ADVERTISEMENT

ಸಾಫ್ಟ್‌ವೇರ್‌ ಕಂಪನಿ ವ್ಯವಸ್ಥಾಪಕರ ಪುತ್ರನ ಅಪಹರಣ: ₹ 15 ಲಕ್ಷ ಸುಲಿಗೆ

​ಪ್ರಜಾವಾಣಿ ವಾರ್ತೆ
Published 28 ಸೆಪ್ಟೆಂಬರ್ 2022, 4:29 IST
Last Updated 28 ಸೆಪ್ಟೆಂಬರ್ 2022, 4:29 IST
ನಾಗೇಶ್
ನಾಗೇಶ್   

ಬೆಂಗಳೂರು: ಸಾಫ್ಟ್‌ವೇರ್‌ ಕಂಪನಿ ವ್ಯವಸ್ಥಾಪಕರ 14 ವರ್ಷದ ಪುತ್ರನನ್ನು ಅಪಹರಿಸಿ ₹ 15 ಲಕ್ಷ ಸುಲಿಗೆ ಮಾಡಿದ್ದ ಇಬ್ಬರು ಅಪಹರಣಕಾರರನ್ನು ಸಂಪಿಗೆಹಳ್ಳಿ ಪೊಲೀಸರು ಬಂಧಿಸಿದ್ದಾರೆ.

ಚಿಕ್ಕಬಳ್ಳಾಪುರ ಜಿಲ್ಲೆ ಗುಡಿಬಂಡೆಯ ಸುನಿಲ್‌ಕುಮಾರ್‌ (23) ಹಾಗೂ ಮಂಡಿಕಲ್‌ನ ವೈ.ವಿ.ನಾಗೇಶ ಬಂಧಿತರು.

‘ಸೆ.2ರಂದು ಮಾನ್ಯತಾ ಟೆಕ್‌ಪಾರ್ಕ್‌ನ ಮಾನ್ಯತಾ ರೆಸಿಡೆನ್ಸಿಯಲ್ಲಿ ನೆಲೆಸಿದ್ದ ಎಂ.ಡಿ ಒಬ್ಬರ ಪುತ್ರನನ್ನು ಸಿನಿಮೀಯ ಶೈಲಿಯಲ್ಲಿ ಅಪಹರಣ ಮಾಡಲಾಗಿತ್ತು. ಮನೆಯವರನ್ನು ಬೆದರಿಸಿ, ಎಂ.ಡಿ ಅವರು ಎದುರು ನಿಲುಗಡೆ ಮಾಡಿದ್ದ ಕಾರಿನ ಕೀಯನ್ನೇ ತೆಗೆದುಕೊಂಡು, ಆ ಕಾರಿನಲ್ಲೇ ಬಾಲಕನನ್ನು ಅಪಹರಿಸಿದ್ದರು. ತುಮಕೂರು ರಸ್ತೆಯ ದಾಬಸ್‌ಪೇಟೆಯಿಂದ ಕರೆ ಮಾಡಿ, ₹ 15 ಲಕ್ಷಕ್ಕೆ ಬೇಡಿಕೆಯಿಟ್ಟಿದ್ದರು. ಹಣ ಕೊಡದಿದ್ದರೆ ಮಗನನ್ನು ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದರು’ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

ADVERTISEMENT

ಆರೋಪಿಗಳು ತಾವಿದ್ದ ಸ್ಥಳವಾದ ದಾಬಸ್‌ಪೇಟೆಗೆ ಕರೆಸಿಕೊಂಡು, ₹ 15 ಲಕ್ಷ ಸುಲಿಗೆ ಮಾಡಿದ್ದರು. ಬಾಲಕನನ್ನು ಪೋಷಕರಿಗೆ ಹಸ್ತಾಂತರಿಸಿ, ಪರಾರಿಯಾಗಿದ್ದರು.

‘ಆರೋಪಿಗಳ ಪತ್ತೆಗೆ ಈಶಾನ್ಯ ವಿಭಾಗದ ಡಿಸಿಪಿ ನೇತೃತ್ವದಲ್ಲಿ ವಿಶೇಷ ತಂಡ ರಚಿಸಲಾಗಿತ್ತು. ಸಿಸಿಟಿವಿ ದೃಶ್ಯ ಹಾಗೂ ಮೊಬೈಲ್‌ ಕರೆಗಳನ್ನು ಆಧರಿಸಿ ಆರೋಪಿಗಳನ್ನು ಬಂಧಿಸಲಾಯಿತು. ಸುಲಿಗೆ ಮಾಡಿದ್ದ ಹಣದಲ್ಲಿ ಆರೋಪಿಗಳು ಒಂದೂವರೆ ಲಕ್ಷದ ಕೆಟಿಎಂ ಬೈಕ್‌, ಕೆನಾನ್‌ ಡಿಜಿಟಲ್‌ ಕ್ಯಾಮೆರಾ ಖರೀದಿಸಿದ್ದರು. ಬಂಧಿತರಿಂದ ಪ್ಯಾಷನ್‌ ಪ್ರೊ ಬೈಕ್‌, ₹ 9 ಲಕ್ಷ ನಗದು ಹಾಗೂ ಬಾಲಕನ ಅಪಹರಣಕ್ಕೆ ಬಳಸಿದ್ದ ಕ್ರೆಟಾ ಕಾರ‌ನ್ನು ವಶಕ್ಕೆ ಪಡೆಯಲಾಗಿದೆ’ ಎಂದು ಮೂಲಗಳು ಹೇಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.