ADVERTISEMENT

‘ಅನಾಥ’ ವಾಹನಗಳ ಟೋಯಿಂಗ್‌: ಮಹೇಶ್ವರ್‌ ರಾವ್‌

​ಪ್ರಜಾವಾಣಿ ವಾರ್ತೆ
Published 31 ಜನವರಿ 2026, 14:37 IST
Last Updated 31 ಜನವರಿ 2026, 14:37 IST
ಮಹೇಶ್ವರ್‌ ರಾವ್‌
ಮಹೇಶ್ವರ್‌ ರಾವ್‌   

ಬೆಂಗಳೂರು: ಹಲವು ತಿಂಗಳಿಂದ ರಸ್ತೆ ಬದಿಯಲ್ಲಿರುವ ‘ಅನಾಥ ವಾಹನಗಳನ್ನು’ ಟೋಯಿಂಗ್‌ ಮೂಲಕ ತೆರವುಗೊಳಿಸಬೇಕು ಎಂದು ಜಿಬಿಎ ಮುಖ್ಯ ಆಯುಕ್ತ ಮಹೇಶ್ವರ್‌ ರಾವ್‌ ಸೂಚಿಸಿದರು.

ಉತ್ತರ ನಗರ ಪಾಲಿಕೆ ವ್ಯಾಪ್ತಿಯಲ್ಲಿ ರಸ್ತೆ ಬದಿಯಲ್ಲಿ ನಿಂತಿರುವ ಅನಾಥ ವಾಹನಗಳನ್ನು ತೆರವುಗೊಳಿಸುವ ಸಲುವಾಗಿ ಎರಡು ಟೋಯಿಂಗ್ ವಾಹನಗಳನ್ನು ಈಗಾಗಲೇ ಖರೀದಿಸಲಾಗಿದೆ. ಸಂಚಾರ ಪೊಲೀಸ್ ಅಧಿಕಾರಿಗಳೊಂದಿಗೆ ಸಮನ್ವಯ ಸಾಧಿಸಿ, ಎಲ್ಲಾ ಕಡೆ ಅನಾಥ ವಾಹನಗಳ ತೆರವು ಕಾರ್ಯವನ್ನು ಕೂಡಲೇ ಪ್ರಾರಂಭಿಸಲು ಅಧಿಕಾರಿಗಳಿಗೆ ಆದೇಶಿಸಿದರು.

ವಿವಿಧ ವಿಷಯಗಳಿಗೆ ಸಂಬಂಧಿಸಿದಂತೆ ನಡೆದ ಸಭೆಯಲ್ಲಿ ಶನಿವಾರ ಮಾತನಾಡಿದ ಅವರು, ಈವರೆಗೆ ಎಲ್ಲೆಲ್ಲಿ, ಎಷ್ಟು ಪರಿತ್ಯಾಜ್ಯನಾ ಪತ್ರಗಳನ್ನು (ರಿಲಿಂಕ್ವಿಸ್ಟ್‌ಮೆಂಟ್‌ ಡೀಡ್‌) ನೀಡಲಾಗಿದೆಯೋ, ಅಷ್ಟು ಜಾಗಗಳನ್ನು ಪಾಲಿಕೆಗೆ ವಶಪಡಿಸಿಕೊಳ್ಳದಿರುವ ವಿವರಗಳನ್ನು ಪಟ್ಟಿ ಮಾಡಿಕೊಳ್ಳಬೇಕು. ನಂತರ ಎಲ್ಲಾ ಜಾಗಗಳನ್ನು ಪಾಲಿಕೆ ವಶಕ್ಕೆ ಪಡೆದು ರಸ್ತೆ ವಿಸ್ತರಣೆ ಸೇರಿದಂತೆ ಅಗತ್ಯ ಅಭಿವೃದ್ಧಿ ಕಾರ್ಯಗಳಿಗೆ ಕ್ರಮ ಕೈಗೊಳ್ಳಬೇಕು ಎಂದರು.

ADVERTISEMENT

ಉತ್ತರ ನಗರ ಪಾಲಿಕೆ ವ್ಯಾಪ್ತಿಯಲ್ಲಿ ₹1,242 ಕೋಟಿ ಆಸ್ತಿ ತೆರಿಗೆ ಸಂಗ್ರಹಿಸುವ ಗುರಿಯನ್ನು ನಿಗದಿಪಡಿಸಲಾಗಿದ್ದು, ಇದುವರೆಗೂ ₹640 ಕೋಟಿ ಸಂಗ್ರಹಿಸಲಾಗಿದೆ. ಆಯಾ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಆಸ್ತಿ ತೆರಿಗೆ ಸಂಗ್ರಹದ ಪ್ರಗತಿಯನ್ನು ನಿರಂತರವಾಗಿ ಪರಿಶೀಲಿಸಿ, ಗುರಿ ಸಾಧಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು.

ಯಲಹಂಕ ಮೇಲ್ಸೇತುವೆ ಕಾಮಗಾರಿಯನ್ನು ಸೆಪ್ಟೆಂಬರ್ ಅಂತ್ಯದೊಳಗೆ ಪೂರ್ಣಗೊಳಿಸಬೇಕು. ದೊಡ್ಡಬಳ್ಳಾಪುರ ಮುಖ್ಯರಸ್ತೆಯಲ್ಲಿ ಎರಡು ಕಿ.ಮೀ ಉದ್ದದ ಮೇಲ್ಸೇತುವೆ ಕಾಮಗಾರಿಯು ಶೇ 70 ರಷ್ಟು ಪೂರ್ಣಗೊಂಡಿದ್ದು, ಬಾಕಿ ಕಾಮಗಾರಿಯನ್ನು ಇನ್ನು ಏಳು ತಿಂಗಳಲ್ಲಿ ಮುಗಿಸಬೇಕು  ಎಂದು ಗುತ್ತಿಗೆದಾರರು ಹಾಗೂ ಅಧಿಕಾರಿಗಳಿಗೆ ಮಹೇಶ್ವರ್‌ ರಾವ್‌ ಸೂಚಿಸಿದರು.

ಹೆಣ್ಣೂರು ಬಂಡೆ ಬಳಿ 5 ಎಕರೆ ಬಿಡಿಎ ಜಾಗವನ್ನು ಪರಿಶೀಲಿಸಿ, ಅದನ್ನು ಪಾಲಿಕೆಗೆ ಹಸ್ತಾಂತರ ಮಾಡಿಕೊಂಡು, ಮೈದಾನದ ಸುತ್ತಲೂ ಸಸಿಗಳನ್ನು ನೆಟ್ಟು, ವಾಕಿಂಗ್ ಟ್ರ್ಯಾಕ್ ಮಾಡಿ ಸುಸಜ್ಜಿತ ಆಟದ ಮೈದಾನ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಲು ಸೂಚನೆ ನೀಡಿದರು.

ಉತ್ತರ ನಗರ ಪಾಲಿಕೆ ಆಯುಕ್ತ ಪೊಮ್ಮಲ ಸುನೀಲ್ ಕುಮಾರ್, ಅಭಿವೃದ್ಧಿ ಹೆಚ್ಚುವರಿ ಆಯುಕ್ತೆ ಲತಾ, ಕಂದಾಯ ಹೆಚ್ಚುವರಿ ಆಯುಕ್ತ ಅಮರೇಶ್, ಜಂಟಿ ಆಯುಕ್ತರಾದ ಮೊಹಮ್ಮದ್ ನಯೀಮ್ ಮೊಮಿನ್, ಪಲ್ಲವಿ, ಮುಖ್ಯ ಎಂಜಿನಿಯರ್‌ಗಳಾದ ಯಮುನಾ, ಪ್ರಕಾಶ್  ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.