ADVERTISEMENT

ಎಸಿಬಿ ದಿಕ್ಕು ತಪ್ಪಿಸಲು ಯತ್ನಿಸಿದ ಶಾಸಕ!

ಆರೋಪದಿಂದ ಪಾರು ಮಾಡಲು ಶ್ರೀನಿವಾಸಗೌಡ ದುಂಬಾಲು

​ಪ್ರಜಾವಾಣಿ ವಾರ್ತೆ
Published 18 ಮಾರ್ಚ್ 2019, 20:16 IST
Last Updated 18 ಮಾರ್ಚ್ 2019, 20:16 IST

ಬೆಂಗಳೂರು: ‘ಆಪರೇಷನ್‌ ಕಮಲಕ್ಕೆ ಪ್ರಚೋದಿಸಲು ಬಿಜೆಪಿ ನಾಯಕರು ತಮಗೆ ₹ 25 ಕೋಟಿ ಆಮಿಷವೊಡ್ಡಿ, ₹ 5 ಕೋಟಿ ಮುಂಗಡ ಕೊಟ್ಟಿದ್ದರು’ ಎಂಬ ಹೇಳಿಕೆ ನೀಡಿ ಸಂಕಷ್ಟಕ್ಕೆ ಸಿಕ್ಕಿರುವ ಕೋಲಾರದ ಜೆಡಿಎಸ್‌ಪಕ್ಷದ ಶಾಸಕ ಶ್ರೀನಿವಾಸಗೌಡ ಸೋಮವಾರ ಗೊಂದಲದ ಹೇಳಿಕೆಗಳನ್ನು ನೀಡಿ ಎಸಿಬಿ ಅಧಿಕಾರಿಗಳನ್ನು ದಿಕ್ಕುತಪ್ಪಿಸಲು ಪ್ರಯತ್ನಿಸಿದರು ಎನ್ನಲಾಗಿದೆ.

ಈ ತಿಂಗಳ ಮೊದಲ ವಾರ ಎಸಿಬಿ ಕಚೇರಿಗೆ ಆಗಮಿಸಿದ್ದ ಶಾಸಕರು ಯಾವುದೇ ಹೇಳಿಕೆ ನೀಡದೆ ವಾಪಸ್ಸಾಗಿದ್ದರು. ಇಂದು ಎರಡನೇ ಸಲ ತನಿಖಾಧಿಕಾರಿ ಮುಂದೆ ಹಾಜರಾದ ಶ್ರೀನಿವಾಸಗೌಡ ಒಂದೂವರೆ ತಾಸು ಎಸಿಬಿ ಕಚೇರಿಯಲ್ಲಿದ್ದರು. ಈ ವೇಳೆ ಐಜಿಪಿ ಚಂದ್ರಶೇಖರ್‌ ಒಳಗೊಂಡಂತೆ ಅನೇಕ ಅಧಿಕಾರಿಗಳನ್ನು ಭೇಟಿ ಮಾಡಿ ಪ್ರಕರಣದಿಂದ ಪಾರು ಮಾಡುವಂತೆ ಮನವಿ ಮಾಡಿದರು ಎಂದು ಮೂಲಗಳು ತಿಳಿಸಿವೆ.

‘ಈ ಪ್ರಕರಣ ಕುರಿತು ನನಗೆ ಏನೂ ನೆನಪಿಲ್ಲ ಎಂದು ಮೊದಲಿಗೆ ಹೇಳಿದರು. ಆನಂತರ, ನಾನು ಸ್ನಾನದ ಕೋಣೆಯಲ್ಲಿದ್ದಾಗ ಬಿಜೆಪಿ ನಾಯಕರು ಹಣ ಇಟ್ಟು ಹೋಗಿದ್ದರು. ಯಾರ್‍ಯಾರು ಬಂದಿದ್ದರು ಎಂದು ಗೊತ್ತಿಲ್ಲ’ ಎಂದರು. ಮಾಧ್ಯಮಗಳ ಮುಂದೆ ನೀಡಿದ
ಹೇಳಿಕೆ ಬಗ್ಗೆ ತನಿಖಾಧಿಕಾರಿಗಳು ಪ್ರಶ್ನಿಸಿದಾಗ, ‘ನನಗೆ ನೆನಪಿಲ್ಲ. ಸ್ವಲ್ಪ ಕಾಲಾವಕಾಶ ಕೊಡಿ, ಮತ್ತೊಮ್ಮೆ ಬಂದು ಹೇಳುತ್ತೇನೆ’
ಎಂದು ಮನವಿ ಮಾಡಿದರು.

ADVERTISEMENT

‘ಮಾಧ್ಯಮಗಳ ಮುಂದೆ ಹೇಳಿಕೆ ಕೊಟ್ಟು ತೊಂದರೆಗೆ ಸಿಕ್ಕಿಕೊಂಡಿದ್ದೇನೆ. ಈ ಸಂದಿಗ್ಧತೆಯಿಂದ ಪಾರುಮಾಡಿ’ ಎಂದು ಅವರು ಪರಿಪರಿಯಾಗಿ ಬೇಡಿಕೊಂಡರು. ಶಾಸಕರ ವರ್ತನೆ ಒಂದು ರೀತಿ ಮನೆರಂಜನೆ ನೀಡಿತು’ ಎಂದು ಮೂಲಗಳು ಹೇಳಿವೆ.

ಆರೋಪವೇನು?:‘ಶಾಸಕ ಸ್ಥಾನಕ್ಕೆ ನನ್ನಿಂದ ರಾಜೀನಾಮೆ ಕೊಡಿಸಿ, ಬಿಜೆಪಿಗೆ ಸೇರಿಸಿಕೊಳ್ಳಲು ಬಿಜೆಪಿ ಶಾಸಕರಾದ ಅಶ್ವತ್ಥ ನಾರಾಯಣ, ಎಸ್‌. ಆರ್‌. ವಿಶ್ವನಾಥ, ಮಾಜಿ ಶಾಸಕ ಸಿ.ಪಿ.ಯೋಗೀಶ್ವರ ಅವರು ₹5 ಕೋಟಿ ಮುಂಗಡ ನೀಡಿದ್ದರು’ ಎಂದು ಶ್ರೀನಿವಾಸಗೌಡ ಮಾಧ್ಯಮ ಪ್ರತಿನಿಧಿಗಳ ಮುಂದೆ ಆರೋಪಿಸಿದ್ದರು.

ಮನೆಯಲ್ಲಿದ್ದ ಹಣವನ್ನು ಎರಡು ತಿಂಗಳ ಬಳಿಕ ಹಿಂತಿರುಗಿಸಿದ್ದೆ ಎಂದಿದ್ದರು. ಈ ಹೇಳಿಕೆ ಆಧರಿಸಿ ಸಾಮಾಜಿಕ ಕಾರ್ಯಕರ್ತರಾದ ಹನುಮೇಗೌಡ, ಪ್ರಶಾಂತ್‌, ಭ್ರಷ್ಟಾಚಾರ ಮುಕ್ತ ಕರ್ನಾಟಕ ವೇದಿಕೆ ಅಧ್ಯಕ್ಷ ರವಿಕೃಷ್ಣರೆಡ್ಡಿ ಎಸಿಬಿಗೆ ದೂರು ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.