ADVERTISEMENT

ಬೆಂಗಳೂರು | ಇಬ್ಬರು ಬಾಲಕಿಯರ ಭೀಕರ ಕೊಲೆ; ಮಲತಂದೆಯಿಂದ ಕೃತ್ಯ ಶಂಕೆ

ಅಮೃತಹಳ್ಳಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲು

​ಪ್ರಜಾವಾಣಿ ವಾರ್ತೆ
Published 24 ಆಗಸ್ಟ್ 2024, 23:30 IST
Last Updated 24 ಆಗಸ್ಟ್ 2024, 23:30 IST
ಸ್ಥಳದಲ್ಲಿ ಪೊಲೀಸರು ಪರಿಶೀಲನೆ ನಡೆಸಿದರು. 
ಸ್ಥಳದಲ್ಲಿ ಪೊಲೀಸರು ಪರಿಶೀಲನೆ ನಡೆಸಿದರು.    

ಬೆಂಗಳೂರು: ನಗರದ ಈಶಾನ್ಯ ವಿಭಾಗದ ಅಮೃತಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ದಾಸರಹಳ್ಳಿಯಲ್ಲಿ ಶನಿವಾರ ಇಬ್ಬರು ಬಾಲಕಿಯರನ್ನು ಮಚ್ಚಿನಿಂದ ಕೊಚ್ಚಿ ಭೀಕರವಾಗಿ ಹತ್ಯೆ ಮಾಡಲಾಗಿದೆ.

14 ಹಾಗೂ 16 ವರ್ಷದ ಬಾಲಕಿಯರು ಕೊಲೆಯಾಗಿದ್ಧಾರೆ. 8 ಹಾಗೂ 9ನೇ ತರಗತಿ ಓದುತ್ತಿದ್ದರು.

ಪ್ರಾಥಮಿಕ ತನಿಖೆಯಿಂದ ಹೆಣ್ಣು ಮಕ್ಕಳ ಮಲತಂದೆಯೇ ಕೊಲೆ ಮಾಡಿ ಪರಾರಿಯಾಗಿರುವ ಶಂಕೆಯಿದೆ. ಆರೋಪಿ ಪತ್ತೆಗೆ ವಿಶೇಷ ತಂಡ ರಚಿಸಲಾಗಿದೆ ಎಂದು ಪೊಲೀಸರು ಹೇಳಿದರು. ಅಮೃತಹಳ್ಳಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ADVERTISEMENT

‘ಉತ್ತರ ಪ್ರದೇಶ ಕುಟುಂಬವು ದಾಸರಹಳ್ಳಿಯ ಕಾವೇರಿ ಬಡಾವಣೆಯ ಬಾಡಿಗೆ ಮನೆಯೊಂದರ ಎರಡನೇ ಮಹಡಿಯಲ್ಲಿ ಎರಡು ವರ್ಷಗಳಿಂದ ನೆಲೆಸಿತ್ತು. ಕೊಲೆಯಾದ ಹೆಣ್ಣು ಮಕ್ಕಳ ತಾಯಿ ಅನಿತಾ ಅವರು ಮೊದಲ ಪತಿಯಿಂದ ವಿಚ್ಛೇದನ ಪಡೆದುಕೊಂಡಿದ್ದರು. ಡೆಹ್ರಾಡೂನ್‌ನ ಮೋಹನ್‌ ಎಂಬಾತನ ಜತೆಗೆ ಒಂಬತ್ತು ವರ್ಷಗಳ ಹಿಂದೆ ಎರಡನೇ ಮದುವೆ ಆಗಿದ್ದರು. ಮೋಹನ್‌ ಅವರು ಫುಡ್‌ ಡೆಲಿವರಿ ಕೆಲಸ ಮಾಡುತ್ತಿದ್ದರು. ತಾಯಿ ಗಾರ್ಮೆಂಟ್ಸ್‌ನಲ್ಲಿ ಕೆಲಸ ಮಾಡುತ್ತಿದ್ದರು. ಇಬ್ಬರೂ ಸಮೀಪದ ಶಾಲೆಗೆ ತೆರಳುತ್ತಿದ್ದರು’ ಎಂದು ಪೊಲೀಸರು ಹೇಳಿದರು.

‘ಇಬ್ಬರು ಹೆಣ್ಣು ಮಕ್ಕಳನ್ನು ಮಲತಂದೆ ಮೋಹನ್‌ ಪ್ರೀತಿಯಿಂದಲೇ ನೋಡಿಕೊಳ್ಳುತ್ತಿದ್ದರು ಎನ್ನಲಾಗಿದೆ. ಬೇಕಾದ ಎಲ್ಲ ವಸ್ತುಗಳನ್ನೂ ಕೊಡಿಸುತ್ತಿದ್ದರು. ಆದರೆ, ಎರಡು ತಿಂಗಳಿಂದ ಮಲತಂದೆಯನ್ನು ಮಕ್ಕಳು ಮಾತನಾಡಿಸುತ್ತಿರಲಿಲ್ಲ. ಇದು ಮಲತಂದೆಗೆ ಸಿಟ್ಟುತರಿಸಿತ್ತು. ಅದೇ ವಿಚಾರಕ್ಕೆ ಶನಿವಾರ ಮಧ್ಯಾಹ್ನ ಮಕ್ಕಳ ಜತೆಗೆ ಗಲಾಟೆ ನಡೆದು ಕೊಲೆ ಮಾಡಲಾಗಿದೆ ಎಂಬುದು ಪ್ರಾಥಮಿಕ ತನಿಖೆಯಿಂದ ಗೊತ್ತಾಗಿದೆ. ಆದರೆ, ಎಲ್ಲ ಆಯಾಮದಿಂದಲೂ ತನಿಖೆ ಮುಂದುವರಿದಿದೆ’ ಎಂದು ಪೊಲೀಸರು ಹೇಳಿದರು.

‘ಮನೆಯಲ್ಲಿ ತಾಯಿ ಇರಲಿಲ್ಲ’

‘ಕೊಲೆ ನಡೆದ ವೇಳೆ ತಾಯಿ ಮನೆಯಲ್ಲಿ ಇರಲಿಲ್ಲ. ತಾಯಿ ಗಾರ್ಮೆಂಟ್ಸ್‌ನಲ್ಲಿ ಕೆಲಸಕ್ಕೆ ತೆರಳಿದ್ದರು. ಅದೇ ವೇಳೆ ಕೊಲೆ ನಡೆದಿದೆ’ ಎಂದು ಪೊಲೀಸರು ಹೇಳಿದರು.

‘ಮಕ್ಕಳ ತಾಯಿ ಅವರು ದೂರು ನೀಡಿದ್ದಾರೆ. ದೂರು ಆಧರಿಸಿ ತನಿಖೆ ನಡೆಸಲಾಗುತ್ತಿದೆ. ಮೋಹನ್‌ ಮೊಬೈಲ್‌ ಸ್ವಿಚ್ಡ್‌ ಆಫ್‌ ಬರುತ್ತಿದೆ. ಬಂಧನದ ಬಳಿಕವೇ ಆರೋಪಿ ಯಾರು ಹಾಗೂ ಕೊಲೆಗೆ ನಿಖರ ಕಾರಣ ಏನು ಎಂಬುದು ಗೊತ್ತಾಗಲಿದೆ. ಮನೆ ಅಕ್ಕಪಕ್ಕದಲ್ಲಿ ಅಳವಡಿಸಿರುವ ಸಿ.ಸಿ.ಟಿ.ವಿ ಕ್ಯಾಮೆರಾವನ್ನು ಪರಿಶೀಲಿಸಲಾಗುತ್ತಿದೆ’ ಎಂದು ಈಶಾನ್ಯ ವಿಭಾಗದ ಡಿಸಿಪಿ ಸಜಿತ್‌ ತಿಳಿಸಿದ್ದಾರೆ.

ಜೋಡಿ ಕೊಲೆಯಿಂದ ಕಾವೇರಿ ಬಡಾವಣೆಯ ಜನರು ಬೆಚ್ಚಿ ಬಿದ್ದಿದ್ದಾರೆ. ಸದ್ಯ ಸ್ಥಳಕ್ಕೆ ಅಮೃತಹಳ್ಳಿ ಪೊಲೀಸರು ಶ್ವಾನದಳ ಹಾಗೂ ವಿಧಿ ವಿಜ್ಞಾನ ಪ್ರಯೋಗಾಲಯದ ತಜ್ಞರು ಪರಿಶೀಲನೆ ನಡೆಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.