ADVERTISEMENT

ಕೋವಿಡ್ ಲಸಿಕೆ ಪಡೆದಿದ್ದ ಶೇ 92ರಷ್ಟು ಸೋಂಕಿತರು ಬೇಗ ಚೇತರಿಕೆ: ಅಧ್ಯಯನ

​ಪ್ರಜಾವಾಣಿ ವಾರ್ತೆ
Published 17 ಜೂನ್ 2021, 17:02 IST
Last Updated 17 ಜೂನ್ 2021, 17:02 IST
   

ಬೆಂಗಳೂರು: ಕೊರೊನಾ ಸೋಂಕಿನ ತೀವ್ರತೆ ತಡೆಯಲು ಸದ್ಯ ಬಳಕೆಯಲ್ಲಿರುವ ಕೋವಿಡ್ ಲಸಿಕೆಗಳು ಸಹಕಾರಿ ಎಂಬುದು ಫೋರ್ಟಿಸ್ ಹೆಲ್ತ್‌ಕೇರ್ ನಡೆಸಿದ ಅಧ್ಯಯನದಿಂದ ದೃಢಪಟ್ಟಿದೆ.

ಈ ಬಗ್ಗೆ ಸಂಸ್ಥೆಯು ಅಧ್ಯಯನ ವರದಿ ಬಿಡುಗಡೆ ಮಾಡಿದೆ. ಜನವರಿಯಿಂದ ಮೇ ತಿಂಗಳವರೆಗೆ ಕೊರೊನಾ ಸೋಂಕಿತರಾದ 1,600 ಆರೋಗ್ಯ ಕಾರ್ಯಕರ್ತರನ್ನು ಅಧ್ಯಯನಕ್ಕೆ ಒಳಪಡಿಸಲಾಗಿತ್ತು. ಅವರು ಎರಡು ಡೋಸ್ ಲಸಿಕೆ ಪಡೆದುಕೊಂಡವರು. ಶೇ 92 ರಷ್ಟು ಮಂದಿಗೆ ಸೋಂಕಿನ ಲಕ್ಷಣಗಳು ಅಷ್ಟಾಗಿ ಗೋಚರಿಸಲಿಲ್ಲ. ಹೀಗಾಗಿ, ವಿಶೇಷ ಚಿಕಿತ್ಸೆಯೂ ಬೇಕಾಗಲಿಲ್ಲ. ಶೇ 1ರಷ್ಟು ಮಂದಿ ಮಾತ್ರ ತೀವ್ರ ನಿಗಾ ಘಟಕಕ್ಕೆ ದಾಖಲಾಗಿದ್ದರು.

‘ಲಸಿಕೆ ಪಡೆದ ಆರೋಗ್ಯ ಕಾರ್ಯಕರ್ತರಲ್ಲಿ ಬಹುತೇಕರಿಗೆ ಸೋಂಕು ತಗುಲಿದರೂ ಅಷ್ಟಾಗಿ ಲಕ್ಷಣಗಳು ಗೋಚರಿಸಲಿಲ್ಲ. ಎರಡೂ ಡೋಸ್ ಪಡೆದವರಲ್ಲಿ ಶೇ 7ರಷ್ಟು ಮಂದಿ ಮಾತ್ರ ಆಮ್ಲಜನಕದ ಹಾಸಿಗೆ ಅವಲಂಬಿಸಿದ್ದರು. ಹೀಗಾಗಿ, ಕೋವಿಡ್‌ ಜಯಿಸಲು ಲಸಿಕೆ ಸಹಾಯಕಾರಿ’ ಎಂದು ವರದಿಯಲ್ಲಿ ತಿಳಿಸಲಾಗಿದೆ.

ADVERTISEMENT

ಈ ಬಗ್ಗೆ ಪ್ರತಿಕ್ರಿಯಿಸಿರುವ ಸಂಸ್ಥೆಯ ಕಾರ್ಯಾಚರಣೆ ಮುಖ್ಯಸ್ಥ ಡಾ. ಬಿಷ್ಣು ಪಾಣಿಗ್ರಹಿ, ‘ದೇಶದಲ್ಲಿ ಲಭ್ಯವಿರುವ ಕೋವಿಡ್ ಲಸಿಕೆಗಳು ಹೆಚ್ಚು ಪರಿಣಾಮಕಾರಿಯಾಗಿವೆ ಎಂಬುದು ಈ ಅಧ್ಯಯನದ ಮೂಲಕ ತಿಳಿದು ಬಂದಿದೆ. ಹೀಗಾಗಿ, ಲಸಿಕೆ ಉತ್ಪಾದನೆಯನ್ನು ಹೆಚ್ಚು ಮಾಡಿ, ಆದಷ್ಟು ಬೇಗ ಎಲ್ಲರಿಗೂ ನೀಡಬೇಕು. ಆಗ ಸೋಂಕಿನಿಂದಾಗುವ ಅಪಾಯದಿಂದ ತಪ್ಪಿಸಿಕೊಳ್ಳಬಹುದು’ ಎಂದು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.