ADVERTISEMENT

ಎಸಿಬಿ: ಕಾಲಹರಣವೇ ಅಧಿಕಾರಿಗಳ ಕಷ್ಟ!

ಎರಡೂವರೆ ತಿಂಗಳಾದರೂ ನಿಯೋಜನೆ ಇಲ್ಲ: ಕೆಲಸವಿಲ್ಲದೇ ಕಾಲ ಕಳೆಯುತ್ತಿರುವ ನೂರಾರು ಮಂದಿ

ವಿ.ಎಸ್.ಸುಬ್ರಹ್ಮಣ್ಯ
Published 10 ನವೆಂಬರ್ 2022, 20:36 IST
Last Updated 10 ನವೆಂಬರ್ 2022, 20:36 IST
ಲೋಕಾಯುಕ್
ಲೋಕಾಯುಕ್   

ಬೆಂಗಳೂರು: ಭ್ರಷ್ಟಾಚಾರ ನಿಗ್ರಹ ದಳವನ್ನು (ಎಸಿಬಿ) ರದ್ದುಗೊಳಿಸಿ ಹೈಕೋರ್ಟ್‌ ತೀರ್ಪು ನೀಡಿ ಎರಡೂವರೆ ತಿಂಗಳು ಕಳೆದರೂ ತನಿಖಾ ಸಂಸ್ಥೆಯಲ್ಲಿದ್ದ ಪೊಲೀಸ್‌ ಅಧಿಕಾರಿಗಳನ್ನು ಬೇರೆಡೆ ನಿಯುಕ್ತಿಗೊಳಿಸುವ ಪ್ರಕ್ರಿಯೆಯನ್ನು ರಾಜ್ಯ ಸರ್ಕಾರ ಇನ್ನೂ ಪೂರ್ಣಗೊಳಿಸಿಲ್ಲ. ಎಸ್‌ಪಿ, ಡಿವೈಎಸ್‌ಪಿ, ಇನ್‌ಸ್ಪೆಕ್ಟರ್‌ ದರ್ಜೆಯ ನೂರಕ್ಕೂ ಹೆಚ್ಚು ಅಧಿಕಾರಿಗಳು ಕೆಲಸವಿಲ್ಲದೇ ಕಾಲ ಕಳೆಯುತ್ತಿದ್ದಾರೆ.

ಎಸಿಬಿ ರಚನೆಯ ಅಧಿಸೂಚನೆಯನ್ನೇ ರದ್ದುಗೊಳಿಸಿ ಹೈಕೋರ್ಟ್‌ ಇದೇ ಆಗಸ್ಟ್‌ 11ರಂದು ತೀರ್ಪು ನೀಡಿತ್ತು. ನ್ಯಾಯಾಲಯದ ಆದೇಶ ಹೊರಬಿದ್ದ ದಿನದಿಂದಲೇ ತನಿಖಾ ಸಂಸ್ಥೆ ಕಾರ್ಯನಿರ್ವಹಣೆಯನ್ನು ಸ್ಥಗಿತಗೊಳಿಸಿತ್ತು. ಎಸಿಬಿ ರದ್ದುಗೊಳಿಸುವ ಹೈಕೋರ್ಟ್‌ ತೀರ್ಪಿನ ಅನುಷ್ಠಾನಕ್ಕೆ ಸೆಪ್ಟೆಂಬರ್‌ 9ರಂದು ಆದೇಶ ಹೊರಡಿಸಿದ್ದ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ (ಡಿಪಿಎಆರ್‌), ಸಂಸ್ಥೆಯಲ್ಲಿದ್ದ ಎಲ್ಲ ಪ್ರಕರಣಗಳನ್ನು ಲೋಕಾಯುಕ್ತಕ್ಕೆ ಹಸ್ತಾಂತರಗೊಳಿಸಲು ನಿರ್ದೇಶನ ನೀಡಿತ್ತು.

ಆ.11ರಿಂದ ಎಸಿಬಿ ಕಚೇರಿಗಳಲ್ಲಿ ಲೋಕಾಯುಕ್ತಕ್ಕೆ ಪ್ರಕರಣ ಹಸ್ತಾಂತರಿಸಲು ಕಡತ ಸಜ್ಜುಗೊಳಿಸುವುದರ ಹೊರತಾಗಿ ಯಾವ ಕೆಲಸಗಳೂ ನಡೆಯುತ್ತಿಲ್ಲ. ಬಹುತೇಕ ಎಲ್ಲ ಜಿಲ್ಲಾ ಘಟಕಗಳು ತಮ್ಮ ವ್ಯಾಪ್ತಿಯ ಪ್ರಕರಣಗಳ ಕಡತಗಳನ್ನು ಲೋಕಾಯುಕ್ತಕ್ಕೆ ಹಸ್ತಾಂತರಿಸಿವೆ. ಬೆಂಗಳೂರು ನಗರ ಘಟಕದಲ್ಲಿ ಮಾತ್ರ ಕಡತ ಹಸ್ತಾಂತರ ಪ್ರಕ್ರಿಯೆ ಕೊಂಚ ನಿಧಾನಗತಿಯಲ್ಲಿ ಸಾಗಿದೆ.

ADVERTISEMENT

ಎಸಿಬಿಯಲ್ಲಿ ಹೆಚ್ಚುವರಿ ಪೊಲೀಸ್‌ ಮಹಾನಿರ್ದೇಶಕರು ಮತ್ತು ಐಜಿಪಿ ದರ್ಜೆಯ ತಲಾ 1, ಹತ್ತು ಎಸ್‌ಪಿ, 35 ಡಿವೈಎಸ್‌ಪಿ, 75 ಇನ್‌ಸ್ಪೆಕ್ಟರ್‌ ಹಾಗೂ 200 ಹೆಡ್‌ ಕಾನ್‌ಸ್ಟೆಬಲ್‌, ಕಾನ್‌ಸ್ಟೆಬಲ್‌ ಸೇರಿದಂತೆ ಎಸಿಬಿಯಲ್ಲಿ 322 ಹುದ್ದೆಗಳಿಗೆ ಮಂಜೂರಾತಿ ಇತ್ತು. ಬಹುತೇಕ ಹುದ್ದೆಗಳು ಭರ್ತಿಯಾಗಿದ್ದವು. ಈ ಎಲ್ಲ ಅಧಿಕಾರಿಗಳು ಮತ್ತು ಸಿಬ್ಬಂದಿಯನ್ನೂ ಲೋಕಾಯುಕ್ತಕ್ಕೆ ನೀಡುವಂತೆ ಲೋಕಾಯುಕ್ತ ನ್ಯಾಯಮೂರ್ತಿ ಬಿ.ಎಸ್‌. ಪಾಟೀಲ ಸರ್ಕಾರವನ್ನು ಕೋರಿದ್ದರು. ಆದರೆ, ಕೆಲವು ಅಧಿಕಾರಿಗಳು ಮತ್ತು ಸಿಬ್ಬಂದಿಯನ್ನು ಮಾತ್ರ ವರ್ಗಾಯಿಸುವ ತೀರ್ಮಾನವನ್ನು ಸರ್ಕಾರ ಕೈಗೊಂಡಿತ್ತು.

110 ಪೊಲೀಸ್‌ ಕಾನ್‌ಸ್ಟೆಬಲ್‌ಗಳನ್ನು ಎಸಿಬಿಯಿಂದ ಲೋಕಾಯುಕ್ತಕ್ಕೆ ವರ್ಗಾಯಿಸಲಾಗಿದೆ. ಮೂವರು ಎಸ್‌ಪಿಗಳು, ನಾಲ್ವರು ಡಿವೈಎಸ್‌ಪಿಗಳು ಹಾಗೂ ಎಂಟು ಇನ್‌ಸ್ಪೆಕ್ಟರ್‌ಗಳನ್ನು ಎಸಿಬಿಯಿಂದ ಲೋಕಾಯುಕ್ತಕ್ಕೆ ವರ್ಗಾವಣೆ ಮಾಡಲಾಗಿತ್ತು. ಅವರಲ್ಲಿ ಕೆಲವರು ಇನ್ನೂ ವರ್ಗಾವಣೆಯಾದ ಹುದ್ದೆಯಲ್ಲಿ ಕರ್ತವ್ಯಕ್ಕೆ ಹಾಜರಾಗಿಲ್ಲ ಎಂದು ಲೋಕಾಯುಕ್ತದ ಮೂಲಗಳು ‘ಪ್ರಜಾವಾಣಿ’ಗೆ ತಿಳಿಸಿವೆ.

ಹಾಜರಾತಿಗೆ ಸೀಮಿತ: ‘ಎಸ್‌ಪಿ, ಡಿವೈಎಸ್‌ಪಿ ಮತ್ತು ಇನ್‌ಸ್ಪೆಕ್ಟರ್‌ ದರ್ಜೆಯ ನೂರಕ್ಕೂ ಹೆಚ್ಚು ಪೊಲೀಸ್‌ ಅಧಿಕಾರಿಗಳಿಗೆ ಎಸಿಬಿಯಲ್ಲಿ ಯಾವ ಕೆಲಸವೂ ಇಲ್ಲ. ಆದರೆ, ಬೇರೆಡೆ ಸ್ಥಳ ನಿಯುಕ್ತಿಗೊಳಿಸದ ಕಾರಣದಿಂದ ನಿತ್ಯವೂ ಕಚೇರಿಗೆ ಬಂದು ಹಾಜರಿ ‍ಪುಸ್ತಕಕ್ಕೆ ಸಹಿಮಾಡಿ, ಸಂಜೆಯವರೆಗೂ ಕಾಲ ಕಳೆದು ವಾಪಸ್‌ ಹೋಗುತ್ತಿದ್ದೇವೆ’ ಎಂದು ಎಸಿಬಿಯಲ್ಲಿರುವ ಹೆಸರು ಬಹಿರಂಗಪಡಿಸಲು ಇಚ್ಛಿಸಿದ ಅಧಿಕಾರಿಗಳು ಹೇಳುತ್ತಾರೆ.

80ಕ್ಕೂ ಹೆಚ್ಚು ಕಾನ್‌ಸ್ಟೆಬಲ್‌ಗಳೂ ಎಸಿಬಿಯಲ್ಲೇ ಇದ್ದಾರೆ. ಯಾರಿಗೂ ಪೂರ್ಣ ಪ್ರಮಾಣದ ಕೆಲಸ ಇಲ್ಲ. ಎರಡೂವರೆ ತಿಂಗಳಿನಿಂದ ಇದೇ ಪರಿಸ್ಥಿತಿ ಮುಂದುವರಿದಿದೆ ಎನ್ನುತ್ತಾರೆ ಅವರು.

ಎಸಿಬಿ ಕಚೇರಿ ಲೋಕಾಯುಕ್ತಕ್ಕೆ
ಲೋಕಾಯುಕ್ತ ಕಚೇರಿಯಲ್ಲಿ ಸ್ಥಳಾವಕಾಶದ ಕೊರತೆ ಇರುವುದರಿಂದ ಲೋಕಾಯುಕ್ತಕ್ಕೆ ಹೆಚ್ಚಿನ ಸ್ಥಳಾವಕಾಶ ಕಲ್ಪಿಸುವಂತೆ ಲೋಕಾಯುಕ್ತರು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಯವರಿಗೆ ಪ್ರಸ್ತಾವ ಕಳುಹಿಸಿದ್ದರು. ರೇಸ್‌ಕೋರ್ಸ್‌ ರಸ್ತೆಯಲ್ಲಿರುವ ಖನಿಜ ಭವನದ ತಳಮಹಡಿಯಲ್ಲಿರುವ ಎಸಿಬಿ ಕಚೇರಿಯನ್ನು ಲೋಕಾಯುಕ್ತ ಪೊಲೀಸ್‌ ವಿಭಾಗಕ್ಕೆ ನೀಡಿ ಆದೇಶ ಹೊರಡಿಸಲಾಗಿದೆ.

‘15 ದಿನಗಳೊಳಗೆ ಸ್ಥಳನಿಯುಕ್ತಿ’
‘ಪೊಲೀಸ್‌ ಅಧಿಕಾರಿಗಳು ಮತ್ತು ಸಿಬ್ಬಂದಿಯನ್ನು ಕೆಲಸವಿಲ್ಲದೇ ಖಾಲಿ ಕೂರಿಸುವುದನ್ನು ಸರ್ಕಾರ ಒಪ್ಪುವುದಿಲ್ಲ. ಆದರೆ, ಎಸಿಬಿಯಲ್ಲಿರುವ ಅಧಿಕಾರಿಗಳು, ಸಿಬ್ಬಂದಿಯನ್ನು ಹಂಚಿಕೆ ಮಾಡುವ ಕುರಿತು ಮುಖ್ಯ ಕಾರ್ಯದರ್ಶಿ ನೇತೃತ್ವದಲ್ಲಿ ಚರ್ಚೆ ನಡೆಯುತ್ತಿದೆ. 15 ದಿನಗಳೊಳಗೆ ಸ್ಥಳ ನಿಯುಕ್ತಿ ಪ್ರಕ್ರಿಯೆ ಪೂರ್ಣಗೊಳಿಸಲಾಗುವುದು’ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.