿ ವಿವರ ನೀಡಿದ ಅವರು, ‘ಇದೇ 25ರಂದು ನಡೆದ ರಾಷ್ಟ್ರೀಯ ಲೋಕ ಅದಾಲತ್‌ನಲ್ಲಿ 7 ಲಕ್ಷಕ್ಕೂ ಹೆಚ್ಚು ಪ್ರಕರಣಗಳನ್ನು ವಿಲೇವಾರಿ ಮಾಡಲಾಗಿದ್ದು, ಅವುಗಳಲ್ಲಿ ವಿಚಾರಣೆಗೆ ಬಾಕಿ ಇದ್ದ 2,64,464 ಹಾಗೂ 5,00,613 ವ್ಯಾಜ್ಯ ಪೂರ್ವ ಪ್ರಕರಣಗಳನ್ನು ವಿಲೇವಾರಿ ಮಾಡಲಾಗಿದೆ’ ಎಂದು ತಿಳಿಸಿದರು.

‘ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ವತಿಯಿಂದ ವೈವಾಹಿಕ ಪ್ರಕರಣಗಳನ್ನು ಹೆಚ್ಚು ಇತ್ಯರ್ಥಪಡಿಸುವಂತೆ ಉತ್ತೇಜಿಸಲಾಗಿತ್ತು. ಈ ದಿಸೆಯಲ್ಲಿ ಒಟ್ಟು 1,128 ವೈವಾಹಿಕ ಪ್ರಕರಣಗಳನ್ನು ವಿಲೇವಾರಿ ಮಾಡಲಾಗಿದೆ. 107ಕ್ಕಿಂತಲೂ ಹೆಚ್ಚಿನ ಪ್ರಕರಣಗಳಲ್ಲಿ ರಾಜಿ ಸಂಧಾನದಿಂದ ದಂಪತಿ ಪುನಃ ಒಂದಾಗಿ ಜೀವನ ನಡೆಸಲು ತೀರ್ಮಾನಿಸಿದ್ದಾರೆ’ ಎಂದು ಹೇಳಿದರು.

ADVERTISEMENT

‘ವಿಚ್ಛೇದನ ಬಯಸಿದ್ದ ಪ್ರಕರಣಗಳಲ್ಲಿ ಮೈಸೂರಿನ 40, ಬೆಂಗಳೂರಿನ 30 ಹಾಗೂ ಬೇರೆ ಬೇರೆ ಜಿಲ್ಲೆಗಳಲ್ಲಿ ಹೆಚ್ಚಿನ ಸಂಖ್ಯೆಯ ದಂಪತಿಗಳು ಲೋಕ ಅದಾಲತ್‌ ರಾಜಿ ಸಂಧಾನದ ಮೂಲಕ ಪುನಃ ಒಂದಾಗಿ ಜೀವನ ನಡೆಸಲು ಒಪ್ಪಿಕೊಂಡಿರುವುದು ಹೆಗ್ಗಳಿಕೆ’ ಎಂದರು.

ವಾಣಿಜ್ಯ ದಾವೆ: ‘ಬೆಂಗಳೂರಿನ ಎಂಟು ವಾಣಿಜ್ಯ ನ್ಯಾಯಾಲಯಗಳಲ್ಲಿ ಒಟ್ಟು 226 ದಾವೆಗಳನ್ನು ರಾಜಿ ಸಂಧಾನದ ಮೂಲಕ ಬಗೆಹರಿಸಿ ಪರಿಹಾರದ ಮೊತ್ತ ₹ 7.96 ಕೋಟಿ ಪಾವತಿಸಲಾಗಿದೆ’ ಎಂದರು.

ಡ್ರಾಮಾ ಜ್ಯೂನಿಯರ್‌ನಲ್ಲೂ ಅದಾಲತ್‌..!

‘ಝೀ ಕನ್ನಡ ವಾಹಿನಿಯ ಡ್ರಾಮಾ ಜ್ಯೂನಿಯರ್‌ ಹೆಸರಿನ ರಿಯಾಲಿಟಿ ಶೋನಲ್ಲಿ ಮಕ್ಕಳಿಂದ ಲೋಕ ಅದಾಲತ್‌ ಕುರಿತು ಕಿರು ನಾಟಕ ಪ್ರದರ್ಶಿಸಲಾಗಿದೆ’ ಎಂದು ನ್ಯಾ.ವೀರಪ್ಪ ತಿಳಿಸಿದರು.

‘ರಾಜ್ಯ ರಸ್ತೆಸಾರಿಗೆ ಸಂಸ್ಥೆಯ ಬಸ್‌ಗಳಲ್ಲಿ ನೀಡಲಾಗುವ ಟಿಕೆಟ್‌ಗಳಲ್ಲಿ ಅದಾಲತ್‌ ಕುರಿತ ಸಂದೇಶ ಮುದ್ರಿಸಲಾಗಿದೆ. ಸ್ಮಾರ್ಟ್‌ ಸಿಟಿ ಯೋಜನೆಯಡಿ ಅಳವಡಿಸಲಾಗಿರುವ ಎಲ್‌ಇಡಿ ಸ್ಕ್ರೀನ್‌ಗಳಲ್ಲಿ ಲೋಕ ಅದಾಲತ್‌ ಬ್ಯಾನರ್‌ಗಳನ್ನು ಪ್ರದರ್ಶಿಸಲಾಗಿದೆ. ಟೆಲಿಗ್ರಾಮ್‌ ಗ್ರೂಪ್‌ ಮತ್ತು ಕರ್ನಾಟಕ ರಾಜ್ ಕಾನೂನು ಸೇವೆಗಳ ಪ್ರಾಧಿಕಾರದ ಟೆಲಿಗ್ರಾಮ್‌ ಚಾನೆಲ್‌ ರೂಪಿಸಲಾಗಿದೆ’ ಎಂದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.