ADVERTISEMENT

ಬಸವನಗುಡಿ ಕಡಲೆಕಾಯಿ ಪರಿಷೆಗೆ ಯುವಕರ ದಂಡು

​ಪ್ರಜಾವಾಣಿ ವಾರ್ತೆ
Published 21 ನವೆಂಬರ್ 2025, 0:19 IST
Last Updated 21 ನವೆಂಬರ್ 2025, 0:19 IST
ಬಸವನಗುಡಿಯ ಕಡಲೆಕಾಯಿ ಪರಿಷೆಯಲ್ಲಿ ಗುರುವಾರ ಸಂಜೆ ಕಂಡು ಬಂದ ಜನಸಾಗರ
–ಪ್ರಜಾವಾಣಿ ಚಿತ್ರ: ರಂಜು ಪಿ
ಬಸವನಗುಡಿಯ ಕಡಲೆಕಾಯಿ ಪರಿಷೆಯಲ್ಲಿ ಗುರುವಾರ ಸಂಜೆ ಕಂಡು ಬಂದ ಜನಸಾಗರ –ಪ್ರಜಾವಾಣಿ ಚಿತ್ರ: ರಂಜು ಪಿ   

ಬೆಂಗಳೂರು: ನಗರದ ಬಸವನಗುಡಿಯಲ್ಲಿ ನಡೆದಿರುವ ಕಡಲೆಕಾಯಿ ಪರಿಷೆಯು ನಾಲ್ಕನೇ ದಿನವೂ ಹೆಚ್ಚಿನ ಜನರನ್ನು ಆಕರ್ಷಿಸಿತು. ಹಿರಿಯರು, ಕುಟುಂಬದವರ ಜತೆಗೆ ಯುವ ಸಮೂಹದವರು ಪರಿಷೆಯಲ್ಲಿ ಸುತ್ತು ಹಾಕಿ ಬಗೆಬಗೆಯ ಕಡಲೆಕಾಯಿ ರುಚಿ ಸವಿದರು.

ಕಾಲೇಜು ವಿದ್ಯಾರ್ಥಿ, ವಿದ್ಯಾರ್ಥಿನಿಯರು ಬೆಳಗಿನ ತರಗತಿ ಮುಗಿಸಿ ಮಧ್ಯಾಹ್ನ ನಂತರದ ಪರಿಷೆಯಲ್ಲಿ ಖುಷಿಯಿಂದಲೇ ಒಂದು ಸುತ್ತು ಹೆಜ್ಜೆ ಹಾಕುತ್ತಿದ್ದುದು ಕಂಡುಬಂದಿತು. ‌ಕಡಲೆಕಾಯಿಯ ಬಗೆಗಳು, ಬೆಳೆಯುವ ಪರಿ, ಪ್ರದೇಶದ ವಿಶೇಷವನ್ನು ಮಾರಾಟಗಾರರಿಂದಲೇ ಹಲವು ಯುವತಿಯರು ಪಡೆದುಕೊಂಡರು.  

ನಾಲ್ಕು ದಿನದಲ್ಲಿ ಎಂಟೂವರೆ ಲಕ್ಷಕ್ಕೂ ಹೆಚ್ಚು ಮಂದಿ ಆಗಮಿಸಿದ್ದಾರೆ. ಶುಕ್ರವಾರ ಪರಿಷೆಯ ಕೊನೆ ದಿನವಾಗಿದ್ದು, ಹೆಚ್ಚಿನ ಜನ ಆಗಮಿಸುವ ನಿರೀಕ್ಷೆಯಿದೆ.

ADVERTISEMENT

‘ಹಿಂದಿನ ವರ್ಷಗಳಲ್ಲಿ ಎರಡು ದಿನಕ್ಕೆ ಕಡಲೆಕಾಯಿ ಪರಿಷೆ ಮುಗಿದು ಹೋಗುತ್ತಿತ್ತು. ಈ ಬಾರಿ ಐದು ದಿನ ವಿಸ್ತರಣೆ ಆಗಿದ್ದರಿಂದ ಮೊದಲ ಬಾರಿ ಕುಟುಂಬದವರೊಂದಿಗೆ ಬಂದಿದ್ದೆ. ಎರಡನೇ ಬಾರಿ ಸ್ನೇಹಿತರೊಂದಿಗೆ ಬಂದಿದ್ದೇನೆ. ಹಸಿ, ಹುರಿದ, ಬೇಯಿಸಿದ ಕಡಲೆಕಾಯಿ ಸವಿಯುವ ಖುಷಿಯೇ ಬೇರೆ’ ಎಂದು ಬನಶಂಕರಿಯ ವಿದ್ಯಾಶ್ರೀ ಹೇಳಿದರು.

ಆಕರ್ಷಕ ದೀಪಾಲಂಕಾರ: ಮೊದಲ ಬಾರಿಗೆ ದೀಪಾಲಂಕಾರವನ್ನು ಐದು ದಿನ ವಿಸ್ತರಿಸಿದ್ದರಿಂದ ವೈವಿಧ್ಯಮಯ ಚಟುವಟಿಕೆಗೆ ಮುಜರಾಯಿ ಇಲಾಖೆ ಹಾಗೂ ದೇವಸ್ಥಾನದ ಮಂಡಳಿ ಒತ್ತು ನೀಡಿದೆ.

ದೊಡ್ಡ ಬಸವಣ್ಣ ಹಾಗೂ ದೊಡ್ಡಗಣಪತಿ ದೇವಾಲಯವು ವಿಶೇಷ ಹೂವಿನ ಅಲಂಕಾರ ಹಾಗೂ ವಿದ್ಯುತ್‌ ದೀಪಗಳೊಂದಿಗೆ ಕಂಗೊಳಿಸಿ ಜನರನ್ನು ಸೆಳೆಯುತ್ತಿವೆ. ಸಚಿವ ರಾಮಲಿಂಗಾರೆಡ್ಡಿ ಅವರ ಸೂಚನೆ ಹಿನ್ನೆಲೆಯಲ್ಲಿ ದೀಪಾಲಂಕಾರವನ್ನು ವಿಶೇಷವಾಗಿ ಮಾಡಲಾಗಿದ್ದು, ಸಂಜೆ ನಂತರ ಬರುವವರು ದೀಪಗಳ ಸೊಬಗಿಗೆ ಮಾರು ಹೋಗಿದ್ದಾರೆ. 

ಪರಿಷೆ ಆರಂಭವಾಗುವ ಆಶ್ರಮ ವೃತ್ತದಿಂದ ಹಿಡಿದು ಗಾಂಧಿ ಬಜಾರ್ ಮುಖ್ಯರಸ್ತೆ, ಡಿವಿಜಿ ರಸ್ತೆ, ಕೆ.ಆರ್. ರಸ್ತೆ,  ನಾರ್ತ್ ರೋಡ್, ನೆಟ್ಟಕಲ್ಲಪ್ಪ ಸರ್ಕಲ್ ರಸ್ತೆಯಲ್ಲದೇ ನರಸಿಂಹರಾಜ ಕಾಲೊನಿ ರಸ್ತೆಯಲ್ಲೂ ದೀಪಾಲಂಕಾರವನ್ನು ವಿಭಿನ್ನವಾಗಿ ಮಾಡಲಾಗಿದೆ.

ಖರೀದಿ ಭರಾಟೆ ಜೋರು: ಪರಿಷೆಯಲ್ಲಿ ಕಡಲೆಕಾಯಿ ಜತೆಗೆ ಆಟಿಕೆ, ಬಟ್ಟೆ, ಗೃಹಪಯೋಗಿ ವಸ್ತುಗಳ ಮಾರಾಟವೂ ಇದೆ. ತಿಂಡಿ ತಿನಿಸುಗಳ ಖರೀದಿಯೂ ಜೋರಾಗಿದೆ. ಉತ್ತರ ಭಾರತದಿಂದಲೂ ವ್ಯಾಪಾರಸ್ಥರು ಆಗಮಿಸಿದ್ದಾರೆ. ಪ್ಲಾಸ್ಟಿಕ್‌ ಬದಲು ಬಟ್ಟೆ ಬ್ಯಾಗ್‌ಗಳ ಬಳಕೆಗೆ ಒತ್ತು ನೀಡುವುದರಿಂದ ವಿಭಿನ್ನ ಬ್ಯಾಗುಗಳನ್ನು ಖರೀದಿಸುತ್ತಿದ್ದಾರೆ. ಇದರಿಂದ ಸತತ ನಾಲ್ಕು ದಿನದಿಂದ ವಹಿವಾಟು ನಡೆಯುತ್ತಿದೆ.

‘ಕರ್ನಾಟಕದ ನಾಲ್ಕೈದು ಜಿಲ್ಲೆಗಳಲ್ಲದೇ ತಮಿಳುನಾಡು ಭಾಗದವರೂ ತಾವು ಬೆಳೆದ ಕಡಲೆಕಾಯಿ ತಂದು ಇಲ್ಲಿ ಮಾರಾಟ ಮಾಡುತ್ತಿದ್ದಾರೆ. ಕೆಲವರು ವ್ಯಾಪಾರಸ್ಥರು ರಾಶಿ ಗಟ್ಟಲೇ ತಂದಿದ್ದಾರೆ. ಐದು ದಿನವೂ ಇರುವುದರಿಂದ ವಹಿವಾಟು ಕೂಡ ಚೆನ್ನಾಗಿ ಆಗಿದೆ. ಸಣ್ಣ, ದೊಡ್ಡ ಗಾತ್ರದ ಕಡಲೆಕಾಯಿ ಖರೀದಿ ಮಾಡಿದ್ದೇವೆ’ ಎಂದು ಆರ್‌.ಟಿ. ನಗರದ ರಾಮಚಂದ್ರಯ್ಯ ತಿಳಿಸಿದರು.

ಸಚಿವರ ಖುದ್ದು ಮೇಲುಸ್ತುವಾರಿ

ಬಸವನಗುಡಿ ಪರಿಷೆ ಸುಸೂತ್ರವಾಗಿ ನಡೆಯಲು ವಿಶೇಷವಾಗಿ ಗಮನ ನೀಡುತ್ತಿರುವ ಮುಜರಾಯಿ ಹಾಗೂ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರು ಖುದ್ದು ಮೇಲುಸ್ತುವಾರಿ ವಹಿಸಿದ್ದಾರೆ. ನಾಲ್ಕನೇ ದಿನವೂ ದೇವಸ್ಥಾನದ ಆವರಣದಲ್ಲಿಯೇ ಕುಳಿತು ಆಗು ಹೋಗುಗಳನ್ನು ಗಮನಿಸಿದರು.  ಅಲ್ಲದೇ ತಾವೇ ಮೈಕ್‌ ಹಿಡಿದು ’ಜನ ಸುರಕ್ಷತೆಗೆ ಒತ್ತು ಕೊಡಬೇಕು. ನಿಗದಿತ ಮಾರ್ಗದಲ್ಲಿಯೇ ಬರಬೇಕು. ಪೊಲೀಸರ ಸೂಚನೆಗಳನ್ನು ಪಾಲಿಸಬೇಕು’ ಎಂದು ರಾಮಲಿಂಗಾರೆಡ್ಡಿ ಮನವಿ ಮಾಡುತ್ತಿದ್ದರು.  ಪರಿಷೆಗೆ ಬರುವ ಜನರಿಗೆ ಯಾವುದೇ ಅಡಚಣೆ ಆಗದಂತೆ ಪೊಲೀಸ್‌ ಇಲಾಖೆ ಮುಜರಾಯಿ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿ ಗಮನ ವಹಿಸಬೇಕು ಎಂದು ಸೂಚನೆ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.