ADVERTISEMENT

ಭಾಷಣದಲ್ಲಿ ಮಾತ್ರ ದೇಶಪ್ರೇಮ: ಟೀಕೆ

ಸಂವಿಧಾನ ರಕ್ಷಣೆಯ ಕುರಿತು ವಿಚಾರಸಂಕಿರಣ

​ಪ್ರಜಾವಾಣಿ ವಾರ್ತೆ
Published 4 ಏಪ್ರಿಲ್ 2019, 19:47 IST
Last Updated 4 ಏಪ್ರಿಲ್ 2019, 19:47 IST
ಕಾರ್ಯಕ್ರಮದಲ್ಲಿ (ಎಡದಿಂದ) ಪ್ರಗತಿಪರ ಚಿಂತಕ ಅಬ್ರಾಹಂ ರೂಬಿ, ಬಹುಜನ ಸಮಾಜದ ಅಧ್ಯಕ್ಷೆ ಜ್ಯೋತಿ, ಉಮಾಶಂಕರ್, ನಿವೃತ್ತ ಐಎಎಸ್ ಅಧಿಕಾರಿ ಸುಭಾಷ್‌ ಭರಣಿ ಅವರು ಅಂಬೇಡ್ಕರ್ ಹಾಗೂ ಜಗಜೀವನ್‌ರಾವ್‌ ಅವರ ಭಾವಚಿತ್ರಗಳಿಗೆ ಪುಷ್ಪ ನಮನ ಸಲ್ಲಿಸಿದರು –ಪ್ರಜಾವಾಣಿ ಚಿತ್ರ
ಕಾರ್ಯಕ್ರಮದಲ್ಲಿ (ಎಡದಿಂದ) ಪ್ರಗತಿಪರ ಚಿಂತಕ ಅಬ್ರಾಹಂ ರೂಬಿ, ಬಹುಜನ ಸಮಾಜದ ಅಧ್ಯಕ್ಷೆ ಜ್ಯೋತಿ, ಉಮಾಶಂಕರ್, ನಿವೃತ್ತ ಐಎಎಸ್ ಅಧಿಕಾರಿ ಸುಭಾಷ್‌ ಭರಣಿ ಅವರು ಅಂಬೇಡ್ಕರ್ ಹಾಗೂ ಜಗಜೀವನ್‌ರಾವ್‌ ಅವರ ಭಾವಚಿತ್ರಗಳಿಗೆ ಪುಷ್ಪ ನಮನ ಸಲ್ಲಿಸಿದರು –ಪ್ರಜಾವಾಣಿ ಚಿತ್ರ   

ಬೆಂಗಳೂರು: ‘ಕಷ್ಟಪಡುವ ದೇಶಭಕ್ತರಿಗೆ ಅಧಿಕಾರ ನೀಡುತ್ತಿರೋ ಅಥವಾ ಕೇವಲ ಭಾಷಣದಲ್ಲಿ ರಾಷ್ಟ್ರಪ್ರೇಮ ಬಿತ್ತುವವರನ್ನು ಅಧಿಕಾರಕ್ಕೆ ತರುತ್ತಿರೋ’ ಎಂದು ರಾಜ್ಯಸಭಾ ಸದಸ್ಯ ಎಲ್‌.ಹನುಮಂತಯ್ಯ ಪ್ರಶ್ನಿಸಿದರು.

ಭಾರತ ಸಂವಿಧಾನ ರಕ್ಷಣಾ ಸಮಿತಿಯು ಗುರುವಾರ ಆಯೋಜಿಸಿದ್ದ ಸಂವಿಧಾನ ರಕ್ಷಣೆಯ ಕುರಿತ ವಿಚಾರ ಸಂಕಿರಣದಲ್ಲಿ ಅವರು ಮಾತನಾಡಿದರು. ‘ದೇಶಪ್ರೇಮ ಎನ್ನುತ್ತಾ ಜಾತಿ, ವರ್ಣ, ಧರ್ಮ, ಲಿಂಗ ತಾರತಮ್ಯ ಮಾಡುತ್ತಿದ್ದಾರೆ. ಅಲ್ಪಸಂಖ್ಯಾರನ್ನು ಭಯದ ವಾತಾವರಣದಲ್ಲಿ ಬದುಕುವಂತೆ ಮಾಡಿದ್ದಾರೆ.

ಸಮಾನತೆ, ಸ್ವಾತಂತ್ರ್ಯ ಮತ್ತು ಸಹೋದರತೆಗೆ ಅವಕಾಶ ನೀಡದೆ ಕೋಮುಗಲಭೆಗೆ ಆಸ್ಪದ ಕೊಟ್ಟರು. ಸಂವಿಧಾನವನ್ನೇ ತಿರುಚಲು ಮುಂದಾದರು. ಇಷ್ಟೆಲ್ಲಾ ಮಾಡಿದವರಿಗೆ ಹೇಗೆ ದೇಶಪ್ರೇಮ ಉಕ್ಕಿ ಬರುತ್ತದೆ’ ಎಂದು ಟೀಕಿಸಿದರು.

ADVERTISEMENT

‘ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ರಕ್ಷಣೆ ದೊರೆಯಬೇಕೆಂಬುದು ಸಂವಿಧಾನದಲ್ಲಿದೆ. ಆದರೆ, ಐದು ವರ್ಷಗಳ ಆಡಳಿತದಲ್ಲಿ ಅದಕ್ಕೆಲ್ಲ ವಿರುದ್ಧವಾಗಿ ನಡೆದುಕೊಂಡಿರುವವರನ್ನು ಮತ್ತೆ ಅಧಿಕಾರಕ್ಕೆ ತರಬೇಕೇ’ ಎಂದು ಪ್ರಶ್ನೆ ಮಾಡಿದರು.

‘ನಾಗಲ್ಯಾಂಡ್‌ನಲ್ಲಿ ನಾಯಿಯನ್ನು, ಕೇರಳದಲ್ಲಿ ಗೋವನ್ನು ತಿನ್ನುತ್ತಾರೆ. ತಮಗೆ ಬೇಕಾದ ಆಹಾರವನ್ನು ಆಯ್ಕೆ ಮಾಡಿಕೊಳ್ಳುವ ಸ್ವಾತಂತ್ರ್ಯವನ್ನು ಸಂವಿಧಾನವೇ ಕೊಟ್ಟಿದೆ. ಆದರೆ, ಇದನ್ನೊಂದು ವರ್ಗ ಮಿತಿಗೊಳಿಸುತ್ತಿದೆ. ಎಲ್ಲರೂ ಪೂರ್ವದಿಕ್ಕಿಗೆ ಮನೆ ಕಟ್ಟಲು ಸಾಧ್ಯವೇ. ಅವರಿಗೆ ಅನುಕೂಲವಾದ ಕಡೆ ಕಟ್ಟುತ್ತಾರೆ. ಅದು ಅವರ ಸ್ವಾತಂತ್ರ್ಯ ಅಲ್ಲವೇ’ ಎಂದು ಹೇಳಿದರು.

ಉಪಮುಖ್ಯಮಂತ್ರಿ ‍ಜಿ ಪರಮೇಶ್ವರ, ‘ನಮ್ಮದು ಬಹಳ ಶ್ರೀಮಂತ ಸಂಸ್ಕೃತಿ ಎಂದು ವಿದೇಶಿಯರಿಗೆ ಹೆಮ್ಮೆಯಿಂದ ಹೇಳುತ್ತೇವೆ. ದಲಿತರ ಮತ್ತು ಸಮುದಾಯದ ಮಹಿಳೆಯರ ಮೇಲಾಗುವ ದೌರ್ಜನ್ಯದ ಸಂಸ್ಕೃತಿಯನ್ನು ಹೇಗೆ ಹೇಳಬೇಕು ಸ್ವಾಮಿ’ ಎಂದು ಬೇಸರ ವ್ಯಕ್ತಪಡಿಸಿದರು.ಹೈಕೋರ್ಟ್‌ ವಕೀಲ ಉಮಾಶಂಕರ್, ‘ಮತ್ತೆ ಅವರಿಗೆ ಅಧಿಕಾರ ಕೊಟ್ಟರೆ ಸಂವಿಧಾನದ ಮುಖ್ಯವಾದ ಅನುಚ್ಛೇದಗಳನ್ನು ಬದಲಿಸಿ, ಸಂವಿಧಾನವನ್ನೇ ಮಾರ್ಪಾಡುಗೊಳಿಸುತ್ತಾರೆ’ ಎಂದು ಎಚ್ಚರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.