ಮೆಟ್ರೊ
ಬೆಂಗಳೂರು: 'ನಮ್ಮ ಮೆಟ್ರೊ' ಪ್ರಯಾಣ ದರದಲ್ಲಿನ ವಿಪರೀತ ಏರಿಕೆಯ ಪರಿಣಾಮವಾಗಿ ಪ್ರಯಾಣಿಕರ ಸಂಖ್ಯೆ ಗಣನೀಯವಾಗಿ ಕುಸಿದಿದೆ.
2017ರ ಜೂನ್ ಬಳಿಕ ಇದೇ ಮೊದಲ ಸಲ ಪ್ರಯಾಣ ದರ ಏರಿಸಿರುವ ಬೆಂಗಳೂರು ಮೆಟ್ರೊ ರೈಲು ನಿಗಮವು (ಬಿಎಂಆರ್‌ಸಿಎಲ್), ರಿಯಾಯಿತಿ ರಹಿತ ದರದಲ್ಲಿ ಸರಾಸರಿ ಶೇ 51.55ರಷ್ಟು ಹಾಗೂ ರಿಯಾಯಿತಿ ಸಹಿತ ದರದಲ್ಲಿ ಶೇ 45-46 ರಷ್ಟು ಏರಿಕೆ ಮಾಡಿರುವುದಾಗಿ ತಿಳಿಸಿದೆ.
ಆದರೆ, ಹಲವು ಮಾರ್ಗಗಳಲ್ಲಿ ದರ ಶೇ 100ರಷ್ಟು ಏರಿಕೆಯಾಗಿದೆ ಎಂದು ಪ್ರಯಾಣಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಿತ್ಯವೂ ಪ್ರಯಾಣಿಸುವವರು, ಅದರಲ್ಲೂ ವಿದ್ಯಾರ್ಥಿಗಳು ತೊಂದರೆಗೊಳಗಾಗಿದ್ದಾರೆ ಎಂಬ ದೂರುಗಳು ಕೇಳಿ ಬಂದಿವೆ.
ಪ್ರಯಾಣಿಕರಿಗೆ ಸದ್ಯಕ್ಕೆ ಪರಿಹಾರ ಸಿಗುವ ಯಾವುದೇ ಲಕ್ಷಣಗಳಿಲ್ಲ. ಆದರೆ, ಸಮಸ್ಯೆಯನ್ನು ಪರಿಶೀಲಿಸುತ್ತಿರುವುದಾಗಿ ಬಿಎಂಆರ್‌ಸಿಎಲ್ ಹೇಳಿದೆ.
ದರ ಏರಿಕೆ ಮಾತ್ರವಲ್ಲದೆ, ಸ್ಮಾರ್ಟ್ ಕಾರ್ಡ್‌ಗಳಲ್ಲಿನ ಕನಿಷ್ಠ ಉಳಿತಾಯ ಮಿತಿಯನ್ನು ₹ 50ರಿಂದ ₹90ಕ್ಕೆ ಏರಿಸಿರುವ ಬಗ್ಗೆಯೂ ಟೀಕೆಗಳು ಕೇಳಿ ಬಂದಿವೆ.
ಒಂದು ಬಾರಿಯ ಪ್ರಯಾಣಕ್ಕೆ ಬೇಕಾಗುವ ಗರಿಷ್ಠ ದರದಷ್ಟು ಮೊತ್ತ ಕಾರ್ಡ್‌ನಲ್ಲಿ ಇರಬೇಕು ಎಂದು ನಿಗಮದ ಅಧಕಾರಿಗಳು ಹೇಳಿದ್ದಾರೆ. ಇದಕ್ಕೆ ಪ್ರತಿಯಾಗಿ ಪ್ರಯಾಣಿಕರೊಬ್ಬರು, ಈ ಹಿಂದೆ ಗರಿಷ್ಠ ಮೊತ್ತ ₹ 60 ಇದ್ದಾಗ ಕಾರ್ಡ್‌ನ ಉಳಿತಾಯ ಮಿತಿ ₹ 50 ಇದ್ದದ್ದು ಏಕೆ ಎಂದು ಪ್ರಶ್ನಿಸಿದ್ದಾರೆ.
ಪ್ರಯಾಣಿಕರ ಸಂಖ್ಯೆ ಕುಸಿತ
ಪರಿಷ್ಕೃತ ದರ ಪಟ್ಟಿ ಫೆಬ್ರುವರಿ 9ರಿಂದ ಜಾರಿಗೆ ಬಂದಿದೆ. ನಂತರದ ಸತತ ಎರಡು ದಿನಗಳಲ್ಲಿ ಪ್ರಯಾಣಿಕರ ಸಂಖ್ಯೆ ಕುಸಿದಿದೆ.
ಫೆಬ್ರುವರಿ 10ರಂದು (ಸೋಮವಾರ) 8,28,149 ಜನರು ಹಾಗೂ ಫೆಬ್ರುವರಿ 11ರಂದು (ಮಂಗಳವಾರ) 7,78,774 ಮಂದಿ ಮೆಟ್ರೊ ಪ್ರಯಾಣ ಮಾಡಿದ್ದಾರೆ.
ಜನವರಿ 13ರ ಮಕರ ಸಂಕ್ರಾಂತಿ ರಜಾದಿನವನ್ನು ಹೊರತುಪಡಿಸಿ, ಈ ವರ್ಷದ ಉಳಿದ ನಾಲ್ಕು ಸೋಮವಾರಗಳಿಗೆ ಹೋಲಿಸಿದರೆ, ಫೆಬ್ರುವರಿ 10ರಂದು ಪ್ರಯಾಣಿಸಿದವರ ಸಂಖ್ಯೆ ಶೇ 6ರಷ್ಟು ಕಡಿಮೆಯಾಗಿದೆ.
ದರ ಏರಿಕೆಯ ಬಳಿಕ ನಿತ್ಯ ₹ 55–60 ಲಕ್ಷ ಅಧಿಕ ಲಾಭದ ನಿರೀಕ್ಷೆಯಲ್ಲಿರುವ ಬಿಎಂಆರ್‌ಸಿಎಲ್, ಪ್ರಯಾಣಿಕ ಸಂಖ್ಯೆಯು ಶೇ 1–2 ರಷ್ಟು ಕುಸಿಯಬಹುದು ಎಂದು ಅಂದಾಜಿಸಿದೆ.
2025ರ ನಂತರ ಪ್ರತಿ ಸೋಮವಾರ ಪ್ರಯಾಣಿಸಿದವರ ಸಂಖ್ಯೆ
ಜನವರಿ 6: 8,61,593
ಜನವರಿ 13: 7,84,539 (ಸಂಕ್ರಾಂತಿ ರಜಾ ದಿನ)
ಜನವರಿ 20: 8,79,537
ಜನವರಿ 27: 9,09,756
ಫೆಬ್ರುವರಿ 3: 8,70,147
ಫೆಬ್ರುವರಿ 10: 8,28,149
ಫೆಬ್ರುವರಿ 11: 7,78,774 (ಮಂಗಳವಾರ)
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.