ADVERTISEMENT

‘ಭ್ರಷ್ಟ ರಾಜಕಾರಣಿಗಳು ತೊಲಗಿದರಷ್ಟೇ ಸ್ವಾತಂತ್ರ್ಯ’: ಆಪ್

​ಪ್ರಜಾವಾಣಿ ವಾರ್ತೆ
Published 16 ಆಗಸ್ಟ್ 2021, 1:11 IST
Last Updated 16 ಆಗಸ್ಟ್ 2021, 1:11 IST
ಪೃಥ್ವಿ ರೆಡ್ಡಿ
ಪೃಥ್ವಿ ರೆಡ್ಡಿ   

ಬೆಂಗಳೂರು: ‘ಭ್ರಷ್ಟ ರಾಜಕಾರಣಿಗಳು ತೊಲಗಬೇಕು. ಭ್ರಷ್ಟ ವ್ಯವಸ್ಥೆ ದೂರವಾಗಬೇಕು. ಆಗ ನಿಜವಾದ ಸ್ವಾತಂತ್ರ್ಯ ದೊರೆತಂತಾಗುತ್ತದೆ’ ಎಂದು ಆಮ್‌ ಆದ್ಮಿ ಪಕ್ಷದ ರಾಜ್ಯ ಸಂಚಾಲಕ ಪೃಥ್ವಿ ರೆಡ್ಡಿ ತಿಳಿಸಿದರು.

ಕೆ.ಆರ್‌.ಪುರ ವಿಧಾನಸಭಾ ಕ್ಷೇತ್ರ, ಬೆಳ್ಳಂದೂರು ವಾರ್ಡ್‌ ಹಾಗೂ ತಾವರೆಕೆರೆ ವ್ಯಾಪ್ತಿಯಲ್ಲಿ ನೂತನವಾಗಿ ಆರಂಭಿಸಲಾಗಿರುವ ಪಕ್ಷದ ಕಚೇರಿಗಳನ್ನು ಭಾನುವಾರ ಉದ್ಘಾಟಿಸಿ ಮಾತನಾಡಿದರು.

‘ದೇಶದ ಪ್ರತಿಯೊಂದು ಮಗುವಿಗೂ ಗುಣಮಟ್ಟದ ಶಿಕ್ಷಣ ಸಿಗಬೇಕು. ಪ್ರತಿಯೊಬ್ಬ ನಾಗರಿಕನಿಗೂ ಉತ್ತಮ ಆರೋಗ್ಯ ಸೇವೆ ಲಭ್ಯವಾಗಬೇಕು. ಎಲ್ಲರೂ ಗೌರವಯುತ ಬದುಕು ಸಾಗಿಸುವಂತಾದಾಗ ಮಾತ್ರ ಸ್ವಾತಂತ್ರ್ಯ ಸಿಕ್ಕಿದ್ದು ಸಾರ್ಥಕವಾಗುತ್ತದೆ’ ಎಂದರು.

ADVERTISEMENT

ಪಕ್ಷದ ಹಿರಿಯ ಮುಖಂಡ ಎಚ್‌.ಡಿ.ಬಸವರಾಜು ‘ದೇಶದಲ್ಲಿ 3 ರಿಂದ 22 ವರ್ಷ ವಯಸ್ಸಿನವರು 50 ಕೋಟಿ ಜನರಿದ್ದಾರೆ. ಅವರಲ್ಲಿ ಶೇ 30 ಮಕ್ಕಳು ಶಿಕ್ಷಣದಿಂದ ವಿಮುಖರಾಗಿದ್ದಾರೆ. ಕೇಂದ್ರ ಶಿಕ್ಷಣ ಸಚಿವರೇ ಇದನ್ನು ಒಪ್ಪಿಕೊಂಡಿದ್ದಾರೆ. ಮಕ್ಕಳನ್ನು ಶಿಕ್ಷಣದತ್ತ ಆಕರ್ಷಿಸಲು ಸರ್ಕಾರ ಯೋಜನೆ ರೂಪಿಸಬೇಕಾದ ಅಗತ್ಯವಿದೆ. ಶಿಕ್ಷಣವಿಲ್ಲದಿದ್ದರೆ ಸ್ವಾತಂತ್ರ್ಯದ ಸದುಪಯೋಗ ಸಾಧ್ಯವಿಲ್ಲ’ ಎಂದು ಹೇಳಿದರು.

ಬೆಂಗಳೂರು ನಗರ ಅಧ್ಯಕ್ಷ ಮೋಹನ್‌ ದಾಸರಿ ‘ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ಅವರ ಆಡಳಿತ ವೈಖರಿ, ಪಕ್ಷದ ಜನಪರ ಸಿದ್ಧಾಂತ ಹಾಗೂ ಕಾರ್ಯಕರ್ತರ ಶ್ರಮದಿಂದಾಗಿ ರಾಜ್ಯದಲ್ಲಿ ಪಕ್ಷ ಬೆಳೆಯುತ್ತಿದೆ. ನೂತನ ಕಚೇರಿಗಳು ಪಕ್ಷ ಹಾಗೂ ಕಾರ್ಯಕರ್ತರ ನಡುವಣ ಸೇತುವೆಯಂತೆ ಕಾರ್ಯನಿರ್ವಹಿಸಬೇಕು’ ಎಂದು ತಿಳಿಸಿದರು.

ಪಕ್ಷದ ರಾಜ್ಯ ಮಾಧ್ಯಮ ಸಂಚಾಲಕ ಜಗದೀಶ್‌ ವಿ. ಸದಂ, ರಾಜ್ಯ ಸಹ ಸಂಚಾಲಕಿ ಶಾಂತಲಾ ದಾಮ್ಲೆ, ಕೆ.ಆರ್.ಪುರ ವಿಧಾನಸಭಾ ಕ್ಷೇತ್ರದ ಅಧ್ಯಕ್ಷ ಡಾ. ಕೇಶವ್‌ ಕುಮಾರ್‌, ಯಶವಂತಪುರ ವಿಧಾನಸಭಾ ಕ್ಷೇತ್ರದ ಅಧ್ಯಕ್ಷ ಡಾ. ಸತೀಶ್‌ ಕುಮಾರ್‌, ಉಪಾಧ್ಯಕ್ಷ ಶಶಿಧರ್‌ ಸಿ. ಆರಾಧ್ಯ, ಮಹದೇವಪುರ ವಿಧಾನಸಭಾ ಕ್ಷೇತ್ರದ ಅಧ್ಯಕ್ಷ ಅಶೋಕ್‌ ಮೃತ್ಯುಂಜಯ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.