ಆರ್‌ಸಿಬಿ ಸಂಭ್ರಮಾಚರಣೆ ಹಾಗೂ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸಂಭವಿಸಿದ ಕಾಲ್ತುಳಿತ ದುರಂತದ ಚಿತ್ರಗಳು
ಕೃಪೆ: ಪಿಟಿಐ
ಬೆಂಗಳೂರು: ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಸಂಭವಿಸಿದ ಕಾಲ್ತುಳಿತ ಘಟನೆಯ ಬಳಿಕ ಎಚ್ಚೆತ್ತುಕೊಂಡಿರುವ ಪೊಲೀಸ್ ಇಲಾಖೆ, ಸಾರ್ವಜನಿಕ ಸಮಾರಂಭಗಳಲ್ಲಿ ಜನಸಂದಣಿ ನಿಯಂತ್ರಣಕ್ಕಾಗಿ ಹೊಸ ಪ್ರಮಾಣೀಕೃತ ಕಾರ್ಯಾಚರಣೆ ವಿಧಾನ (ಎಸ್‌ಒಪಿ) ರೂಪಿಸಿದೆ.
ಬೃಹತ್ ಕಾರ್ಯಕ್ರಮಗಳು, ಸಭೆ ಹಾಗೂ ವಿಜಯೋತ್ಸವಗಳಲ್ಲಿ ಅಹಿತಕರ ಘಟನೆಗಳನ್ನು ತಡೆಯುವ ಉದ್ದೇಶದಿಂದ ಹೊಸ ಎಸ್‌ಒಪಿ ರೂಪಿಸಲಾಗುವುದು ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ ಇತ್ತೀಚೆಗೆ ತಿಳಿಸಿದ್ದರು. ಹೊಸ ಎಸ್‌ಒಪಿ ಅನ್ನು ಪರಿಣಾಮಕಾರಿಯಾಗಿ ಅನುಷ್ಠಾನಕ್ಕೆ ತರಲು ಸಂಬಂಧಿಸಿದ ಅಧಿಕಾರಿಗಳಿಗೆ ರಾಜ್ಯ ಡಿಜಿ-ಐಜಿಪಿ ಡಾ. ಎಂ.ಎ.ಸಲೀಂ ಸೂಚಿಸಿದ್ದಾರೆ.
ಈ ಬಗ್ಗೆ ಸುತ್ತೋಲೆ ಹೊರಡಿಸಿದ್ದು, ಜನಸಂದಣಿ ನಿರ್ವಹಣೆಗಾಗಿ ಅನುಸರಿಸಬೇಕಾದ ಮಾರ್ಗಸೂಚಿಗಳನ್ನು ಎಸ್‌ಒಪಿಯಲ್ಲಿ ತಿಳಿಸಲಾಗಿದೆ.
ಹಬ್ಬಗಳು, ರ‍್ಯಾಲಿಗಳು, ಕ್ರೀಡೆಗಳು, ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಜನಸಂದಣಿ ನಿರ್ವಹಣೆಗೆ ಸೂಕ್ತ ಕಾರ್ಯತಂತ್ರದ ಅಗತ್ಯವಿದೆ. ಸಾರ್ವಜನಿಕ ಸುರಕ್ಷತೆಗಾಗಿ, ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಲು, ಜನಸಂದಣಿಯನ್ನು ಪರಿಣಾಮಕಾರಿಯಾಗಿ ನಿರ್ವಹಿಸುವುದು, ಅಪಾಯಗಳನ್ನು ಕಡಿಮೆ ಮಾಡುವುದು, ಸಮನ್ವಯವನ್ನು ಹೆಚ್ಚಿಸುವುದು ಮತ್ತು ತುರ್ತು ಪರಿಸ್ಥಿತಿಗಳಿಗೆ ತ್ವರಿತ ಪ್ರತಿಕ್ರಿಯೆಯನ್ನು ಖಚಿತಪಡಿಸಿಕೊಳ್ಳುವುದು ಇದರ ಉದ್ದೇಶವಾಗಿದೆ.
ಜನಸಂದಣಿ ನಿರ್ವಹಣೆಗೆ ಪೂರ್ವ ಸಿದ್ಧತೆ, ಆಯೋಜಕರ ಜತೆ ಸಮನ್ವಯ ಹಾಗೂ ಪೊಲೀಸ್ ಬಂದೋಬಸ್ತ್‌ಗೆ ಅಗತ್ಯ ಕ್ರಮ ವಹಿಸಬೇಕು.
ಜನಸಮೂಹದ ವರ್ತನೆ ಪರಿಶೀಲಿಸುವುದು, ನಿರ್ಗಮನ ದ್ವಾರಗಳನ್ನು ಗುರುತಿಸುವ ಮೂಲಕ ಲಭ್ಯವಿರುವ ಪರಿಕರಗಳನ್ನು ಬಳಸಿಕೊಂಡು ಸಂಭಾವ್ಯ ಅವಘಡ ತಡೆಯವುದು.
ಸ್ಥಳ ಸಾಮರ್ಥ್ಯದ ಮಿತಿಗಳು, ಪ್ರವೇಶ/ನಿರ್ಗಮನ ಮಾರ್ಗಗಳು, ತುರ್ತು ಸ್ಥಳಾಂತರಿಸುವ ಯೋಜನೆಗಳು ಮತ್ತು ಸಂವಹನ ಮೂಲಸೌಕರ್ಯ ಸೇರಿ ಸುರಕ್ಷತಾ ಮಾನದಂಡ ಖಚಿತಪಡಿಸಿಕೊಳ್ಳಬೇಕು.
ಸುರಕ್ಷತಾ ಪರಿಶೀಲನೆಯಲ್ಲಿ ಸೂಕ್ತವಲ್ಲದ ಸ್ಥಳಗಳಲ್ಲಿ ಬೃಹತ್ ಕಾರ್ಯಕ್ರಮಗಳಿಗೆ ಅನುಮತಿ ನಿರಾಕರಿಸಬೇಕು.
ಕಾರ್ಯಕ್ರಮಗಳಿಗೆ ಅಗತ್ಯ ವ್ಯವಸ್ಥೆ ಮಾಡಲಾಗಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಬೇಕು. ಆಂಬುಲೆನ್ಸ್, ವಾಹನ ನಿಲುಗಡೆ ಪ್ರದೇಶ ಮತ್ತು ನಿಯಂತ್ರಣ ಕೊಠಡಿ ಮತ್ತಿತರ ವ್ಯವಸ್ಥೆ ಮಾಡಲು ಸೂಚಿಸುವುದು.
ಬೆಂಕಿ, ಕಾಲ್ತುಳಿತ ಇನ್ನಿತರ ಅವಘಡಗಳ ನಿಯಂತ್ರಣಕ್ಕೆ ತುರ್ತು ಸಿದ್ಧತೆ ಮಾಡಿಕೊಳ್ಳುವುದು. ಇದಕ್ಕಾಗಿ ತರಬೇತಿ ಮತ್ತು ಅಣುಕು ಪ್ರದರ್ಶನ ಕೈಗೊಳ್ಳುವುದು.
ಜನಸಂದಣಿ ನಿಯಂತ್ರಿಸಲು ಅಥವಾ ಚದುರಿಸಲು ಎಚ್ಚರಿಕೆ ನೀಡಿದ ನಂತರವೇ ಪೊಲೀಸ್ ಸಿಬ್ಬಂದಿ ಬಳಸಬೇಕು ಮತ್ತು ಅನಗತ್ಯವಾಗಿ ಬಂಧನಕ್ಕೆ ಮುಂದಾಗಬಾರದು.
ಭವಿಷ್ಯದ ಸುಧಾರಣೆಗಾಗಿ, ಜನಸಂದಣಿಯ ಸಂಚಾರ, ತೆಗೆದುಕೊಂಡ ನಿರ್ಧಾರಗಳು ಮತ್ತು ನೀಡಿದ ಎಚ್ಚರಿಕೆಗಳನ್ನು ಆಡಿಯೊ/ವಿಡಿಯೊ ದಾಖಲೆಗಳ ಮೂಲಕ ದಾಖಲಿಸಬೇಕು.
ಕಾಲ್ತುಳಿತ ಘಟನೆ ಬಳಿಕ ಪೊಲೀಸ್ ತರಬೇತಿ ಕೈಪಿಡಿಯನ್ನು ಪರಿಷ್ಕರಿಸಲಾಗಿದ್ದು, ತರಬೇತಿ ಅವಧಿಯಲ್ಲಿಯೇ ಜನಸಂದಣಿ ನಿರ್ವಹಣೆ ಮತ್ತು ಕಾರ್ಡಿಯೊ ಪಲ್ಮನರಿ ರಿಸಸಿಟೇಶನ್ (ಸಿಪಿಆರ್) ಕುರಿತು ತರಬೇತಿ ನೀಡಲಾಗುತ್ತದೆ.
‘ಜನಸಂದಣಿ ನಿಯಂತ್ರಣ ಮಾಡುವುದು ಹೇಗೆ ಎಂಬುದು ಒಂದು ವರ್ಷದಿಂದ ಪಠ್ಯಕ್ರಮದ ಭಾಗವಾಗಿತ್ತು. ಆದರೆ, ಚಿನ್ನಸ್ವಾಮಿ ಕ್ರೀಡಾಂಗಣದ ಕಾಲ್ತುಳಿತದ ನಂತರ, ಅದನ್ನು ಪರಿಷ್ಕರಿಸಲಾಗಿದೆ. ಸಿಪಿಆರ್ ವಿಧಾನ ಕುರಿತು ಪೊಲೀಸರಿಗೆ ತರಬೇತಿ ನೀಡಲಾಗುತ್ತಿದೆ. ಪ್ರಥಮ ಚಿಕಿತ್ಸೆ ತರಬೇತಿ ಪಡೆದಿದ್ದರೆ, ತುರ್ತು ಸಂದರ್ಭದಲ್ಲಿ ವ್ಯಕ್ತಿಯ ಜೀವ ಉಳಿಸಲು ಸಾಧ್ಯ’ ಎಂದು ಪೊಲೀಸ್ ತರಬೇತಿ ವಿಭಾಗದ ಹೆಚ್ಚುವರಿ ಪೊಲೀಸ್ ಮಹಾ ನಿರ್ದೇಶಕ ಅಲೋಕ್ ಕುಮಾರ್ ತಿಳಿಸಿದರು.
‘ನಿತ್ಯ ವಿವಿಧ ಘಟನೆಗಳನ್ನು ಪೊಲೀಸರು ನೋಡುತ್ತಾರೆ. ಕಾಲ್ತುಳಿತ, ಬಾಂಬ್ ಸ್ಫೋಟ, ರಸ್ತೆ ಅಪಘಾತ ಸಂಭವಿಸಿದಾಗ ಸ್ಥಳಕ್ಕೆ ಮೊದಲು ತಲುಪುವುದು ಪೊಲೀಸ್ ಸಿಬ್ಬಂದಿ. ಅಂತಹ ಸಂದರ್ಭದಲ್ಲಿ ವೈದ್ಯಕೀಯ ತಂಡಕ್ಕಾಗಿ ಕಾಯುವ ಬದಲು ಸಿಆರ್‌ಪಿ ವಿಧಾನ ಮೂಲಕ ವ್ಯಕ್ತಿಯ ಜೀವ ಉಳಿಸಬಹುದು. ಸಿಆರ್‌ಪಿ ವಿಧಾನ ಹಾಗೂ ಪ್ರಥಮ ಚಿಕಿತ್ಸೆಯ ಜ್ಞಾನ ಹೊಂದಿರುವುದು ಅಗತ್ಯ. ಹಠಾತ್ ಹೃದಯಾಘಾತ ಸಂದರ್ಭದಲ್ಲಿ ವ್ಯಕ್ತಿಯನ್ನು ಪ್ರಾಣಾಪಾಯದಿಂದ ಪಾರು ಮಾಡಲು ಸಿಪಿಆರ್ ವಿಧಾನ ಸಹಾಯಕ’ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.