ADVERTISEMENT

ಪತ್ತೆಯಾಗದ ಇನ್‌ಸ್ಪೆಕ್ಟರ್‌ ಯಶವಂತ್‌

ರಿವಾಲ್ವರ್‌, ಠಾಣಾ ಡೈರಿ ಸಮೇತ ಪರಾರಿಯಾಗಿರುವ ಅಧಿಕಾರಿ

​ಪ್ರಜಾವಾಣಿ ವಾರ್ತೆ
Published 10 ಜನವರಿ 2021, 20:44 IST
Last Updated 10 ಜನವರಿ 2021, 20:44 IST

ಬೆಂಗಳೂರು: ಜಮೀನು ಖರೀದಿದಾರನಿಗೆ ರಕ್ಷಣೆ ನೀಡಲು ₹ 6 ಲಕ್ಷ ಲಂಚ ಪಡೆದ ಪ್ರಕರಣದಲ್ಲಿ ಭ್ರಷ್ಟಾಚಾರ ನಿಗ್ರಹ ದಳದ
(ಎಸಿಬಿ) ಕಾರ್ಯಾಚರಣೆ ವೇಳೆ ತಪ್ಪಿಸಿಕೊಂಡು ಪರಾರಿಯಾಗಿರುವ ಚಿಕ್ಕಜಾಲ ಠಾಣೆ ಇನ್‌ಸ್ಪೆಕ್ಟರ್‌ ಯಶವಂತ ಮೂರು ದಿನಗಳಾದರೂ ಪತ್ತೆಯಾಗಿಲ್ಲ. ಆರೋಪಿ ಅಧಿಕಾರಿಗಾಗಿ ಎಸಿಬಿ ಶೋಧ ಮುಂದುವರಿಸಿದೆ.

ಚಿಕ್ಕಜಾಲ ಹೋಬಳಿಯಲ್ಲಿ 5 ಎಕರೆ ಜಮೀನು ಖರೀದಿಸಿದ್ದ ವ್ಯಕ್ತಿಯೊಬ್ಬರ ಹೆಸರಿಗೆ ಮ್ಯುಟೇಷನ್‌ ಬದಲಾವಣೆ ಮಾಡಲು
ಕಂದಾಯ ನಿರೀಕ್ಷಕ ₹ 50 ಲಕ್ಷ ಲಂಚಕ್ಕೆ ಬೇಡಿಕೆ ಇಟ್ಟಿದ್ದರೆ, ರಕ್ಷಣೆ ನೀಡಲು ಪೊಲೀಸರು ₹ 10 ಲಕ್ಷ ಲಂಚ ಕೇಳಿದ್ದರು. ಮೊದಲ ಕಂತಿನ ₹ 5 ಲಕ್ಷ ಪಡೆಯುತ್ತಿದ್ದ ಕಂದಾಯ ನಿರೀಕ್ಷಕನನ್ನು ಗುರುವಾರ ಬಂಧಿಸಲಾಗಿತ್ತು. ಇನ್‌ಸ್ಪೆಕ್ಟರ್‌ ಯಶವಂತ ಪರವಾಗಿ ₹ 6 ಲಕ್ಷ ಪಡೆದಿದ್ದ ಹೆಡ್‌ ಕಾನ್‌ಸ್ಟೆಬಲ್‌ ರಾಜು ಎಂಬುವವರನ್ನು ಅದೇ ದಿನ ರಾತ್ರಿ ಬಂಧಿಸಲಾಗಿದೆ.

ಎಸಿಬಿ ಅಧಿಕಾರಿಗಳ ಕಾರ್ಯಾಚರಣೆ ಸಮಯದಲ್ಲಿ ಯಶವಂತ ಠಾಣೆಯಿಂದ ಹೊರಗಿದ್ದರು. ಹೆಡ್‌ ಕಾನ್‌ಸ್ಟೆಬಲ್‌ ಬಂಧನದ ಸುದ್ದಿ ತಿಳಿದ ಬಳಿಕ ಇನ್‌ಸ್ಪೆಕ್ಟರ್‌ ಕೂಡ ಬಂಧನದ ಭೀತಿಯಿಂದ ಪರಾರಿಯಾಗಿದ್ದಾರೆ. ಇಲಾಖೆಯಿಂದ ನೀಡಿದ್ದ ರಿವಾಲ್ವರ್‌, ಚಿಕ್ಕಜಾಲ ಠಾಣೆಯ ಡೈರಿ ಸೇರಿದಂತೆ ಕರ್ತವ್ಯಕ್ಕೆ ಸಂಬಂಧಿಸಿದ ಕೆಲವು ವಸ್ತುಗಳನ್ನೂ ತಮ್ಮೊಂದಿಗೆ ಕೊಂಡೊಯ್ದಿರುವ ಅಧಿಕಾರಿ, ಮೊಬೈಲ್‌ ಫೋನ್‌ ಸ್ವಿಚ್‌ ಆಫ್‌ ಮಾಡಿಕೊಂಡು ತಲೆಮರೆಸಿಕೊಂಡಿದ್ದಾರೆ.

ADVERTISEMENT

‘ಇನ್‌ಸ್ಪೆಕ್ಟರ್‌ ಯಶವಂತ ಅವರ ಪತ್ತೆಗಾಗಿ ಮೂರು ದಿನಗಳಿಂದ ನಿರಂತರವಾಗಿ ಶೋಧ ನಡೆಸಲಾಗುತ್ತಿದೆ. ಆರೋಪಿಯನ್ನು ಪತ್ತೆಮಾಡಲು ಎಸಿಬಿ ಅಧಿಕಾರಿಗಳು ಹಲವು ತಂಡಗಳಲ್ಲಿ ಸತತ ಕಾರ್ಯಾಚರಣೆ ನಡೆಸುತ್ತಿದ್ದಾರೆ’ ಎಂದು ಎಸಿಬಿ ಮೂಲಗಳು ತಿಳಿಸಿವೆ.

ಮುಖ್ಯಸ್ಥರಿಲ್ಲದ ಠಾಣೆ: ನಾಪತ್ತೆಯಾಗಿರುವ ಯಶವಂತ ಅವರು ಕರ್ತವ್ಯಕ್ಕೆ ಗೈರಾಗುತ್ತಿರುವ ಕುರಿತು ಈವರೆಗೆ ಹಿರಿಯ ಅಧಿಕಾರಿಗಳಿಗೆ ಯಾವುದೇ ಮಾಹಿತಿ ನೀಡಿಲ್ಲ. ರಿವಾಲ್ವರ್‌, ಡೈರಿ ಸೇರಿದಂತೆ ಇಲಾಖೆಯ ಸ್ವತ್ತುಗಳನ್ನೂ ಹಿಂದಿರುಗಿಸಿಲ್ಲ. ಎಸಿಬಿ ಕಡೆಯಿಂದಲೂ ಅಧಿಕಾರಿಯ ವಿರುದ್ಧ ಕ್ರಮಕ್ಕೆ ಇನ್ನೂ ಶಿಫಾರಸು ರವಾನೆಯಾಗಿಲ್ಲ. ಈ ಕಾರಣದಿಂದ ಚಿಕ್ಕಜಾಲ ಠಾಣೆಯ ಉಸ್ತುವಾರಿಯಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ. ಪರಿಣಾಮವಾಗಿ ಮೂರು ದಿನಗಳಿಂದ ಪೊಲೀಸ್‌ ಠಾಣೆಗೆ ಮುಖ್ಯಸ್ಥರೇ ಇಲ್ಲದ ಪರಿಸ್ಥಿತಿ ನಿರ್ಮಾಣವಾಗಿದೆ.

‘ಎಸಿಬಿ ವರದಿ ಬಂದರೆ ಆರೋಪಿ ವಿರುದ್ಧ ಕ್ರಮ ಜರುಗಿಸಲಾಗುತ್ತದೆ. ಆ ಬಳಿಕವೇ ಠಾಣೆಗೆ ಹೊಸ ಇನ್‌ಸ್ಪೆಕ್ಟರ್‌ ನಿಯೋಜನೆ ಮಾಡಲಾಗುತ್ತದೆ. ಈವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ’ ಎಂದು ಹಿರಿಯ ಪೊಲೀಸ್‌ ಅಧಿಕಾರಿಯೊಬ್ಬರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.