ಬೆಂಗಳೂರು: ಹೊಸಕೋಟೆ ದಂಪತಿಯ ಒಂಬತ್ತು ತಿಂಗಳ ಗಂಡು ಮಗುವಿಗೆ ಕೋವಿಡ್ ದೃಢಪಟ್ಟಿದ್ದು, ಹೆಚ್ಚಿನ ಚಿಕಿತ್ಸೆಗೆ ಇಲ್ಲಿನ ವಾಣಿವಿಲಾಸ ಆಸ್ಪತ್ರೆಗೆ ದಾಖಲಿಸಲಾಗಿದೆ.
ಕೆಲ ದಿನಗಳಿಂದ ಜ್ವರ ಕಾಣಿಸಿಕೊಂಡಿದ್ದರಿಂದ ಮಗುವನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿ ಮಗುವಿಗೆ ಕೋವಿಡ್ ಪರೀಕ್ಷೆಯನ್ನು ನಡೆಸಲಾಗಿದ್ದು, ಸೋಂಕು ದೃಢಪಟ್ಟಿದ್ದರಿಂದ ವೈದ್ಯರು ವಾಣಿವಿಲಾಸ ಆಸ್ಪತ್ರೆಗೆ ಶಿಫಾರಸು ಮಾಡಿದ್ದರು. ಮಗುವನ್ನು 22ರ ರಾತ್ರಿ ವಾಣಿವಿಲಾಸ ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ಒದಗಿಸಲಾಗುತ್ತಿದೆ.
‘ಮಗುವಿಗೆ ಮಕ್ಕಳ ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ಆರೋಗ್ಯದ ಮೇಲೆ ನಿಗಾ ವಹಿಸಲಾಗಿದೆ’ ಎಂದು ವೈದ್ಯರು ತಿಳಿಸಿದ್ದಾರೆ.
ಆರೋಗ್ಯ ಇಲಾಖೆ ಮಾಹಿತಿ ಪ್ರಕಾರ ರಾಜ್ಯದಲ್ಲಿ ಈವರೆಗೆ 43 ಕೋವಿಡ್ ಪ್ರಕರಣಗಳು ವರದಿಯಾಗಿವೆ. ಈ ತಿಂಗಳು ಕೋವಿಡ್ ಪೀಡಿತರ ಸಂಖ್ಯೆ ಕೊಂಚ ಏರಿಕೆಯಾಗಿದ್ದು, 33 ಪ್ರಕರಣಗಳು ದೃಢಪಟ್ಟಿವೆ. ಹೆಚ್ಚಿನ ಪ್ರಕರಣಗಳು ಬೆಂಗಳೂರಿನಲ್ಲಿಯೇ ಪತ್ತೆಯಾಗಿವೆ.
‘ಕೋವಿಡ್‌ಗೆ ಸಂಬಂಧಿಸಿದಂತೆ ಸಾರ್ವಜನಿಕರು ಭಯಪಡಬೇಕಾದ ಅಗತ್ಯವಿಲ್ಲ. ಆದರೆ, ಮುನ್ನೆಚ್ಚರಿಕೆ ಕ್ರಮಗಳನ್ನು ಪಾಲಿಸುವುದು ಸೂಕ್ತ’ ಎಂದು ಆರೋಗ್ಯ ಇಲಾಖೆ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.