ADVERTISEMENT

ಟೆಂಡರ್‌ನಲ್ಲಿ ಅವ್ಯವಹಾರ: ಎಎಪಿ ಆರೋಪ

ಕೈಗಾರಿಕಾ ತರಬೇತಿ ಕೇಂದ್ರಗಳಿಗೆ ಟೂಲ್ಸ್‌ ಕಿಟ್‌ ಖರೀದಿ ವಿಚಾರ

​ಪ್ರಜಾವಾಣಿ ವಾರ್ತೆ
Published 11 ಜುಲೈ 2022, 19:40 IST
Last Updated 11 ಜುಲೈ 2022, 19:40 IST

ಬೆಂಗಳೂರು: ‘ರಾಜ್ಯದ ಕೈಗಾರಿಕಾ ತರಬೇತಿ ಕೇಂದ್ರಗಳಿಗೆ ಟೂಲ್ಸ್‌ ಕಿಟ್‌ ಖರೀದಿಸಿ, ವಿತರಿಸುವ ಟೆಂಡರ್‌ನಲ್ಲಿ ಅಕ್ರಮ ನಡೆದಿದ್ದು, ಕೈಗಾರಿಕಾ ತರಬೇತಿ ಮತ್ತು ಉದ್ಯೋಗ ಇಲಾಖೆಯ ಹಿರಿಯ ಅಧಿಕಾರಿಗಳು ಹಾಗೂ ಸಚಿವ ಸಿ.ಎನ್‌.ಅಶ್ವತ್ಥ ನಾರಾಯಣ ಅವರ ನೇರ ಹಸ್ತಕ್ಷೇಪ ಹಾಗೂ ಕೈವಾಡ ಇದೆ’ ಎಂದು ಆಮ್‌ ಅದ್ಮಿ ಪಕ್ಷದ (ಎಎಪಿ) ಬೆಂಗಳೂರು ನಗರ ಅಧ್ಯಕ್ಷ ಮೋಹನ್ ದಾಸರಿ ಆರೋಪಿಸಿದರು.

‘ಕೈಗಾರಿಕಾ ತರಬೇತಿ ಕೇಂದ್ರಗಳಲ್ಲಿ ತರಬೇತಿ ಪಡೆಯುತ್ತಿರುವ ಪರಿಶಿಷ್ಟ ಜಾತಿ, ಪಂಗಡಗಳ 13 ಸಾವಿರ ವಿದ್ಯಾರ್ಥಿಗಳಿಗೆ ₹ 22 ಕೋಟಿ ವೆಚ್ಚದಲ್ಲಿ ಅಗತ್ಯ ಸಲಕರಣೆ ವಿತರಣೆಗೆ ಟೆಂಡರ್‌ ಕರೆಯಲಾಗಿತ್ತು. ಅದರಲ್ಲಿ ಅವ್ಯವಹಾರ ನಡೆದಿದೆ’ ಎಂದು ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ದೂರಿದರು.

ಟೆಂಡರ್‌ನಲ್ಲಿ ಭಾಗವಹಿಸಿದ್ದ ಸಂಸ್ಥೆಯೊಂದು ನಕಲಿ ದಾಖಲೆ ನೀಡಿ ತಾಂತ್ರಿಕ ಅನುಮೋದನೆ ಪಡೆದುಕೊಂಡಿದೆ. ಸಚಿವರ ಒತ್ತಡದಿಂದ ಬೋಗಸ್‌ ಕಂಪನಿಗೆ ಅನುಮತಿ ಕೊಡಲಾಗಿದೆ. ಇದು ಶೇ 40 ಕಮಿಷನ್‌ಗೆ ಸ್ಪಷ್ಟ ಉದಾಹರಣೆ ಅಲ್ಲವೇ ಎಂದು ಹೇಳಿದರು.

ADVERTISEMENT

ಮೊದಲು ಕರೆದ ಟೆಂಡರ್‌ನಲ್ಲಿ ಈ ಕಂಪನಿಗೆ ತಾಂತ್ರಿಕ ಅರ್ಹತೆ ಇಲ್ಲದ ಕಾರಣಕ್ಕೆ ಪ್ರಕ್ರಿಯೆ ರದ್ದುಪಡಿಸಲಾಗಿತ್ತು. ಈಗ ಅದೇ ಸಂಸ್ಥೆಗೆ ಟೆಂಡರ್‌ ನೀಡಿರುವುದು ಸಂಶಯಕ್ಕೆ ದಾರಿ ಮಾಡಿಕೊಟ್ಟಿದೆ ಎಂದು ದೂರಿದರು.

ಇದೇ ಕಂಪನಿ ನಕಲಿ ಜಿಎಸ್‌ಟಿ ಬಿಲ್‌ ಸೃಷ್ಟಿಸಿ ಸಾಮಗ್ರಿ ಪೂರೈಸಿತ್ತು. ಜಿಎಸ್‌ಟಿ ಮಂಡಳಿಯವರೂ ನಕಲಿ ಬಿಲ್‌ ಎಂದು ದೃಢಪಡಿಸಿದ್ದರು. ಆ ಕಂಪನಿಗೆ ಮತ್ತೆ ಟೆಂಡರ್‌ ನೀಡಿರುವ ಉದ್ದೇಶವಾದರೂ ಏನು ಎಂದು ಪ್ರಶ್ನಿಸಿದರು.

ರಾಜ್ಯದ ಪರಿಶಿಷ್ಟ ಜಾತಿ, ಪಂಗಡಗಳ ವಿದ್ಯಾರ್ಥಿಗಳ ಭವಿಷ್ಯ ರೂಪಿಸುವ ಯೋಜನೆಯಲ್ಲೂ ಬಿಜೆಪಿ ಸರ್ಕಾರವು ಭ್ರಷ್ಟಾಚಾರ ಎಸಗುತ್ತಿರುವುದು ದುರದೃಷ್ಟಕರ ಎಂದು ಹೇಳಿದರು.

ಪಕ್ಷದ ಮುಖಂಡ ಡಾ.ವೆಂಕಟೇಶ್‌ ಮಾತನಾಡಿ, ಟೆಂಡರ್ ಪಡೆದ ಕಂಪನಿಯನ್ನು ಕಪ್ಪುಪಟ್ಟಿಗೆ ಸೇರಿಸಿ ಅನುಮೋದನೆ ರದ್ದುಗೊಳಿಸಬೇಕು ಎಂದು ಆಗ್ರಹಿಸಿದರು.

ಪತ್ರಿಕಾಗೋಷ್ಠಿಯಲ್ಲಿ ರಾಜ್ಯ ಮಾಧ್ಯಮ ಸಂಚಾಲಕ ಜಗದೀಶ್ ವಿ. ಸದಂ, ಚನ್ನಪ್ಪಗೌಡ ನೆಲ್ಲೂರು, ಉಷಾ ಮೋಹನ್ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.