ADVERTISEMENT

9 ರಂದು ದಕ್ಷಿಣ ರಾಜ್ಯಗಳ ಸಾರಿಗೆ ಸಚಿವರ ಸಮ್ಮೇಳನ

​ಪ್ರಜಾವಾಣಿ ವಾರ್ತೆ
Published 5 ಮಾರ್ಚ್ 2018, 19:52 IST
Last Updated 5 ಮಾರ್ಚ್ 2018, 19:52 IST
ಎಚ್‌.ಎಂ.ರೇವಣ್ಣ
ಎಚ್‌.ಎಂ.ರೇವಣ್ಣ   

ಬೆಂಗಳೂರು: ದಕ್ಷಿಣ ರಾಜ್ಯಗಳ ಸಾರಿಗೆ ಸಚಿವರ ಸಮ್ಮೇಳನ ಬೆಂಗಳೂರಿನಲ್ಲಿ ಇದೇ 9 ರಂದು ನಡೆಸಲಾಗುವುದು ಎಂದು ಸಾರಿಗೆ ಸಚಿವ ಎಚ್‌.ಎಂ.ರೇವಣ್ಣ ತಿಳಿಸಿದರು.

ಕರ್ನಾಟಕ, ತೆಲಂಗಾಣ, ಸೀಮಾಂಧ್ರ, ತಮಿಳುನಾಡು, ಕೇರಳ, ಗೋವಾ, ಪುದುಚೇರಿ ಮತ್ತು ಮಹಾರಾಷ್ಟ್ರ ರಾಜ್ಯಗಳ ಸಾರಿಗೆ ಸಚಿವರು ಮತ್ತು ಅಧಿಕಾರಿಗಳು ಸಮ್ಮೇಳನದಲ್ಲಿ ಭಾಗವಹಿಸುವರು ಎಂದು  ಮಾಧ್ಯಮಗೋಷ್ಠಿಯಲ್ಲಿ ಹೇಳಿದರು.

ಅಂತರ ರಾಜ್ಯ ಸಾರಿಗೆ ಸಮಸ್ಯೆಗಳು, ಪರ್ಮಿಟ್‌ ವ್ಯವಸ್ಥೆ, ಹೊಸ ತಂತ್ರಜ್ಞಾನಗಳ ಅಳವಡಿಕೆ ಹಾಗೂ ಎಲ್ಲ ರಾಜ್ಯಗಳ ಸಾರಿಗೆ ಇಲಾಖೆಗಳ ನಡುವೆ ಸಮನ್ವಯ ಸಾಧಿಸುವುದಕ್ಕೆ ಸಂಬಂಧಿಸಿದಂತೆ ಚರ್ಚೆ ನಡೆಸಿ ಸೂಕ್ತ ನಿರ್ಣಯ ತೆಗೆದುಕೊಳ್ಳಲಾಗುವುದು ಎಂದು ಅವರು ಹೇಳಿದರು.

ADVERTISEMENT

ಮಹಿಳಾ ಪ್ರಯಾಣಿಕರಿಗೆ ಸೌಲಭ್ಯ: ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಪ್ರಯುಕ್ತ ಇದೇ 8 ರಿಂದ ಮಹಿಳೆಯರಿಗೆ ಪಿಂಕ್‌ ಸೀಟ್ ಸೌಲಭ್ಯ, ಇಂದಿರಾ ಸಾರಿಗೆ, ಇಂದಿರಾ ಪಾಸ್‌ ಸೌಲಭ್ಯಗಳನ್ನು ಜಾರಿಗೆ ತರಲಾಗುವುದು ಎಂದು  ರೇವಣ್ಣ ತಿಳಿಸಿದರು.

ಬಸ್ಸಿನಲ್ಲಿ  ಪ್ರಯಾಣಿಸುವಾಗ ನಿಲ್ದಾಣಕ್ಕೂ ಮೊದಲೇ ಮನೆ ಅಥವಾ ಕಚೇರಿಗೆ ಹೋಗಲು ಒಂಟಿ ಮಹಿಳೆಯರು ಇಳಿಯಬೇಕಾದರೆ, ಅವರ ಕೋರಿಕೆ ಮೇರೆಗೆ ಬಸ್‌ ನಿಲ್ಲಿಸಿ ಇಳಿಸುವ ವ್ಯವಸ್ಥೆ ಮಾಡಲಾಗುವುದು ಎಂದು ವಿವರಿಸಿದರು.

ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣಗಳಲ್ಲಿ ಪ್ರಯಾಣಿಕರಿಗೆ ಅನುಕೂಲವಾಗುವಂತೆ ಶುದ್ಧ ಕುಡಿಯುವ ನೀರು ಒದಗಿಸಲಾಗುವುದು. ನೀರು ಶುದ್ಧೀಕರಣ ಘಟಕಗಳನ್ನು 15 ಪ್ರಮುಖ ಬಸ್‌ ನಿಲ್ದಾಣಗಳಲ್ಲಿ ಅಳವಡಿಸಲಾಗುವುದು. ಪ್ರಯಾಣಿಕರಿಗೆ ಕೇವಲ ₹ 1 ಕ್ಕೆ ಶುದ್ಧೀಕರಿಸಿದ ಒಂದು ಲೀಟರ್‌ ನೀರು ಒದಗಿಸಲಾಗುತ್ತದೆ ಎಂದರು.

ಮುಂದಿನ ಶೈಕ್ಷಣಿಕ ವರ್ಷದಿಂದ 20 ಲಕ್ಷ ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್ ವಿತರಿಸುವ ವ್ಯವಸ್ಥೆ ಮಾಡಲಾಗಿದೆ ಎಂದರು.

‘ಸೀದಾ– ಸಾದಾ ಮನುಷ್ಯ’: ಮುಖ್ಯಮಂತ್ರಿ ಸಿದ್ದರಾಮಯ್ಯ ಒಬ್ಬ ಸೀದಾ– ಸಾದಾ ಮನುಷ್ಯ. ಇಂತಹ ವ್ಯಕ್ತಿಗೆ ಸೀದಾ ರುಪಾಯ್ಯ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಟೀಕಿಸಿರುವುದು ಸರಿಯಲ್ಲ ಎಂದು ರೇವಣ್ಣ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.