ಬೆಂಗಳೂರು: ಬುಕರ್ ಪ್ರಶಸ್ತಿಯು ಬಾನು ಮುಷ್ತಾಕ್ ಕಥೆಗಳ ಮೂಲಕ ತೆರೆದಿಟ್ಟ ಹೆಣ್ಣುಮಕ್ಕಳ ಬದುಕನ್ನು ಬದಲಾಯಿಸುವುದು ಹೇಗೆ? ಮಕ್ಕಳ ಹಕ್ಕುಗಳನ್ನು ರಕ್ಷಣೆ ಮಾಡುವುದು ಹೇಗೆ ಎಂಬ ಚಿಂತನೆಗೆ ಕಾರಣವಾಗಬೇಕು. ಇಲ್ಲದೇ ಇದ್ದರೆ ಬುಕರ್ ಪ್ರಶಸ್ತಿಗೆ ಬುರ್ಖಾ ಹಾಕುವ ಪರಿಸ್ಥಿತಿ ಬರಲಿದೆ ಎಂದು ಮೈಸೂರು ವಿಶ್ವವಿದ್ಯಾಲಯದ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ನಿರ್ದೇಶಕಿ ಎನ್.ಕೆ. ಲೋಲಾಕ್ಷಿ ತಿಳಿಸಿದರು.
ರಾಜ್ಯ ಬಂಡಾಯ ಸಾಹಿತ್ಯ ಸಂಘಟನೆಯು ಸರ್ಕಾರಿ ಕಲಾ ಕಾಲೇಜಿನ ಕನ್ನಡ ಸ್ನಾತಕೋತ್ತರ ಅಧ್ಯಯನ ಮತ್ತು ಸಂಶೋಧನಾ ಕೇಂದ್ರದ ಸಹಯೋಗದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಬಾನು ಮುಷ್ತಾಕ್ ಅವರಿಗೆ ವಿಚಾರ ಗೋಷ್ಠಿಯ ಗೌರವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಬುಕರ್ ಪ್ರಶಸ್ತಿ ಬಂದಿರುವುದು ಹೆಮ್ಮೆಯ ವಿಚಾರ. ಅದನ್ನು ಸಂಭ್ರಮಿಸಲೇಬೇಕು. ಈ ಸಂಭ್ರಮ ಮುಗಿದ ಬಳಿಕವಾದರೂ ಚಿಂತನೆಗೆ ದಾರಿಯಾಗಬೇಕು ಎಂದು ಆಶಿಸಿದರು.
ಬಾನು ಅವರ ಕಥೆಗಳನ್ನು ಓದುತ್ತಾ ಹೋಗುತ್ತಿದ್ದಂತೆ ಸಂಕಟವನ್ನು ಉಂಟು ಮಾಡುವ ಪಾತ್ರಗಳೇ ಬರುತ್ತವೆ. ಹೊರಗಿನ ಕಾನೂನು ಒಂದಾದರೆ ಒಳಗಿನ ಕಾನೂನೇ ಬೇರೆ. ಒಂದು, ಎರಡು, ಮೂರು ಎಂದು ಹೇಳುವ ಹೊತ್ತಿಗೆ ಆಗುವ ವಿಚ್ಛೇದನ, ಮೂರು ಹೆಣ್ಣುಮಕ್ಕಳಿದ್ದರೂ ಆಟೊ ಓಡಿಸಲು ಗಂಡು ಮಗು ಬೇಕು ಎಂದು ಮುಂದಾಗುವ ಗಂಡಿನ ಒಳಗಿನ ಸಂಕಟಗಳನ್ನು ಕಥೆಗಳ ಮೂಲಕ ಬಾನು ತೆರೆದಿಡುತ್ತಾ ಹೋಗುತ್ತಾರೆ. ಹಸೀನಾ ಎಂದು ಸಿನಿಮಾ ಆಗಿರುವ ‘ಕರಿನಾಗರ’ ಕಥೆಯೇ ಅವರ ಊರಿನ ಮುಸ್ಲಿಮ್ ಸಮುದಾಯದವರು ಬಹಿಷ್ಕಾರ ಹಾಕುವಂತೆ ಮಾಡಿತ್ತು. ಎಂದು ಹೇಳಿದರು.
ತಲಾಖ್‌ಗೆ ಹೆದರಿ ಬದುಕುವ ಮಹಿಳೆಯ ಪಾತ್ರವನ್ನೂ, ಬೀದಿಯಲ್ಲಿ ನಿಂತುಕೊಂಡು ತಲಾಖ್ ಎಂದು ಕೇಳುವ ಮಹಿಳೆಯ ಪಾತ್ರವನ್ನೂ ಒಟ್ಟೊಟ್ಟಿಗೆ ಬಾನು ಸೃಷ್ಟಿಸಿದ್ದಾರೆ. ಕಥೆಗಳಲ್ಲಿ ಮಕ್ಕಳಂತೂ ಯದ್ವಾತದ್ವಾ ಇದ್ದಾರೆ. ತಂದೆ ಇನ್ನೊಂದು ಮದುವೆಯಾಗಲು ಅಡ್ಡಿಯಾಗದ ಮಕ್ಕಳು ತಾಯಿಗೆ ಸುತ್ತಿಕೊಳ್ಳುತ್ತವೆ. ಈ ಎಲ್ಲ ಪರಿಸ್ಥಿತಿಯನ್ನು ಬದಲಾಯಿಸಲು, ಒಳಕಾನೂನನ್ನು ತೊಡೆದುಹಾಕಲು ಸಾಧ್ಯವಾಗದೇ ಹೋದರೆ ಬುಕರ್ ಪ್ರಶಸ್ತಿ ವ್ಯರ್ಥ ಎಂದು ಅಭಿಪ್ರಾಯಪಟ್ಟರು.
ಸಾಹಿತಿ ಬರಗೂರು ರಾಮಚಂದ್ರಪ್ಪ ಮಾತನಾಡಿ, ‘ಬುಕರ್ ಪ್ರಶಸ್ತಿ ಮೂಲಕ ಬಾನು ಮುಷ್ತಾಕ್ ಮತ್ತು ದೀಪಾ ಭಾಸ್ತಿ ಕನ್ನಡಕ್ಕೆ, ಕರ್ನಾಟಕಕ್ಕೆ ಮಾತ್ರವಲ್ಲ, ಭಾರತಕ್ಕೇ ಗೌರವ ತಂದಿದ್ದಾರೆ. ಬಂಡಾಯ ಚಳವಳಿಯಲ್ಲಿ ತೊಡಗಿಸಿಕೊಂಡು ಚಳವಳಿಯನ್ನೂ ಬೆಳೆಸಿ, ತಾನೂ ಬೆಳೆದ ಬಾನು ಅವರು ಬಂಡಾಯ ಸಾಹಿತ್ಯಕ್ಕೂ ಹೆಮ್ಮೆ ತಂದಿದ್ದಾರೆ’ ಎಂದು ಶ್ಲಾಘಿಸಿದರು.
‘ಜಡ ಸಂಪ್ರದಾಯವಾದಿಗಳು ಹಾಸನದಲ್ಲಿ ಬಾನು ಮುಷ್ತಾಕ್ ಕುಟುಂಬಕ್ಕೆ ಬಹಿಷ್ಕಾರ ಹಾಕಿದ್ದಾಗ ನಾನು ಹೋಗಿ ಸಂಧಾನ ಮಾಡಿದ್ದೆ. ಅಲ್ಲೇ ಫತ್ವಾ ಹೊರಡಿಸಿದ್ದವರು, ಅಲ್ಲೇ ಫತ್ವಾ ವಾಪಸ್ ತೆಗೆದುಕೊಂಡಿದ್ದರು’ ಎಂದು ನೆನಪು ಮಾಡಿಕೊಂಡರು.
‘ಚಳವಳಿಗಳ ಸಂಗಾತಿಯಾಗಿ ಬಾನು ಮುಷ್ತಾಕ್’ ಬಗ್ಗೆ ಲೇಖಕ ಆರ್.ಜಿ.ಹಳ್ಳಿ ನಾಗರಾಜ್ ಮಾತನಾಡಿದರು. ಲೇಖಕಿ ಕೆ. ಷರೀಫಾ ಅಧ್ಯಕ್ಷತೆ ವಹಿಸಿದ್ದರು. ಸರ್ಕಾರಿ ಕಲಾ ಕಾಲೇಜು ಪ್ರಾಂಶುಪಾಲ ಶ್ರೀನಿವಾಸ ನಾಯಕ್, ಕನ್ನಡ ಸ್ನಾತಕೋತ್ತರ ಅಧ್ಯಯನ ಮತ್ತು ಸಂಶೋಧನಾ ಕೇಂದ್ರದ ಸಂಚಾಲಕ ಬಿ.ಸಿ. ನಾಗೇಂದ್ರ ಕುಮಾರ್ ಭಾಗವಹಿಸಿದ್ದರು.
ಬುಕರ್ ಪ್ರಶಸ್ತಿ ಭರವಸೆಯ ರೂಪಕ: ಬಿಳಿಮಲೆ
‘ಈ ದೇಶದ ಸಂಸ್ಕೃತಿಯಿಂದಲೇ ಮುಸಲ್ಮಾನರನ್ನು ಅಳಿಸಿಹಾಕುವ ಮಾತುಗಳು ಗಟ್ಟಿಯಾಗಿ ಕೇಳಿಬರುತ್ತಿರುವ ಸಂದರ್ಭದಲ್ಲಿ ಬಾನು ಮುಷ್ತಾಕ್ ಅವರಿಗೆ ಬುಕರ್ ಪ್ರಶಸ್ತಿ ಸಂದಿರುವುದು ಭರವಸೆಯ ರೂಪಕ’ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪುರುಷೋತ್ತಮ ಬಿಳಿಮಲೆ ಅಭಿಪ್ರಾಯಪಟ್ಟರು. ಬುಕರ್ ಪ್ರಶಸ್ತಿ ಪುರಸ್ಕೃತರಾದ ಬಾನು ಮುಷ್ತಾಕ್ ಹಾಗೂ ದೀಪಾ ಭಾಸ್ತಿ ಅವರನ್ನು ಸೋಮವಾರ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ವತಿಯಿಂದ ಅಭಿನಂದಿಸಿ ಅವರು ಮಾತನಾಡಿದರು. ‘ಬಾನು ಮುಷ್ತಾಕ್ ತಮ್ಮನ್ನು ಜಾತ್ರೆಯಲ್ಲಿ ನಿಂತ ಏಕಾಂಗಿ ಎಂದು ಕರೆದುಕೊಳ್ಳುತ್ತಾರೆ. ಮುಸಲ್ಮಾನ ಮಹಿಳೆಯಲ್ಲಿ ಹುಟ್ಟಿದ ಈ ರೀತಿಯ ಏಕಾಂಗಿತನವೇ ಅವರನ್ನು ಜಗತ್ತಿನ ಮುಖ್ಯ ಲೇಖಕಿಯಾಗಿ ರೂಪಿಸಿದೆ. ಹಾರ್ಟ್ ಲ್ಯಾಂಪ್ ಕೃತಿಯನ್ನು ಕೇವಲ ಶೈಕ್ಷಣಿಕ ಚೌಕಟ್ಟಿನಲ್ಲಿ ನೋಡಬೇಕಿಲ್ಲ.ಕೃತಿಯ ಮಾನವೀಯ ಮತ್ತು ಸಾಮಾಜಿಕ ನಿಲುವುಗಳು ಸಾರ್ವಕಾಲಿಕ ಮತ್ತು ಸಾರ್ವತ್ರಿಕವಾಗಿವೆ’ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.