ಬೆಂಗಳೂರು: ಭಾರತದ ಪುನರುಜ್ಜೀವನ ಎಂದು ಸಮಾಜ ಸುಧಾರಕರ ಇತಿಹಾಸವನ್ನು ಶಾಲೆಗಳಲ್ಲಿ ಕಲಿಸಲಾಗುತ್ತಿದೆ. ಆದರೆ, ನೈಜ ಪುನರುಜ್ಜೀವನವನ್ನು ಮುಚ್ಚಿಡಲಾಗಿದೆ ಎಂದು ಪ್ರಾಧ್ಯಾಪಕ ಶ್ರೀನಿವಾಸ್ ತಿಳಿಸಿದರು.
ದಸಂಸ–50, ಛತ್ರಪತಿ ಶಾಹು ಮಹಾರಾಜರ 150ನೇ ಜನ್ಮದಿನದ ಅಂಗವಾಗಿ ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ (ಆರ್‌ಪಿಐ) ಮತ್ತು ದಲಿತ ಸಂಘರ್ಷ ಸಮಿತಿ (ಭೀಮವಾದ) ಹಮ್ಮಿಕೊಂಡಿದ್ದ ‘ಶೋಷಿತ ಸಮುದಾಯಗಳ ಏಕತಾ ಸಮಾವೇಶ’ದಲ್ಲಿ ಅವರು ಮಾತನಾಡಿದರು.
ರಾಜರಾಮ್ ಮೋಹನ್ ರಾಯ್ ಸ್ಥಾಪಿಸಿದ ಬ್ರಹ್ಮ ಸಮಾಜ, ದಯಾನಂದ ಸರಸ್ವತಿ ಸ್ಥಾಪಿಸಿದ ಆರ್ಯ ಸಮಾಜ, ಆತ್ಮರಾಂ ಪಾಂಡುರಂಗ ಸ್ಥಾಪಿಸಿದ ಪ್ರಾರ್ಥನಾ ಸಮಾಜಗಳ ಬಗ್ಗೆ, ಅವು ಮಾಡಿದ ಸುಧಾರಣೆಗಳ ಬಗ್ಗೆ ಮಾಹಿತಿ ಸಿಗುತ್ತದೆ. ಇವರೆಲ್ಲ ಬ್ರಾಹ್ಮಣ ಸಮಾಜದಲ್ಲಿದ್ದ ಕೆಲವು ಅನಿಷ್ಟಗಳ ವಿರುದ್ಧ ಹೋರಾಟ ಮಾಡಿದವರು. ನಿಜವಾದ ಪುನರುಜ್ಜೀವನವು ಜ್ಯೋತಿ ಬಾ ಫುಲೆ–ಸಾವಿತ್ರಿ ಬಾಯಿ ಫುಲೆ ಮಾಡಿದ ಶಿಕ್ಷಣ ಕ್ರಾಂತಿ, ‘ಸತ್ಯ ಶೋಧಕ ಸಮಾಜ’ ಮಾಡಿದ ಸುಧಾರಣೆಗಳಿಂದ ಆರಂಭವಾಗಿತ್ತು ಎಂದು ತಿಳಿಸಿದರು.
ಜ್ಯೋತಿ ಬಾ–ಸಾವಿತ್ರಿ ಬಾಯಿ ನಿಧನರಾದ ಮೇಲೆ ಸತ್ಯ ಶೋಧಕ ಸಮಾಜ ನಿಂತುಹೋಗಿತ್ತು. ಶಾಹು ಮಹಾರಾಜರು ಆನಂತರ ಅದನ್ನು ಮುಂದುವರಿಸಿದರು. ಶೋಷಿತರಿಗೆ ಶೇ 50ರಷ್ಟು ಮೀಸಲಾತಿ ನೀಡುವ ಮೂಲಕ ಎರಡು ಸಾವಿರ ವರ್ಷಗಳಿಂದ ಪ್ರಾತಿನಿಧ್ಯ ಇಲ್ಲದ ಸಮುದಾಯಗಳಿಗೆ ಪ್ರಾತಿನಿಧ್ಯ ನೀಡಿದರು. ಬಾಲಗಂಗಾಧರನಾಥ ತಿಲಕ್ ಸಹಿತ ಅನೇಕರ ವಿರೋಧದ ಮಧ್ಯೆಯೂ ಶಾಹು ಮಹಾರಾಜರು ಮೀಸಲಾತಿ ನಿರ್ಧಾರದಿಂದ ಹಿಂದಕ್ಕೆ ಸರಿಯಲಿಲ್ಲ ಎಂದು ವಿವರಿಸಿದರು.
ಆರ್‌ಪಿಐ, ಡಿಎಸ್‌ಎಸ್ (ಭೀಮವಾದ) ರಾಜ್ಯಾಧ್ಯಕ್ಷ ಆರ್. ಮೋಹನರಾಜು ಮಾತನಾಡಿ, ‘ಅಂಬೇಡ್ಕರ್ ಎಂಬ ಪ್ರತಿಭೆಯನ್ನು ಗುರುತಿಸಿ ಬೆಳೆಸಿದ್ದರಿಂದ ಸಮಾನತೆಯ ಆಧಾರದಲ್ಲಿ ಸಂವಿಧಾನವನ್ನು ರಚಿಸಲು, ಶೋಷಿತರ ಧ್ವನಿಯಾಗಲು ಸಾಧ್ಯವಾಯಿತು. ಅಂಬೇಡ್ಕರ್ ಅವರ ಚಿಂತನೆಯ ಹಿಂದೆ ಸಮ ಸಮಾಜಕ್ಕಾಗಿ ಶ್ರಮಿಸಿದ ಬುದ್ಧ, ಬಾ ಫುಲೆ, ಶಾಹು ಮಹಾರಾಜರಂಥ ಅನೇಕರ ಹೋರಾಟಗಳು ಇವೆ’ ಎಂದು ಹೇಳಿದರು.
ಸಮಿತಿಯ ರಾಜ್ಯ ಘಟಕದ ಉಪಾಧ್ಯಕ್ಷ ರಾಜು ಎಂ. ತಳವಾರ್ ಅಧ್ಯಕ್ಷತೆ ವಹಿಸಿದ್ದರು. ರಾಜ್ಯ ಘಟಕದ ಉಪಾಧ್ಯಕ್ಷ ಶೇಖರ್ ಹಾವಂಜೆ, ಸಂಘಟನಾ ಕಾರ್ಯದರ್ಶಿಗಳಾದ ಕೆ.ಎಂ. ಶ್ರೀನಿವಾಸ್, ಹನುಮಂತ ದೊಡ್ಡಮನಿ, ಕೆ.ಬಿ. ರಾಜು ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.