ಬೆಂಗಳೂರು: ಸವಾಲುಗಳನ್ನು ಆತ್ಮವಿಶ್ವಾಸದಿಂದ ಎದುರಿಸಬೇಕು. ಅಡೆತಡೆಗಳನ್ನು ಅವಕಾಶಗಳನ್ನಾಗಿ ಪರಿವರ್ತಿಸಬೇಕು ಎಂದು ರಾಜರಾಜೇಶ್ವರಿ ಎಂಜಿನಿಯರಿಂಗ್ ಕಾಲೇಜಿನ ಅಧ್ಯಕ್ಷ ಎ.ಸಿ. ಷಣ್ಮುಗಂ ತಿಳಿಸಿದರು.
ಬುಧವಾರ ನಡೆದ ರಾಜರಾಜೇಶ್ವರಿ ಎಂಜಿನಿಯರಿಂಗ್ ಕಾಲೇಜಿನ 16ನೇ ಪದವಿ ಪ್ರದಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಕ್ರಿಯಾತ್ಮಕ ಜಗತ್ತಿನಲ್ಲಿ ನಿರಂತರ ಕಲಿಕೆ, ನೈತಿಕ ನಾಯಕತ್ವ ಅಗತ್ಯ. ವೈಯಕ್ತಿಕ ಮತ್ತು ವೃತ್ತಿಪರ ಜೀವನದಲ್ಲಿ ಶ್ರೇಷ್ಠತೆಗಾಗಿ ಶ್ರಮಿಸಬೇಕು ಎಂದು ಸಲಹೆ ನೀಡಿದರು.
ಬೆಂಗಳೂರು ದಕ್ಷಿಣ ಜಿಲ್ಲಾಧಿಕಾರಿ ಯಶವಂತ್ .ವಿ ಗುರುಕರ್ ಮಾತನಾಡಿ, ‘ಜ್ಞಾನ ಮತ್ತು ಕೌಶಲಗಳನ್ನು ತೃಪ್ತಿಕರ ವೃತ್ತಿಜೀವನ ನಡೆಸಲಷ್ಟೇ ಸೀಮಿತಗೊಳಿಸದೇ ಸಮಾಜಕ್ಕೆ ಅರ್ಥಪೂರ್ಣ ಕೊಡುಗೆ ನೀಡಲು ಬಳಸಬೇಕು. ಜವಾಬ್ದಾರಿ, ಸೇವೆ ಮತ್ತು ನಾಯಕತ್ವದ ಮೌಲ್ಯಗಳನ್ನು ಅಳವಡಿಸಿಕೊಳ್ಳಬೇಕು. ಯುವ ಪದವೀಧರರು ರಾಷ್ಟ್ರದ ಪ್ರಗತಿ ಮತ್ತು ಸಮಗ್ರ ಭವಿಷ್ಯವನ್ನು ರೂಪಿಸುವಲ್ಲಿ ಸಕ್ರಿಯ ಪಾತ್ರ ವಹಿಸಬೇಕು’ ಎಂದು ಹೇಳಿದರು.
ನಟಿ ರಾಧಿಕಾ ನಾರಾಯಣ್ ಮಾತನಾಡಿ, ‘ಉತ್ಸಾಹ, ಪರಿಶ್ರಮ ಮತ್ತು ಸೃಜನಶೀಲತೆ ಇದ್ದಾಗ ಯಶಸ್ಸನ್ನು ಸಾಧಿಸಲು ಸಾಧ್ಯ. ವಿದ್ಯಾರ್ಥಿಗಳು ತಮ್ಮ ಮೇಲೆ ತಾವು ನಂಬಿಕೆ ಇಡಬೇಕು. ಆತ್ಮವಿಶ್ವಾಸದಿಂದ ಸವಾಲುಗಳನ್ನು ಸ್ವೀಕರಿಸಬೇಕು. ಶಿಸ್ತು ಮತ್ತು ಸಮರ್ಪಣೆಯ ಮೌಲ್ಯಗಳನ್ನು ಮುಂದುವರಿಸಬೇಕು’ ಎಂದು ಸಲಹೆ ನೀಡಿದರು.
ಎಸಿಎಸ್ ಅಧ್ಯಕ್ಷ ಅರುಣ್ ಕುಮಾರ್, ಎಂಸಿಇಟಿ ಅಧ್ಯಕ್ಷೆ ಲಲಿತಾ ಲಕ್ಷ್ಮಿ, ಕಾರ್ಯನಿರ್ವಾಹಕ ನಿರ್ದೇಶಕರಾದ ಎಸ್. ವಿಜಯಾನಂದ್, ಪ್ರಾಂಶುಪಾಲ ಆರ್. ಬಾಲಕೃಷ್ಣ, ಸಿಇಒ ಸಿ.ಎನ್. ಸೀತಾರಾಮ್ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.