ADVERTISEMENT

ಲಂಚ ಪ್ರಕರಣ: ಎಫ್‌ಡಿಎ ಬಂಧನ

​ಪ್ರಜಾವಾಣಿ ವಾರ್ತೆ
Published 2 ಮಾರ್ಚ್ 2022, 19:28 IST
Last Updated 2 ಮಾರ್ಚ್ 2022, 19:28 IST
   

ಬೆಂಗಳೂರು: ಸ್ವಯಂ ಉದ್ಯೋಗಕ್ಕೆ ಸಾಲ ಮತ್ತು ಸಹಾಯಧನ ನೀಡುವ ಯೋಜನೆಯಡಿ ಮಂಜೂರಾಗಿದ್ದ ಅನುದಾನ ಬಿಡುಗಡೆ ಮಾಡಲು ₹ 25,000 ಲಂಚ ಪಡೆಯುತ್ತಿದ್ದ ಭೋವಿ ಅಭಿವೃದ್ಧಿ ನಿಗಮದ ಬೆಂಗಳೂರು ನಗರ ಜಿಲ್ಲಾ ಕಚೇರಿಯ ಪ್ರಥಮ ದರ್ಜೆ ಸಹಾಯಕ ದಶರಥ್‌ ಎಂಬುವವರನ್ನು ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಬುಧವಾರ ಬಂಧಿಸಿದೆ.

ಚಾಮರಾಜಪೇಟೆ ನಿವಾಸಿಯೊಬ್ಬರು ಸ್ವಯಂ ಉದ್ಯೋಗಕ್ಕೆ ನೆರವು ಕೋರಿ ಅರ್ಜಿ ಸಲ್ಲಿಸಿದ್ದರು. ಮಂಜೂರಾತಿಯಾಗಿದ್ದ ಹಣವನ್ನು ಬಿಡುಗಡೆ ಮಾಡುವಂತೆ ನಿಗಮದ ಬೆಂಗಳೂರು ಜಿಲ್ಲಾ ಕಚೇರಿಯ ಅಧಿಕಾರಿಗಳನ್ನು ಸಂಪರ್ಕಿಸಿದ್ದರು. ಹಣ ಬಿಡುಗಡೆ ಮಾಡಲು ₹ 50,000 ಲಂಚ ನೀಡುವಂತೆ ದಶರಥ್‌ ಮತ್ತು ನಿಗಮದ ಜಿಲ್ಲಾ ವ್ಯವಸ್ಥಾಪಕ ಸುಬ್ಬಪ್ಪ ಬೇಡಿಕೆ ಇಟ್ಟಿದ್ದರು. ಈ ಕುರಿತು ಅರ್ಜಿದಾರರು ಎಸಿಬಿ ಬೆಂಗಳೂರು ನಗರ ಘಟಕದ ಕಚೇರಿಗೆ ದೂರು ಸಲ್ಲಿಸಿದ್ದರು.

‘ದೂರುದಾರ ಮತ್ತು ಆರೋಪಿಗಳ ನಡುವೆ ಪುನಃ ಮಾತುಕತೆ ನಡೆದಿತ್ತು. ₹ 25,000ವನ್ನು ತುರ್ತಾಗಿ ತಲುಪಿಸುವಂತೆ ಆರೋಪಿಗಳು ಸೂಚಿಸಿದ್ದರು. ಬುಧವಾರ ಸಂಜೆ ನಿಗಮದ ಜಿಲ್ಲಾ ಕಚೇರಿಗೆ ದೂರುದಾರರು ಹೋದಾಗ ದಶರಥ್‌ ಲಂಚದ ಹಣ ಪಡೆದುಕೊಂಡರು. ತಕ್ಷಣ ಅವರನ್ನು ಬಂಧಿಸಲಾಯಿತು’ ಎಂದು ಮೂಲಗಳು ತಿಳಿಸಿವೆ.

ADVERTISEMENT

ಪ್ರಕರಣಕ್ಕೆ ಸಂಬಂಧಿಸಿದ ಕಡತವನ್ನು ವಶಪಡಿಸಿಕೊಳ್ಳಲಾಗಿದೆ. ಎರಡನೇ ಆರೋಪಿ ಸುಬ್ಬಪ್ಪ ವಿರುದ್ಧ ತನಿಖೆ ಮುಂದುವರಿದಿದೆ ಎಂದು ಮೂಲಗಳು ಹೇಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.