ADVERTISEMENT

9ರಿಂದ ಮಕ್ಕಳ ಸಿನಿಮೋತ್ಸವ

​ಪ್ರಜಾವಾಣಿ ವಾರ್ತೆ
Published 3 ಜನವರಿ 2012, 19:30 IST
Last Updated 3 ಜನವರಿ 2012, 19:30 IST

ಬೆಂಗಳೂರು: ಮಕ್ಕಳಲ್ಲಿ ಸಿನಿಮಾಗಳ ಬಗ್ಗೆ ಅಭಿರುಚಿ ಬೆಳೆಸುವ ಸಲುವಾಗಿ ಚಿಲ್ಡ್ರನ್ಸ್ ಇಂಡಿಯಾ ಸಂಸ್ಥೆಯು ರಾಜ್ಯದಲ್ಲಿ ಜನವರಿ 9ರಿಂದ ಏಳನೇ ಅಂತರರಾಷ್ಟ್ರೀಯ ಮಕ್ಕಳ ಚಲನಚಿತ್ರೋತ್ಸವವನ್ನು ಆಯೋಜಿಸಿದೆ.

`ಬೆಂಗಳೂರಿನ ವಸಂತನಗರದ ದೇವರಾಜು ಅರಸು ಭವನದಲ್ಲಿ ಇದೇ 9ರಂದು ಚಲನಚಿತ್ರೋತ್ಸವದ ಉದ್ಘಾಟನಾ ಸಮಾರಂಭ ನಡೆಯಲಿದೆ. ರಾಜ್ಯದ ವಿವಿಧ ನಗರಗಳಲ್ಲಿ ಇದೇ 26ರವರೆಗೆ ಉತ್ಸವ ಮುಂದುವರಿಯಲಿದ್ದು, ಬೆಂಗಳೂರು ಸೇರಿದಂತೆ ಮಂಗಳೂರು, ಉಡುಪಿ, ಚಿಕ್ಕಮಗಳೂರು, ಹಾಸನ, ಮಡಿಕೇರಿ ಹಾಗೂ ಚಾಮರಾಜನಗರದ ವಿವಿಧ ಚಿತ್ರಮಂದಿರಗಳಲ್ಲಿ ಸುಮಾರು 100 ಚಲನಚಿತ್ರಗಳು ಪ್ರದರ್ಶನಗೊಳ್ಳಲಿದೆ~ ಎಂದು ಸಂಸ್ಥೆಯ ಅಧ್ಯಕ್ಷ ಎನ್.ಆರ್.ನಂಜುಂಡೇಗೌಡ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಜ.13ರವರೆಗೆ ನಗರದಲ್ಲಿ ಚಿತ್ರೋತ್ಸವ ನಡೆಯಲಿದ್ದು, ಸುಮಾರು 25 ದೇಶಗಳ ಸಿನಿಮಾಗಳನ್ನು ಪ್ರದರ್ಶಿಸಲಾಗುತ್ತದೆ. ಪರಿಸರ ವಿಷಯಕ್ಕೆ ಸಂಬಂಧಪಟ್ಟಂತೆ ಜ.10ರಂದು ಸುಚಿತ್ರಾ ಚಿತ್ರಮಂದಿರದಲ್ಲಿ ಪರಿಸರ ಚಿತ್ರೋತ್ಸವ ನಡೆಯಲಿದೆ. ಮಲ್ಲೇಶ್ವರದ ಸೇವಾ ಸದನದಲ್ಲಿ ಇರಾನಿ ಚಿತ್ರೋತ್ಸವವನ್ನು ಹಮ್ಮಿಕೊಳ್ಳಲಾಗಿದೆ.
ಉತ್ಸವದ ಸಮಾರೋಪ ಸಮಾರಂಭ ಬಾಲಭವನದಲ್ಲಿ ನಡೆಯಲಿದ್ದು, ಈ ಬಾರಿಯು ಹೆಚ್ಚು ಶಾಲಾ ಮಕ್ಕಳು ಚಿತ್ರ ವೀಕ್ಷಣೆಗೆ ಬರುತ್ತಾರೆ ಎಂಬ ನಿರೀಕ್ಷೆಯಿದೆ ಎಂದರು.

ಕರ್ನಾಟಕ ರಾಜ್ಯ ಚಲನಚಿತ್ರ ವಾಣಿಜ್ಯ ಮಂಡಳಿಯ ಪ್ರಧಾನ ಕಾರ್ಯದರ್ಶಿ ಸಾ.ರಾ.ಗೋವಿಂದು, `ಕೇವಲ ಅಕಾಡೆಮಿಗಳಿಂದ ಮಾತ್ರ ಚಲನಚಿತ್ರ ಉತ್ಸವವನ್ನು ಅಪೇಕ್ಷಿಸುವುದು ಸರಿಯಲ್ಲ. ಚಲನಚಿತ್ರ ಕ್ಷೇತ್ರದ ವ್ಯಾಪ್ತಿಯನ್ನು ವಿಸ್ತರಿಸಲು ಆಸಕ್ತಿ ಇರುವವರು ನಡೆಸುವ ಇಂತಹ ಉತ್ಸವಗಳಿಂದ ಮಕ್ಕಳಲ್ಲಿ ಚಿತ್ರೋದ್ಯಮ ಕುರಿತು ಆಸಕ್ತಿ ಹೆಚ್ಚುತ್ತದೆ~ ಎಂದು ಹೇಳಿದರು.

ಉತ್ಸವದಲ್ಲಿ ಪಾಲ್ಗೊಳ್ಳಲು ಉಚಿತ ಅವಕಾಶವಿದೆ. ಹೆಚ್ಚಿನ  ಮಾಹಿತಿಗೆ ಸಂಪರ್ಕಿಸಿ- 94480 86161.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.