ADVERTISEMENT

RR ನಗರ ಕಂದಾಯ ಕಚೇರಿಯಲ್ಲಿ 808 ನಕಲಿ ಖಾತೆ, ₹20 ಕೋಟಿ ವಂಚನೆ: ರಮೇಶ್‌

​ಪ್ರಜಾವಾಣಿ ವಾರ್ತೆ
Published 13 ಮಾರ್ಚ್ 2024, 16:04 IST
Last Updated 13 ಮಾರ್ಚ್ 2024, 16:04 IST
808 ನಕಲಿ ಖಾತೆಗಳ ದಾಖಲೆಗಳನ್ನು ರಮೇಶ್‌ ಎನ್‌.ಆರ್‌ ಪ್ರದರ್ಶಿಸಿದರು
808 ನಕಲಿ ಖಾತೆಗಳ ದಾಖಲೆಗಳನ್ನು ರಮೇಶ್‌ ಎನ್‌.ಆರ್‌ ಪ್ರದರ್ಶಿಸಿದರು   

ಬೆಂಗಳೂರು: ‘ರಾಜರಾಜೇಶ್ವರಿನಗರ ಉಪವಿಭಾಗದ ಸಹಾಯಕ ಕಂದಾಯ ಅಧಿಕಾರಿಗಳ ಕಚೇರಿಯಲ್ಲಿ 808 ನಕಲಿ ಖಾತೆಗಳನ್ನು ಮಾಡಲಾಗಿದ್ದು, ₹20 ಕೋಟಿಗೂ ಹೆಚ್ಚು ಹಣ ಬಿಬಿಎಂಪಿಗೆ ವಂಚಿಸಲಾಗಿದೆ’ ಎಂದು ಪಾಲಿಕೆಯ ಮಾಜಿ ಆಡಳಿತ ಪಕ್ಷದ ನಾಯಕ ರಮೇಶ್‌ ಎನ್‌.ಆರ್‌. ಆರೋಪಿಸಿದ್ದಾರೆ.

ಬಿಬಿಎಂಪಿ ಮುಖ್ಯ ಆಯುಕ್ತರಿಗೆ 122 ಪುಟಗಳ ದಾಖಲೆ ಸಹಿತ ದೂರು ಸಲ್ಲಿಸಿರುವ ಅವರು, ‘ಚನ್ನಸಂದ್ರ, ಹಲಗೆವಡೇರಹಳ್ಳಿ ಮತ್ತು ಹೊಸಕೆರೆಹಳ್ಳಿ ಪ್ರದೇಶಗಳಿಗೆ ಸಂಬಂಧಿಸಿದಂತೆ ಒಟ್ಟು 808 ಖಾತೆಗಳನ್ನು ಎ ವಹಿಯಲ್ಲಿ ಸೃಷ್ಟಿಸಲಾಗಿದೆ. ಪ್ರಥಮ ದರ್ಜೆ ನೌಕರ ಓಂಕಾರಮೂರ್ತಿ ಅವರದ್ದೇ ದೊಡ್ಡ ಪಾತ್ರ ಇದರಲ್ಲಿದೆ’ ಎಂದು ಹೇಳಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಮಂಗಳವಾರ ಮಾತನಾಡಿದ ರಮೇಶ್‌, ‘ರಾಜರಾಜೇಶ್ವರಿನಗರ ಉಪ ವಿಭಾಗದ ಸಹಾಯಕ ಕಂದಾಯ ಅಧಿಕಾರಿಗಳ ಕಚೇರಿಯಲ್ಲಿ ಅಧಿಕಾರಿ, ನೌಕರರಿಗಿಂತಲೂ ಮಧ್ಯವರ್ತಿಗಳ ಹಾವಳಿಯೇ ಹೆಚ್ಚಾಗಿದೆ. ಯಶವಂತಕುಮಾರ್‌, ವಿಜಯಕುಮಾರ್, ಮುತ್ತುರಾಜ್‌ ಎಂಬ ಮಧ್ಯವರ್ತಿಗಳು ಕಂದಾಯ ಪರಿವೀಕ್ಷಕರು ಮತ್ತು ಕಂದಾಯ ವಸೂಲಿಗಾರರ ಆಸನಗಳಲ್ಲಿ ಕುಳಿತು ತಮಗಿಷ್ಟ ಬಂದಂತೆ ದಾಖಲೆಗಳಲ್ಲಿ ಎಂಟ್ರಿ ಮಾಡುತ್ತಿದ್ದಾರೆ’ ಎಂದು ಆರೋಪಿಸಿದರು.

ADVERTISEMENT

‘ಮಧ್ಯವರ್ತಿಗಳು ಸೃಷ್ಟಿಸಿದ ದಾಖಲೆಗಳಿಗೆ ಕಂದಾಯ ಪರಿವೀಕ್ಷಕರಾದ ಗಣೇಶ್‌, ಸಹಾಯಕ ಕಂದಾಯ ಅಧಿಕಾರಿ ಅರುಣ್ ಕುಮಾರ್‌ ಸಹಿ ಹಾಕಿಕೊಟ್ಟಿದ್ದಾರೆ. ಈ ಎಲ್ಲ 808 ಖಾತೆಗಳನ್ನು ಸೃಷ್ಟಿಸಿರುವ ಅಧಿಕಾರಿಗಳ ವಿರುದ್ಧ ಕಾನೂನು ಪ್ರಕಾರ ಕ್ರಮ ಕೈಗೊಳ್ಳಬೇಕು. ಉಪ ಆಯುಕ್ತರನ್ನು ಅಮಾನತು ಮಾಡಬೇಕು’ ಎಂದು ಅವರು ಆಗ್ರಹಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.