ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ
ಪ್ರಾತಿನಿಧಿಕ ಚಿತ್ರ
ಬೆಂಗಳೂರು: ಹಿಂದುಳಿದ ವರ್ಗಗಳ ಆಯೋಗ ನಡೆಸುತ್ತಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಕಾರ್ಯ ಬೆಂಗಳೂರು ನಗರ ಜಿಲ್ಲೆಯಲ್ಲಿ ಶೇ 81.25ರಷ್ಟು ಪೂರ್ಣಗೊಂಡಿದೆ ಎಂದು ಹಿಂದುಳಿದ ವರ್ಗಗಳ ಆಯೋಗದ ಸದಸ್ಯ ಜಿ.ಎನ್. ಶ್ರೀಕಂಠಯ್ಯ ತಿಳಿಸಿದರು.
ಬೆಂಗಳೂರು ನಗರ ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ಸಮೀಕ್ಷೆಯ ಪ್ರಗತಿ ಪರಿಶೀಲನೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ನಗರ ಜಿಲ್ಲೆಯಲ್ಲಿ ಸಮೀಕ್ಷೆ ಕಾರ್ಯ ಕಷ್ಟದ ಕೆಲಸ. ಇಲ್ಲಿ ಬಹು ಸಂಖ್ಯೆಯಲ್ಲಿ ಅಪಾರ್ಟ್‌ಮೆಂಟ್‌ಗಳಿದ್ದು, ಜನರು ಪ್ರತಿದಿನ ಕೆಲಸಕ್ಕೆ ತೆರಳುವುದರಿಂದ ಬೆಳಿಗ್ಗೆ ಮನೆಗಳಲ್ಲಿ ಲಭ್ಯವಿರುವುದಿಲ್ಲ. ಕೆಲವು ಸಂದರ್ಭದಲ್ಲಿ ಗಣತಿದಾರರಿಗೆ ಸಾರ್ವಜನಿಕರು ಮಾಹಿತಿಯನ್ನು ನೀಡಲು ನಿರಾಕರಿಸುತ್ತಾರೆ. ಇಂತಹ ಸವಾಲುಗಳ ನಡುವೆಯೂ ಗಣತಿದಾರರು ಉತ್ತಮವಾಗಿ ಕೆಲಸ ನಿರ್ವಹಿಸಿದ್ದಾರೆ ಎಂದು ಹೇಳಿದರು.
ಜಿಲ್ಲೆಯಲ್ಲಿ 7,91,095 ಲಕ್ಷ ಮನೆಗಳಿದ್ದು 6,20,000 ಮನೆಗಳ ಸಮೀಕ್ಷೆ ಮುಗಿಸಿದ್ದಾರೆ. 15,46,525 ಜನಸಂಖ್ಯೆ ಪೈಕಿ ಒಟ್ಟು 12,41,429 ಜನರ ಗಣತಿ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.
ಜಿಲ್ಲಾಧಿಕಾರಿ ಜಗದೀಶ ಜಿ. ಮಾತನಾಡಿ, ‘ನಗರ ಜಿಲ್ಲೆಯಲ್ಲಿ ಪ್ರಾರಂಭಿಕ ಹಂತದಲ್ಲಿ ಬಿಬಿಎಂಪಿ ದತ್ತಾಂಶ ಹಾಗೂ ನಗರ ಜಿಲ್ಲೆಯ ದತ್ತಾಂಶಗಳು ಸ್ಪಷ್ಟವಾಗಿ ದೊರಕಲಿಲ್ಲ. ವಲಸಿಗರು ಹೆಚ್ಚಿನ ಸಂಖ್ಯೆಯಲ್ಲಿದ್ದು, ಅನ್ಯ ಭಾಷಿಕರೇ ಅಧಿಕ ಇರುವುದು ಕೂಡ ತೊಡಕಿಗೆ ಕಾರಣವಾಯಿತು’ ಎಂದು ವಿವರಿಸಿದರು.
ಕಳೆದ ನಾಲ್ಕು ದಿನಗಳಲ್ಲಿ ಬೆಂಗಳೂರು ನಗರ ಜಿಲ್ಲಾ ವ್ಯಾಪ್ತಿಗೆ ಬಿಬಿಎಂಪಿ ವ್ಯಾಪ್ತಿಯ 7,000 ಮನೆಗಳು ಸೇರ್ಪಡೆಗೊಂಡಿವೆ. ಇತರೆ ಜಿಲ್ಲೆಗಳಿಗೆ ಹೋಲಿಸಿದರೆ ಬೆಂಗಳೂರು ನಗರ ಜಿಲ್ಲೆಯಲ್ಲಿ ಒಬ್ಬ ಗಣತಿದಾರರು 250ಕ್ಕಿಂತ ಹೆಚ್ಚು ಮನೆಗಳ ಸಮೀಕ್ಷೆ ಪೂರ್ಣಗೊಳಿಸಿದ್ದಾರೆ ಎಂದು ತಿಳಿಸಿದರು.
‘ವೈದ್ಯಕೀಯ ವೆಚ್ಚ ಭರಿಸಲು ಕ್ರಮ: ಸಮೀಕ್ಷಾ ಕಾರ್ಯದಲ್ಲಿ ಪಾಲ್ಗೊಂಡ ಗಣತಿದಾರರೊಬ್ಬರಿಗೆ ಹೃದಯಘಾತವಾಗಿದೆ. ಕೆಲವರಿಗೆ ನಾಯಿ ಹಾಗೂ ಹಾವು ಕಡಿತದಿಂದ ತೊಂದರೆಯುಂಟಾಗಿರುವ ಬಗ್ಗೆ ಮಾಹಿತಿ ಬಂದಿದೆ. ಇದಕ್ಕಾಗಿ ಚಿಕಿತ್ಸೆಯನ್ನು ಪಡೆದಿದ್ದಲ್ಲಿ ಅವರ ವೈದ್ಯಕೀಯ ವೆಚ್ಚವನ್ನು ಭರಿಸಲು ಹಾಗೂ ಪರಿಹಾರ ಮಂಜೂರಾತಿಗಾಗಿ ಆಯೋಗದಿಂದ ಕ್ರಮ ವಹಿಸಲಾಗುವುದು’ ಎಂದು ಜಿ.ಎನ್. ಶ್ರೀಕಂಠಯ್ಯ ಭರವಸೆ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.