ADVERTISEMENT

ರಸ್ತೆ ಗುಂಡಿ ಪ್ರಕರಣದ ವಿಚಾರಣೆಗೆ ಗೈರು; ಬಿಬಿಎಂಪಿ ಮುಖ್ಯ ಎಂಜಿನಿಯರ್‌ಗೆ ವಾರಂಟ್

ರಸ್ತೆ ಗುಂಡಿ ಪ್ರಕರಣದ ವಿಚಾರಣೆಗೆ ಗೈರು

​ಪ್ರಜಾವಾಣಿ ವಾರ್ತೆ
Published 15 ಫೆಬ್ರುವರಿ 2022, 8:58 IST
Last Updated 15 ಫೆಬ್ರುವರಿ 2022, 8:58 IST
   

ಬೆಂಗಳೂರು: 'ನಿಮ್ಮ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಎಂಜಿನಿಯರ್‌ಗಳು ಹಾಗೂ ಅಧಿಕಾರಿಗಳಿಗೆ ಜೈಲಿಗೆ ಹೋಗಲಿಕ್ಕೆ ಗಂಟುಮೂಟೆ ಕಟ್ಟಿಕೊಳ್ಳಲು ಹೇಳಿ' ಎಂದು ಬಿಬಿಎಂಪಿ ಪರ ವಕೀಲರಿಗೆ ಖಡಕ್ ಎಚ್ಚರಿಕೆ ನೀಡಿರುವ ಹೈಕೋರ್ಟ್, ಬಿಬಿಎಂಪಿ ಮುಖ್ಯ ಎಂಜಿನಿಯರ್‌ ವಿರುದ್ಧ ವಾರೆಂಟ್‌ ಹೊರಡಿಸಿದೆ.

ಕೋರ್ಟ್ ನಿರ್ದೇಶನದ ಹೊರತಾಗಿಯೂ ವಿಚಾರಣೆಗೆ ಹಾಜರಾಗದೆ ತಪ್ಪಿಸಿಕೊಂಡ ಕಾರಣಕ್ಕೆ ಮುಖ್ಯ ಎಂಜಿನಿಯರ್ ಅನ್ನು ಇದೇ 17 ರಂದು ಕೋರ್ಟ್ ಮುಂದೆ ಹಾಜರುಪಡಿಸುವಂತೆ ನಗರ ಪೊಲೀಸ್ ಆಯುಕ್ತರಿಗೆ ನಿರ್ದೇಶಿಸಲಾಗಿದೆ.

'ನಗರದ ರಸ್ತೆಗಳ ಗುಂಡಿಗಳನ್ನು ಮುಚ್ಚಲು ಸರ್ಕಾರ ಹಾಗೂ ಬಿಬಿಎಂಪಿಗೆ ನಿರ್ದೇಶಿಸಬೇಕು' ಎಂದು ಕೋರಿ ಬೆಂಗಳೂರಿನ ವಿಜಯನ್‌ ಮೆನನ್‌ ಎಂಬುವರು 2015ರಲ್ಲಿ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಋತುರಾಜ್‌ ಅವಸ್ಥಿ ನೇತೃತ್ವದ ವಿಭಾಗೀಯ ನ್ಯಾಯಪೀಠ ಮಂಗಳವಾರ ವಿಚಾರಣೆ ನಡೆಸಿತು.

ADVERTISEMENT

ವಿಚಾರಣೆ ವೇಳೆ ಬಿಬಿಎಂಪಿ ಪರ ವಕೀಲ ವಿ. ಶ್ರೀನಿಧಿ, 'ಕೋರ್ಟ್ ನಿರ್ದೇಶನದಂತೆ ಬಿಬಿಎಂಪಿ ಮುಖ್ಯ ಎಂಜಿನಿಯರ್ ಇಂದು ವಿಚಾರಣೆಗೆ ಹಾಜರಾಗಬೇಕಿತ್ತು. ಆದರೆ, ಅನಾರೋಗ್ಯದ ಕಾರಣ ಹಾಜರಾಗಲು ಸಾಧ್ಯವಾಗಿಲ್ಲ. ಅವರ ಹಾಜರಾತಿಗೆ ವಿನಾಯ್ತಿ ನೀಡಬೇಕು' ಎಂದು ಮನವಿ ಮಾಡಿದರು.

ಇದಕ್ಕೆ ಗರಂ ಆದ ಮುಖ್ಯ ನ್ಯಾಯಮೂರ್ತಿಗಳು, 'ಈ ಕುರಿತು ಕೋರ್ಟ್ ಕಲಾಪ ಆರಂಭವಾಗುವ ಮುನ್ನವೇ ನೀವು ಮೆಮೊ (ಜ್ಞಾಪನಾ ಪತ್ರ) ಸಲ್ಲಿಸಿ ಮನವಿ ಮಾಡಬೇಕಿತ್ತು. ಈಗ ಮನವಿ ಮಾಡಿದರೆ ಅದನ್ನು ಒಪ್ಪಲಾಗದು' ಎಂದು ಹೇಳಿ, ಮುಖ್ಯ ಎಂಜಿನಿಯರ್ ವಿರುದ್ಧ ಜಾಮೀನು ಸಹಿತ ವಾರೆಂಟ್ ಜಾರಿಗೆ ಆದೇಶಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.